ಚುನಾವಣಾ ಕಾರಣಕ್ಕೆ ಈ ಬಾರಿ ಕೇಂದ್ರ ಸರ್ಕಾರದ ಫೋಕಸ್ ಇರೋದು ಈ ಐದು ಅಂಶಗಳ ಸುತ್ತ

ಚುನಾವಣಾ ಕಾರಣಕ್ಕೆ ಈ ಬಾರಿ ಕೇಂದ್ರ ಸರ್ಕಾರದ ಫೋಕಸ್ ಇರೋದು ಈ ಐದು ಅಂಶಗಳ ಸುತ್ತ

ನವದೆಹಲಿ, ಜನವರಿ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರ ಗುರುವಾರ 2024-25ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. ಈ ಮಧ್ಯಂತರ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ. ಇದೆ ಜೊತೆಗೆ ಕೇಂದ್ರ ಸರ್ಕಾರ ಕೂಡ ಕೆಲವು ಅಂಶಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ. ಅದರಲ್ಲಿ ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗಕ್ಕೆ ಪಾತಿನಿಧ್ಯ ನೀಡಲು ಸಿದ್ಧತೆ ನಡೆಯುತ್ತಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ಇರುವ ಕಾರಣ ಚುನಾವಣಾ ದೃಷ್ಠಿಯಿಂದಲೂ ಈ ಬಾರಿಯ ಬಜೆಟ್ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಚುನಾವಣಾ ಪೂರ್ವ ಬಜೆಟ್, ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗದವರನ್ನು ಒಳಗೊಂಡಿರುವ ಸಮಾಜದ ಐದು ಪ್ರಮುಖ ವರ್ಗಗಳ ಕಲ್ಯಾಣ ಯೋಜನೆಗಳ ಸುತ್ತ ಕೇಂದ್ರೀಕರಿಸಲಿದೆ.

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೂರನೇ ಅವಧಿಗೆ ಅಧಿಕಾರದ ಗದ್ದುಗೆಯನ್ನು ಏರುವ ಗುರಿ ಹೊಂದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಅಂತರ್ಗತ ಬೆಳವಣಿಗೆಗೂ ಬದ್ಧವಾಗಿದೆ. ಇದೇ ಕಾರಣಕ್ಕೆ ಈ ಸಾಮಾಜಿಕ ಅಂಶಗಳನ್ನು ಗುರಿಯಾಗಿಸಿಕೊಂಡು ಅಸ್ತಿತ್ವದಲ್ಲಿರುವ ಯೋಜನೆಗಳ ಹಂಚಿಕೆಗಳನ್ನು ಹೆಚ್ಚು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. “ಸಮಾಜದ ಈ ವರ್ಗಗಳಿಗಾಗಿ ಮಾಡಲಾದ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಉದಾಹರಣೆಗೆ, ಯುವಜನರ ಆಕಾಂಕ್ಷೆಗಳನ್ನು ಪರಿಹರಿಸುವ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯತ್ತ ವಿಶೇಷ ಗಮನ ಹರಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ. ಕೇಂದ್ರ ಬಜೆಟ್ 2024: ಪ್ರಮುಖ ಕಲ್ಯಾಣ ಯೋಜನೆಗಳು 2023-24 ರ ಆರ್ಥಿಕ ವರ್ಷಕ್ಕೆ 1.12 ಲಕ್ಷ ಕೋಟಿಗಿಂತ ಹೆಚ್ಚಿನ ಬಜೆಟ್ ಹಂಚಿಕೆಯಾಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ಉನ್ನತ ಶಿಕ್ಷಣವನ್ನು ನಿರ್ವಹಿಸುವ ಎರಡು ಇಲಾಖೆಗಳು ಹೈಲೈಟ್ ಆಗಿವೆ. ಫೆಬ್ರವರಿ 1 ರಂದು ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವುದು ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಪೂರಕವಾಗಿರಲಿದೆ.

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯು ಮಹಿಳಾ ಮತದಾರರ ಮಹತ್ವವನ್ನು ಒತ್ತಿಹೇಳಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಮಹಿಳೆಯರಿಗಾಗಿ ಯೋಜನೆಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ವಿಶೇಷ ಕೊಡುಗಡೆಗಳನ್ನು ನಿರೀಕ್ಷಿಸಲಾಗಿದೆ. 2023-24ರಲ್ಲಿ, ಬುಡಕಟ್ಟು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುವ ಬುಡಕಟ್ಟು ಅಭಿವೃದ್ಧಿ ಸಚಿವಾಲಯವು ಹಂಚಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡಿತು. ಇದೇ 2024-25ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಕಾರ್ಯಕ್ರಮ. ಇದು ವಸತಿ ವ್ಯವಸ್ಥೆಯಲ್ಲಿ ಆರರಿಂದ ಹನ್ನೊಂದನೇ ತರಗತಿವರೆಗಿನ ಪರಿಶಿಷ್ಟ ಪಂಗಡದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುತ್ತದೆ. ಜೊತೆಗೆ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯಂತಹ ಯೋಜನೆಗಳ ಮೂಲಕ ಬುಡಕಟ್ಟು ಕಲ್ಯಾಣಕ್ಕೆ ಹಣ ಒದಗಿಸಲಿದೆ.

ಇದಲ್ಲದೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸಾಮಾಜಿಕ ವರ್ಗಾವಣೆಯಲ್ಲಿ 33% ಹೆಚ್ಚಳದಿಂದ ರೈತರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಯೋಜನೆಯು 2023-24ರಲ್ಲಿ 60,000 ಕೋಟಿಗಳನ್ನು ನಿಗದಿಪಡಿಸುವುದರೊಂದಿಗೆ, ಮುಂಬರುವ ಆರ್ಥಿಕ ವರ್ಷದಲ್ಲಿ ಪ್ರಮಾಣಾನುಗುಣ ಹೆಚ್ಚಳ ನಿರೀಕ್ಷಿಸಲಾಗಿದೆ.

Previous Post
ರಾಜಕೀಯಕ್ಕಾಗಿ ಗಾಂಧೀಜಿ ಅವರ ಶಾಂತಿ ಮಂತ್ರ ಕದಡುವ ಯತ್ನ: ಡಿಸಿಎಂ ಡಿ.ಕೆ.ಶಿವಕುಮಾರ್
Next Post
ಚೀನಾ ಸೇನೆ ಹಿಮ್ಮೆಟ್ಟಿದ ಭಾರತದ ಕುರಿಗಾಹಿಗಳು

Recent News