ಜಸ್ಪ್ರೀತ್ ಬುಮ್ರಾ; ಕಠಿಣ ಕ್ರಮ ಕೈಗೊಂಡ ಐಸಿಸಿ

ಜಸ್ಪ್ರೀತ್ ಬುಮ್ರಾ; ಕಠಿಣ ಕ್ರಮ ಕೈಗೊಂಡ ಐಸಿಸಿ

ಮುಂಬೈ, ಜ. 29: ಹೈದರಾಬಾದ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಸೋಲು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ತಜ್ಞರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸೋಲಿನ ನಂತರವೂ ಟೀಂ ಇಂಡಿಯಾದ ಆಟಗಾರರು ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಸದ್ಯ, ಸ್ಟಾರ್ ವೇಗದ ಬೌಲರ್ ಮತ್ತು ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ತಾನು ಮಾಡಿದ ತಪ್ಪಿನಿಂದಾಗಿ ಐಸಿಸಿಯಿಂದ ಶಿಕ್ಷೆಗೆ ಗುರಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಅಧಿಕೃತವಾಗಿ ವಾಗ್ದಂಡನೆಗೆ ಗುರಿಪಡಿಸಲಾಗಿದೆ. ಅಲ್ಲದೆ ನಿಯಮ ಉಲ್ಲಂಘಿಸಿದಕ್ಕಾಗಿ ಶಿಕ್ಷೆಯಾಗಿ ಬುಮ್ರಾ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಪಂದ್ಯ ಶುಲ್ಕವನ್ನು 50% ರಷ್ಟು ದಂಡವಾಗಿ ವಿಧಿಸಿದೆ. ಆಟಗಾರ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಜಸ್ಪ್ರೀತ್ ಬುಮ್ರಾ ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಅವರ ವಿರುದ್ಧ ಐಸಿಸಿ ಕ್ರಮಕೈಗೊಂಡಿದೆ.

ವಾಸ್ತವವಾಗಿ ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 81ನೇ ಓವರ್‌ ಬೌಲ್ ಮಾಡುವ ಜವಬ್ದಾರಿಯನ್ನು ಜಸ್ಪ್ರೀತ್ ಬುಮ್ರಾ ವಹಿಸಿಕೊಂಡಿದ್ದರು. ಈ ವೇಳೆ ಇಂಗ್ಲೆಂಡ್ ಬ್ಯಾಟರ್ ಓಲಿ ಪೋಪ್ ರನ್​ಗಾಗಿ ಓಡುವಾಗ ಬುಮ್ರಾ, ಪೋಪ್ ದಾರಿಗೆ ಅಡ್ಡ ಬಂದಿದ್ದರು. ಹಾಗೆಯೇ ಅವರು ರನ್​ಗಾಗಿ ಓಡುವುದಕ್ಕೆ ಅಡಚಣೆಯನ್ನುಂಟು ಮಾಡಿದ್ದರು.ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಐಸಿಸಿ ನಿಯಮಗಳಡಿಯಲ್ಲಿ ಬುಮ್ರಾಗೆ ಶಿಕ್ಷೆ ವಿಧಿಸಲಾಗಿದೆ. ಇದು 24 ತಿಂಗಳಲ್ಲಿ ಬುಮ್ರಾ ಮಾಡಿದ ಮೊದಲ ತಪ್ಪು. ಹೀಗಾಗಿ ಅವರ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ.

ಬುಮ್ರಾ ವಿರುದ್ಧ ಈ ಆರೋಪವನ್ನು ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ರೈಫೆಲ್ ಮತ್ತು ಕ್ರಿಸ್ ಗಫ್ನಿ, ಮೂರನೇ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಮಾಡಿದ್ದರು. ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗೆ ಸಾಮಾನ್ಯವಾಗಿ ಅಧಿಕೃತ ವಾಗ್ದಂಡನೆ ಹಾಗೂ ಆಟಗಾರನ ಪಂದ್ಯ ಶುಲ್ಕದ 50 ಪ್ರತಿಶತವನ್ನು ದಂಡವಾಗಿ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ತಾನು ಮಾಡಿದ ತಪ್ಪನ್ನು ಬುಮ್ರಾ ಒಪ್ಪಿಕೊಂಡಿದ್ದು, ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ರಿಚಿ ರಿಚರ್ಡ್ಸನ್ ಅವರು ವಿಧಿಸಿದ ದಂಡವನ್ನು ಸಹ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

Previous Post
ಕಾಡಿನ ಬೆಂಕಿ ಪತ್ತೆಗೆ ದೂರಸಂವೇದಿ ತಂತ್ರಜ್ಞಾನದ ಬಳಕೆ ಕಾಡ್ಗಿಚ್ಚು ನಿಗ್ರಹಕ್ಕೆ ಕಟ್ಟೆಚ್ಚರ ವಹಿಸಲು ಈಶ್ವರ ಖಂಡ್ರೆ ಸೂಚನೆ
Next Post
ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಗುಡುಗು

Recent News