ಜಾತಿವಾರು ಜನಸಂಖ್ಯೆ, ತೆರಿಗೆ ಪಾವತಿ ಮಾಹಿತಿ ಬಹಿರಂಗಪಡಿಸಿ: ರಾಹುಲ್‌ ಗಾಂಧಿ

ಜಾತಿವಾರು ಜನಸಂಖ್ಯೆ, ತೆರಿಗೆ ಪಾವತಿ ಮಾಹಿತಿ ಬಹಿರಂಗಪಡಿಸಿ: ರಾಹುಲ್‌ ಗಾಂಧಿ

ರಾಂಚಿ, ಫೆ. 6: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಮಂಗಳವಾರ ಜಾರ್ಖಂಡ್‌ನಿಂದ ಒಡಿಶಾಗೆ ಪ್ರವೇಶಿಸಿದೆ. ಬೆಳಗ್ಗೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯಿಂದ ಯಾತ್ರೆಯನ್ನು ಪುನರಾರಂಭಿಸುವ ಮೊದಲು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಡಕಟ್ಟು ಜನಾಂಗದ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಯಾತ್ರೆಯ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ಜಾತಿವಾರು ಜನಸಂಖ್ಯೆ ಮತ್ತು ತೆರಿಗೆ ಪಾವತಿ ಕುರಿತಾದ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಹೀದ್ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ INDIA ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಬುಡಕಟ್ಟು ಜನಾಂಗದವರಾಗಿರುವುದರಿಂದ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ-ಆರೆಸ್ಸೆಸ್‌ನ ಪಿತೂರಿಯನ್ನು ಮೆಟ್ಟಿ ಬಡವರ ಸರ್ಕಾರವನ್ನು ರಕ್ಷಿಸಿದಕ್ಕೆ ಎಲ್ಲಾ ಮೈತ್ರಿ ಶಾಸಕರಿಗೆ ಮತ್ತು ಚಂಪೈ ಸೊರೆನ್ ಜಿ ಅವರಿಗೆ ಅಭಿನಂದಿಸಲು ಬಯಸುತ್ತೇನೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಎಂದು ಹೇಳುತ್ತಿದ್ದರು ಆದರೆ ಜಾತಿ ಗಣತಿಗೆ ಬೇಡಿಕೆ ಬಂದಾಗ ಕೇವಲ ಎರಡು ಜಾತಿಗಳಿವೆ ಅದು ಶ್ರೀಮಂತರು ಮತ್ತು ಬಡವರು ಎಂದು ಹೇಳಿದ್ದಾರೆ. ಒಬಿಸಿ, ದಲಿತರು, ಬುಡಕಟ್ಟು ಜನಾಂಗದವರಿಗೆ ಹಕ್ಕುಗಳ ವಿಚಾರಕ್ಕೆ ಬಂದಾಗ ಮೋದಿಜಿ ಯಾವುದೇ ಜಾತಿಗಳಿಲ್ಲ ಎಂದು ಹೇಳುತ್ತಾರೆ ಮತ್ತು ವೋಟ್‌ ವಿಚಾರಕ್ಕೆ ಬಂದಾಗ ಓಬಿಸಿ ಎಂದು ಹೇಳುತ್ತಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಆದಿವಾಸಿಗಳ ಭೂಮಿಯನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ, ಜಾತಿವಾರು ಜನಸಂಖ್ಯೆ ಎಷ್ಟು ಮತ್ತು ಅವರು ಎಷ್ಟು ತೆರಿಗೆ ಪಾವತಿಸುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮನ್ನು ಮತ್ತು ನಮ್ಮ ಯಾತ್ರೆಯನ್ನು ಬೆಂಬಲಿಸುವ ಮೂಲಕ ನೀವು ಜಾರ್ಖಂಡ್‌ನಲ್ಲಿ ಲಕ್ಷಗಟ್ಟಲೆ ‘ಮೊಹಬತ್ ಕಿ ದುಕಾನ್’ ತೆರೆದಿದ್ದೀರಿ’ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಮಾದ್ಯಮಗಳು ಅದಾನಿಗಾಗಿ ಕೆಲಸ ಮಾಡುತ್ತದೆ. ಅವರು ದಲಿತರ, ಬಡವರ ಕಷ್ಟಗಳನ್ನು ಬಯಲಿಗೆಳೆಯುವುದಿಲ್ಲ, ಅದರ ಬಗ್ಗೆ ಬರೆಯುವುದಿಲ್ಲ, ಮಾತನಾಡುವುದಿಲ್ಲ, ನಿಮ್ಮ ಅಗತ್ಯಗಳ ಬಗ್ಗೆ ಮಾತನಾಡುವುದು ನಮ್ಮ ಗುರಿಯಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಂಗಳವಾರ ಬೆಳಗ್ಗೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯಿಂದ ಪುನರಾರಂಭಗೊಂಡಿದೆ. ಬುಡಕಟ್ಟು ಜನಾಂಗದ ಐಕಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಶಹೀದ್ ಭಗತ್ ಸಿಂಗ್ ಚೌಕ್‌ನಿಂದ ಯಾತ್ರೆ ಪ್ರಾರಂಭವಾಯಿತು.

ಭಾರತ್ ಜೋಡೋ ನ್ಯಾಯ ಯಾತ್ರೆ ಇಂದು ಸುಂದರ್‌ಗಢ್ ಜಿಲ್ಲೆಯ ಸಣ್ಣ ಕೈಗಾರಿಕಾ ಪಟ್ಟಣವಾದ ಬೀರಮಿತ್ರಪುರ ಮೂಲಕ ಒಡಿಶಾವನ್ನು ಪ್ರವೇಶಿಸಲಿದೆ. ಬಿರಾಮಿತ್ರಪುರ ವಿಧಾನಸಭಾ ಸ್ಥಾನವನ್ನು ಈಗ ಬಿಜೆಪಿ ಪ್ರತಿನಿಧಿಸುತ್ತದೆಯಾದರೂ, ಮೊದಲು ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಜನವರಿ 14ರಂದು ಮಣಿಪುರದಲ್ಲಿ ಆರಂಭವಾದ ಭಾರತ್‌ ಜೋಡೋ ನ್ಯಾಯ ಯಾತ್ರೆ ಸುಮಾರು 15 ರಾಜ್ಯಗಳಲ್ಲಿ ಸಾಗಿ ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

Previous Post
ಜ್ಞಾನವಾಪಿ ವಿವಾದ: ಫೆ.15ಕ್ಕೆ ವಿಚಾರಣೆ
Next Post
ಕಾಳ್ಗಿಚ್ಚಿಗೆ 120ಕ್ಕೂ ಹೆಚ್ಚು ಜನ ಬಲಿ

Recent News