ಚುನಾವಣೆಯಲ್ಲಿ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು: ಕೇಜ್ರಿವಾಲ್

ಚುನಾವಣೆಯಲ್ಲಿ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು: ಕೇಜ್ರಿವಾಲ್

ನವದೆಹಲಿ, ಫೆ. 2: ‘ಚಂಡೀಗಢ ಮೇಯರ್ ಚುನಾವಣೆಯನ್ನು ಅವರಿಗೆ ‘ರಿಗ್’ ಮಾಡಲು ಸಾಧ್ಯವಾದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗರು ಯಾವುದೇ ಹಂತಕ್ಕೆ ಹೋಗಬಹುದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಚಂಡೀಗಢ ಮೇಯರ್ ಚುನಾವಣೆಯಲ್ಲಿ ವಿಶ್ವದ ಅತಿ ದೊಡ್ಡ ಪಕ್ಷ ಮತಗಳನ್ನು ಕದಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ’ ಎಂದು ಕಿಡಿಕಾರಿದರು.

ಚಂಡೀಗಢ ಮುನಿಸಿಪಲ್ ಕಾರ್ಪೊರೇಷನ್ ಮೇಯರ್, ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಮಂಗಳವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್-ಎಎಪಿ ಮೈತ್ರಿಕೂಟವನ್ನು ಸೋಲಿಸಿ ಬಿಜೆಪಿ ಗೆದ್ದಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ರಿಗ್ ಮಾಡುತ್ತಿರುವ ಬಗ್ಗೆ ನಾವು ಕೇಳಿದ್ದೇವೆ. ಅವರು ಇವಿಎಂಗಳನ್ನು ಟ್ಯಾಂಪರ್ ಮಾಡಿ ಮತಗಳನ್ನು ಪಡೆಯುತ್ತಾರೆ. ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಅಳಿಸಲಾಗಿದೆ. ಆದರೆ, ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಅವರು ಚಂಡೀಗಢದಲ್ಲಿ ಮತಗಳನ್ನು ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು’ ಎಂದು ಅವರು ಆರೋಪಿಸಿದರು.

‘ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಇಂತಹ ಅಕ್ರಮಗಳನ್ನು ಎಸಗಿದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅವರು ಏನು ಮಾಡುತ್ತಾರೆ? ಅವರು ಅಧಿಕಾರಕ್ಕಾಗಿ ದೇಶವನ್ನು ಮಾರಬಹುದು. ಆದರೆ ಅದನ್ನು ಮಾಡಲು ನಾವು ಬಿಡುವುದಿಲ್ಲ. ನಾವು ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಬೇಕಾಗಿದೆ’ ಅವರು ಹೇಳಿದರು. ಪ್ರತಿಭಟನೆಗೆ ಸೇರದಂತೆ ಹೆಚ್ಚಿನ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಡಿಡಿಯು ಮಾರ್ಗದ ನೂರು ಮೀಟರ್ ದೂರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಯೋಜಿಸಲಾಗಿತ್ತು. ಆದರೆ, ಭಾರೀ ಪೊಲೀಸ್ ನಿಯೋಜನೆ ಮತ್ತು ಬ್ಯಾರಿಕೇಡಿಂಗ್‌ನಿಂದಾಗಿ ಎಎಪಿ ಕಾರ್ಯಕರ್ತರು ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ.

Previous Post
5 ದಿನ ಇಡಿ ವಶಕ್ಕೆ ಮಾಜಿ ಸಿಎಂ ಹೇಮಂತ್ ಸೊರೇನ್
Next Post
ಜ್ಞಾನವಾಪಿ ಪ್ರಕರಣ: ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ

Recent News