ಜ್ಞಾನವಾಪಿ ಪ್ರಕರಣ: ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಜ್ಞಾನವಾಪಿ ಪ್ರಕರಣ: ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಅಲಹಾಬಾದ್, ಫೆ. 2: ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ (ವ್ಯಾಸ್ ತೆಹ್ಖಾನಾ) ಹಿಂದೂಗಳು ಪೂಜೆ ನಡೆಸಲು ಅನುಮತಿ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಆದರೆ, ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ವಾರಾಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಮಸೀದಿಯೊಳಗೆ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ಜನವರಿ 31ರಂದು ಆದೇಶ ನೀಡಿದ್ದರು. ಏಳು ದಿನಗಳೊಳಗೆ ಪೂಜೆಗೆ ಬೇಕಾದ ವ್ಯವಸ್ಥೆ ಮಾಡಿ ಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದರು. ನ್ಯಾಯಾಲಯ ಆದೇಶ ನೀಡಿದ ದಿನದಂದೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿ ಕೊಟ್ಟಿತ್ತು. ಅಂದೇ ಪೂಜೆ ಕೂಡ ಪ್ರಾರಂಭಗೊಂಡಿದೆ.

ವಾರಾಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಗುರುವಾರ ಜ್ಞಾನವಾಪಿ ಮಸೀದಿ ನಿರ್ವಹಣೆ ಮಾಡುವ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ ಅಲಹಾಬಾದ್ ಹೈಕೋರ್ಟ್‌ ಮೊರೆ ಹೋಗಿತ್ತು. ಮಸೀದಿ ಸಮಿತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠವು ಜಿಲ್ಲಾ ಕೋರ್ಟ್‌ ಆದೇಶಕ್ಕೆ ಮದ್ಯಂತರ ತಡೆ ನೀಡಲು ನಿರಾಕರಿಸಿದೆ. ಜಿಲ್ಲಾಧಿಕಾರಿಯನ್ನು ರಿಸೀವರ್ ಆಗಿ ನೇಮಿಸಿರುವ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಜನವರಿ 17 ರ ಆದೇಶವನ್ನು ಮಸೀದಿ ಸಮಿತಿ ಪ್ರಶ್ನಿಸಿಲ್ಲ ಎಂದು ಪೀಠ ಹೇಳಿದೆ.

ತಮ್ಮ ಮೇಲ್ಮನವಿಯನ್ನು ತಿದ್ದುಪಡಿ ಮಾಡಲು ನ್ಯಾಯಾಲಯವು ಫೆಬ್ರವರಿ 6 ರವರೆಗೆ ಮಸೀದಿ ಸಮಿತಿಗೆ ಸಮಯ ನೀಡಿದೆ. ಜ್ಞಾನವಾಪಿ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಅಡ್ವೊಕೇಟ್ ಜನರಲ್‌ಗೆ ಸೂಚಿಸಿದೆ. ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಪೂಜೆಗೆ ಅವಕಾಶ ನೀಡಿರುವ ಆದೇಶದ ವಿರುದ್ಧ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

Previous Post
ಚುನಾವಣೆಯಲ್ಲಿ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು: ಕೇಜ್ರಿವಾಲ್
Next Post
ED ವಿರುದ್ಧ ಸಲ್ಲಿಸಿದ್ದ ಸೊರೇನ್ ಅರ್ಜಿ ವಜಾ

Recent News