ಜ್ಞಾನವಾಪಿ ಪ್ರಕರಣ: ಹಿಂದೂ ಪರ ವಕೀಲನಿಂದ ಎಎಸ್‌ಐ ಸಮೀಕ್ಷೆ ವರದಿ ಬಹಿರಂಗ

ಜ್ಞಾನವಾಪಿ ಪ್ರಕರಣ: ಹಿಂದೂ ಪರ ವಕೀಲನಿಂದ ಎಎಸ್‌ಐ ಸಮೀಕ್ಷೆ ವರದಿ ಬಹಿರಂಗ

ವಾರಣಾಸಿ, ಜ. 26: ವಾರಣಾಸಿಯ ಜ್ಞಾನವಾಪಿ ಮಸೀದಿಯು ದೇವಾಲಯದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ಮಸೀದಿಗೂ ಮುನ್ನ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಹಿಂದೂ ಅರ್ಜಿದಾರರ ಪರ ವಕೀಲ ಹೇಳಿದ್ದಾರೆ. ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ನಡೆಸಿದ ಸಮೀಕ್ಷೆಯ 839 ಪುಟಗಳ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಜೈನ್, ಎಎಸ್‌ಐ ವರದಿಯದ್ದು ಎನ್ನಲಾದ ಆಯ್ದ ಭಾಗಗಳನ್ನು ಓದಿದರು. “ಪುರಾತತ್ವ ಇಲಾಖೆಯು ತನ್ನ ಸಮೀಕ್ಷೆಯಲ್ಲಿ, ಪೂರ್ವ ಅಸ್ತಿತ್ವದಲ್ಲಿರುವ ರಚನೆ ಮತ್ತು ಕಾರಿಡಾರ್ ಪಕ್ಕದಲ್ಲಿನ ಬಾವಿಯನ್ನು ಕಂಡು ಹಿಡಿದಿದೆ. ಸೆಂಟ್ರಲ್ ಚೇಂಬರ್ ಮತ್ತು ಮುಖ್ಯ ದ್ವಾರವು ಮೊದಲೇ ಅಸ್ತಿತ್ವದಲ್ಲಿರುವ ರಚನೆಯನ್ನು ಹೊಂದಿದೆ. ಎಎಸ್‌ಐ ತನ್ನ ಸಮೀಕ್ಷೆಯಲ್ಲಿ ಕಂಬಗಳು ಮತ್ತು ಅವುಗಳ ಮೇಲಿನ ರಚನೆಗಳನ್ನು ಅಧ್ಯಯನ ಮಾಡಿದೆ. ಎಲ್ಲವೂ ದೇವಾಲಯದ ಭಾಗವಾಗಿದೆ ಎಂದು ಉಲ್ಲೇಖಿಸಿದೆ ಎಂದು ಹೇಳಿದರು.

“ಹಿಂದೂ ದೇವಾಲಯದ 34 ಶಾಸನಗಳು ಮಸೀದಿಯ ಆವರಣದಲ್ಲಿ ಕಂಡು ಬಂದಿವೆ. ಶಾಸನಗಳು ದೇವನಾಗರಿ, ತೆಲುಗು ಮತ್ತು ಕನ್ನಡದಲ್ಲಿವೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ದೇವತೆಗಳ ಹೆಸರುಗಳು ಶಾಸನಗಳಲ್ಲಿ ಕಂಡು ಬಂದಿವೆ” ಎಂದಿದ್ದಾರೆ. ಆದಿ ವಿಶ್ವೇಶ್ವರ (ಶಿವ) ಮಂದಿರವನ್ನು ಧ್ವಂಸಗೈದು ಮಸೀದಿ ನಿರ್ಮಿಸಲಾಗಿದೆ ಎಂದು ವಕೀಲ ವಿಷ್ಣು ಜೈನ್ ಹೇಳಿದ್ದಾರೆ. ಮಸೀದಿ ಪರ ಕಾನೂನು ಸಮರ ನಡೆಸುತ್ತಿರುವ ಅಂಜುಮಾನ್ ಇಂತಿಝಾಮಿಯಾ ಮಸೀದಿ ಸಮಿತಿಯ ಜೊತೆ ಕಾರ್ಯದರ್ಶಿ ಎಸ್‌.ಎಂ ಯಾಸೀನ್, ನಾವು ಎಎಸ್‌ಐ ವರದಿಯನ್ನು ಓದಿಲ್ಲ. ವರದಿ ನೋಡಿದ ಬಳಿಕ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ವಾರಣಾಸಿ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಅವರು ಕಳೆದ ವರ್ಷ ಜುಲೈ 21 ರಂದು ಎಎಸ್‌ಐಗೆ ಜ್ಞಾನವಾಪಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಮಾಡಿ, ಮಸೀದಿಯು ಹಳೆಯ ರಚನೆಯ ಮೇಲೆ ನಿಂತಿದೆಯೇ ಎಂದು ನಿರ್ಧರಿಸಲು ಸೂಚಿಸಿದ್ದರು. ಅದರಂತೆ ಸಮೀಕ್ಷೆ ನಡೆಸಿದ ಪುರಾತತ್ವ ಇಲಾಖೆಯು ಒಂದು ತಿಂಗಳ ಹಿಂದೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಕಳೆದ ಬುಧವಾರ, ವಾರಣಾಸಿ ನ್ಯಾಯಾಲಯವು ಎರಡೂ ಕಡೆಯವರಿಗೆ ವರದಿಯನ್ನು ನೀಡುವಂತೆ ಆದೇಶಿಸಿತ್ತು.

Previous Post
ಸೇನಾ ಪಡೆಗಳ ಪರೇಡ್ ಮುನ್ನಡೆಸಿದ ಮಹಿಳೆಯರು
Next Post
ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ, ಶಾಸಕರಿಗೆ ತಲಾ 25 ಕೋಟಿ ಆಮಿಷ: ಎಎಪಿ

Recent News