ಜಿಗ್ನೇಶ್ ಮೆವಾನಿ ಸೇರಿ 31 ಜನ ಖುಲಾಸೆ

ಜಿಗ್ನೇಶ್ ಮೆವಾನಿ ಸೇರಿ 31 ಜನ ಖುಲಾಸೆ

ಅಹಮದಾಬಾದ್, ಜ. 16: 2017ರಲ್ಲಿ ಗುಜರಾತ್‌ ಸರ್ಕಾರದ ವಿರುದ್ಧದ ಪ್ರತಿಭಟನೆಯ ವೇಳೆ ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಇತರ 30 ಜನರನ್ನು ಗುಜರಾತ್‌ನ ಮೆಟ್ರೋಪಾಲಿಟನ್ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರ ಪೀಠವು, ಶಾಸಕ, ದಲಿತ ನಾಯಕ ಮೆವಾನಿ ಮತ್ತು ಇತರರನ್ನು ದೋಷಮುಕ್ತಗೊಳಿಸಿದೆ. 2017ರಲ್ಲಿ ಗುಜರಾತ್‌ ಸರಕಾರದ ನೀತಿಗಳ ವಿರುದ್ಧ ‘ರೈಲ್ ರೋಕೋ’ ಪ್ರತಿಭಟನೆ ವೇಳೆ ಮೆವಾನಿ ಮತ್ತು ಇತರರ ವಿರುದ್ಧ ಅಹ್ಮದಾಬಾದ್‌ ರೈಲ್ವೆ ಪೊಲೀಸರು ಕಲುಪುರ್ ರೈಲು ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ರೈಲನ್ನು ತಡೆದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು.

ಜಿಗ್ನೇಶ್ ಮೆವಾನಿ ಮತ್ತು ಇತರ 30 ಜನರ ವಿರುದ್ಧ ಕಾನೂನುಬಾಹಿರ ಸಭೆ, ಗಲಭೆ, ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಡಿಯಲ್ಲಿ ಮತ್ತು ರೈಲ್ವೇ ಕಾಯಿದೆಯ ಸೆಕ್ಷನ್ 153ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 31 ಆರೋಪಿಗಳ ಪೈಕಿ 13 ಮಂದಿ ಮಹಿಳೆಯರಾಗಿದ್ದರು. ಜಿಗ್ನೇಶ್ ಮೆವಾನಿ ಅವರು ವಡ್ಗಾಮ್ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕರಾಗಿದ್ದಾರೆ ಮತ್ತು NGO ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕರಾಗಿದ್ದಾರೆ.

ಅಹ್ಮದಾಬಾದ್‌ನ ಕ್ರಾಸ್‌ರೋಡ್ಸ್‌ನಲ್ಲಿ ಕಾನೂನುಬಾಹಿರ ಸಭೆ, ಗಲಭೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಲ್ಲಿ 2016ರಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಮೆವಾನಿ ಮತ್ತು ಇತರ ಆರು ಮಂದಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಖುಲಾಸೆಗೊಳಿಸಲಾಗಿತ್ತು. ಪೊಲೀಸರ ಅನುಮತಿಯಿಲ್ಲದೆ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ವಿರುದ್ಧ ಪೊಲೀಸ್ ವಾಹನಗಳ ಧ್ವಂಸ, ಮತ್ತು ಗಲಭೆ ಕುರಿತ ಆರೋಪ ಹೊರಿಸಲಾಗಿತ್ತು. ಅವರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ವಚ್ಚತಾ ಕಾರ್ಮಿಕರ ಜೊತೆ ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸುತ್ತಿದ್ದರು.

Previous Post
ಆಂಧ್ರ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಶರ್ಮಿಳಾ ನೇಮಕ
Next Post
INDIA ಮೈತ್ರಿಕೂಟದ ಸ್ಥಿತಿ ಉತ್ತಮವಾಗಿದೆ: ರಾಹುಲ್ ಗಾಂಧಿ

Recent News