ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ ನ್ಯೂಸ್‌ಕ್ಲಿಕ್‌ ಎಚ್ಆರ್ ಚಕ್ರವರ್ತಿ

ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ ನ್ಯೂಸ್‌ಕ್ಲಿಕ್‌ ಎಚ್ಆರ್ ಚಕ್ರವರ್ತಿ

ನವದೆಹಲಿ, ಫೆ. 8: ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ(ಎಚ್‌ಆರ್‌) ಅಮಿತ್ ಚಕ್ರವರ್ತಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯಡಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಸ್ಟಿಸ್ ಸ್ವರಣಾ ಕಾಂತ ಶರ್ಮಾ ಅವರ ಏಕಸದಸ್ಯ ಪೀಠಕ್ಕೆ ಚಕ್ರವರ್ತಿ ಪರ ವಕೀಲರು ತಮ್ಮ ಕಕ್ಷಿದಾರರು ಈಗಾಗಲೇ ಪ್ರಕರಣದಲ್ಲಿ ಅಕ್ಟೋಬರ್ 3, 2023ರಿಂದ ಕಸ್ಟಡಿಯಲ್ಲಿದ್ದಾರೆ. ಅವರಿಗೆ ಸೆಷನ್ಸ್ ನ್ಯಾಯಾಲಯದಿಂದ ಕ್ಷಮೆ ನೀಡಲಾಗಿದೆ. ವಿಷಯವು ಇನ್ನೂ ತನಿಖಾ ಹಂತದಲ್ಲಿದೆ ಮತ್ತು ಇನ್ನೂ ಯಾವುದೇ ಆರೋಪಪಟ್ಟಿ ಸಲ್ಲಿಸಲಾಗಿಲ್ಲ. ಅವರು ತನಿಖಾ ಸಂಸ್ಥೆ ಜೊತೆ ಸಹಕರಿಸುತ್ತಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.

ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲರು ಚಕ್ರವರ್ತಿಗೆ ಜಾಮೀನು ನೀಡಿದರೆ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ನ್ಯಾಯಮೂರ್ತಿ ಶರ್ಮಾ ಅವರು ಹೇಳಿದ್ದಾರೆ. ಚಕ್ರವರ್ತಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ದೆಹಲಿ ಪೊಲೀಸರಿಗೆ ಮಾಹಿತಿಯನ್ನು ಬಹಿರಂಗಪಡಿಸಲು ಇಚ್ಛೆ ವ್ಯಕ್ತಪಡಿಸಿದ್ದರು. ಪಟಿಯಾಲ ಹೌಸ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಇದಕ್ಕೆ ಅವಕಾಶ ಮಾಡಿಕೊಟ್ಟರು ಮತ್ತು ಕಳೆದ ತಿಂಗಳು ಈ ವಿಷಯದಲ್ಲಿ ಅವರಿಗೆ ಕ್ಷಮಾದಾನವನ್ನೂ ನೀಡಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ, ದೆಹಲಿ ಪೊಲೀಸ್ ವಿಶೇಷ ಕೋಶವು ನ್ಯೂಸ್‌ಕ್ಲಿಕ್ ಸಂಸ್ಥಾಪಕ-ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಹೆಚ್‌ ಆರ್‌ ಅಮಿತ್ ಚಕ್ರವರ್ತಿ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇಬ್ಬರನ್ನೂ ಅಕ್ಟೋಬರ್ 2023ರಲ್ಲಿ ಬಂಧಿಸಲಾಗಿತ್ತು. ನ್ಯೂಸ್‌ ಕ್ಲಿಕ್‌ ಸುದ್ದಿ ಪೋರ್ಟಲ್, ಅದರ ಸಿಬ್ಬಂದಿಗಳು, ಪೋಷಕರಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಅ.3 ರಂದು ದೆಹಲಿ ಪೊಲೀಸರು ನ್ಯೂಸ್‌ ಕ್ಲಿಕ್‌ ಪೋರ್ಟಲ್‌ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಹೆಚ್‌ಆರ್(HR) ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದ್ದರು. ನ್ಯೂಸ್‌ಕ್ಲಿಕ್ ಕಚೇರಿ ಮತ್ತು ಸಂಸ್ಥೆಗೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳಿಂದ 300ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು. 46 ಅನುಮಾನಿತರನ್ನು ವಿಚಾರಣೆ ನಡೆಸಿದ್ದರು. ಅಕ್ಟೋಬರ್ 13, 2023ರಂದು ಯುಎಪಿಎ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿದ್ದ ಇಬ್ಬರ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಅ.4 ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ದೆಹಲಿ ಪೊಲೀಸರು ಸಲ್ಲಿಸಿದ ಮಾಹಿತಿ ಪ್ರಕಾರ, ನೆವಿಲ್ಲೆ ರಾಯ್ ಸಿಂಗಮ್, ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರಸ್ಪರ ನೇರ ಸಂಪರ್ಕದಲ್ಲಿದ್ದರು ಮತ್ತು ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ಹೇಗೆ ರಚಿಸುವುದು ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ತೋರಿಸುವುದು ಹೇಗೆ ಎಂದು ಇವರು ಚರ್ಚಿಸುತ್ತಿರುವುದು ಕಂಡುಬಂದಿದೆ. ಈ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಹೆಸರಿನಲ್ಲಿ ಪಿಪಿಕೆ ನ್ಯೂಸ್‌ಕ್ಲಿಕ್, ಜಿಸ್ಪಾನ್ ಇಂಡಿಯಾ, ಜೆಜೆ ಎಂಟರ್‌ಪ್ರೈಸಸ್, ವರ್ಚುನೆಟ್ ಸಿಸ್ಟಮ್ ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

Previous Post
ತೆರಿಗೆ ಪಾಲಿನಲ್ಲಿ ಕೇಂದ್ರದ ಅನ್ಯಾಯ: ದೆಹಲಿಯಲ್ಲಿ ಕೇರಳ ಪ್ರತಿಭಟನೆ
Next Post
ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಪ್ರಗತಿ ಮೈದಾನ ಸುರಂಗ ಮಾರ್ಗ

Recent News