ಜೆಡ್ಜ್ ಗಳ ನಡುವೆ ಸಂಘರ್ಷ: ಕಲ್ಕತ್ತಾ ಹೈಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

ಜೆಡ್ಜ್ ಗಳ ನಡುವೆ ಸಂಘರ್ಷ: ಕಲ್ಕತ್ತಾ ಹೈಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

ನವದೆಹಲಿ, ಜ. 27: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ಸೀಟು ಪಡೆಯಲು ನಕಲಿ ಪ್ರಮಾಣಪತ್ರ ಸಲ್ಲಿಕೆ ಮಾಡುತ್ತಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದ ಹಿನ್ನೆಲೆ, ಶನಿವಾರ ವಿಶೇಷ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ, ಹಗರಣಕ್ಕೆ ಸಂಬಂಧಪಟ್ಟಂತೆ ಕಲ್ಕತ್ತಾ ಹೈಕೋರ್ಟ್‌ ನಡೆಸುತ್ತಿದ್ದ ಎಲ್ಲಾ ವಿಚಾರಣೆಗಳಿಗೆ ತಡೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ಮತ್ತು ನ್ಯಾಯಮೂರ್ತಿ ಸೌಮೆನ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದ್ದ ಎಲ್ಲಾ ವಿಚಾರಣೆಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠ ತಡೆ ಹಿಡಿದಿದೆ.

ಸಿಬಿಐ ತನಿಖೆಗೆ ನಿರ್ದೇಶಿಸಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿದ್ದ ಏಕಸದಸ್ಯ ಪೀಠ ನೀಡಿದ ನಿರ್ದೇಶನಕ್ಕೆ ತಡೆ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಪ್ರಕರಣವನ್ನು ತಾನೇ ವಿಚಾರಣೆ ನಡೆಸುವುದಾಗಿ ಮೌಖಿಕವಾಗಿ ತಿಳಿಸಿದ ಸುಪ್ರೀಂ ಕೋರ್ಟ್‌, ವಿಚಾರಣೆಯನ್ನು ಸೋಮವಾರಕ್ಕೆ (ಜನವರಿ 29) ಮುಂಡೂಡಿದೆ.

ಪ್ರಕರಣದ ಹಿನ್ನೆಲೆ : ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಹಾವಳಿ ಪ್ರಶ್ನಿಸಿದ್ದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆ ಎಂಬ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ನ ಎರಡು ನ್ಯಾಯಪೀಠಗಳು ವ್ಯತಿರಿಕ್ತ ನಿಲುವು ತಳೆದಿದ್ದವು. ಸಿಬಿಐ ತನಿಖೆಗೆ ನ್ಯಾ. ಅಭಿಜಿತ್‌ ಗಂಗೋಪಾಧ್ಯಾಯ ಈಚೆಗೆ ಆದೇಶಿಸಿದ್ದರು. ಈ ಆದೇಶಕ್ಕೆ ಅದೇ ದಿನ ವಿಭಾಗೀಯ ಪೀಠ ತಡೆ ನೀಡಿತ್ತು. ಆದರೆ ಅಂದು ಮಧ್ಯಾಹ್ನ ಮತ್ತೆ ವಿಚಾರಣೆ ನಡೆಸಿದ್ದ ನ್ಯಾ. ಅಭಿಜಿತ್‌ ಅವರು ವಿಭಾಗೀಯ ಪೀಠದ ಆದೇಶ ನಿರ್ಲಕ್ಷಿಸಿದರು. ಸಿಬಿಐ ಅಧಿಕಾರಿ ಪ್ರಕರಣದ ದಾಖಲೆಗಳನ್ನು ಪಡೆಯಲು ಅನುಮತಿಸಿದ್ದರು. ಜೊತೆಗೆ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ನ್ಯಾ. ಸೌಮೆನ್‌ ಸೇನ್‌ ಅವರು ‘ರಾಜ್ಯದ ರಾಜಕೀಯ ಪಕ್ಷವೊಂದರ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ಶುಕ್ರವಾರ ನಿರ್ಧರಿಸಿತ್ತು.

Previous Post
ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಮೇಲೆ ದಾಳಿ ಖಂಡಿಸಿ 100 ಪ್ರಗತಿಪರರಿಂದ ಪತ್ರ
Next Post
ನಮ್ಮ ಅಪ್ಪ ಸಂಘಿ ಅಲ್ಲ: ರಜನಿಕಾಂತ್‌ ಪುತ್ರಿ ಐಶ್ವರ್ಯಾ ಹೇಳಿಕೆ

Recent News