ತಾಯ್ನಾಡಿಗಾಗಿ ಸಂಗೊಳ್ಳಿ ರಾಯಣ್ಣನ ನಡೆಸಿದ ಹೋರಾಟ ನಮಗೆಲ್ಲಾ ಮಾದರಿ: ಸಿ.ಎಂ.ಸಿದ್ದರಾಮಯ್ಯ

ತಾಯ್ನಾಡಿಗಾಗಿ ಸಂಗೊಳ್ಳಿ ರಾಯಣ್ಣನ ನಡೆಸಿದ ಹೋರಾಟ ನಮಗೆಲ್ಲಾ ಮಾದರಿ: ಸಿ.ಎಂ.ಸಿದ್ದರಾಮಯ್ಯ

ಬ್ರಿಟೀಷರು-ಫ್ರೆಂಚರು-ಮೊಘಲರು ನಮ್ಮ ದೇಶ ಆಳಿದ್ದು ಶೌರ್ಯದಿಂದಲ್ಲ. ನಮ್ಮ ನಮ್ಮನ್ನೇ ಒಡೆದು ಆಳುವ ನೀತಿಯಿಂದ: ಸಿ.ಎಂ.ಸಿದ್ದರಾಮಯ್ಯ

ಇಂದು ಮಹಾನ್ ದೇಶಭಕ್ತರಂತೆ ಫೋಜು ಕೊಡುವವರು ಬ್ರಿಟೀಷರ ವಿರುದ್ಧ ಹೋರಾಡದೆ ಏಕೆ ಹೊಂದಾಣಿಕೆ ಮಾಡಿಕೊಂಡಿದ್ದರು: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಸಂಗೊಳ್ಳಿ ಜ 17 : ಬ್ರಿಟೀಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್. ಆದರೆ ಇಂದು ದೇಶಭಕ್ತರಂತೆ ಫೋಜು ಕೊಡುವವರು ಬ್ರಿಟೀಷರ ವಿರುದ್ಧ ಏಕೆ ಹೋರಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಿಟೀಷರು-ಫ್ರೆಂಚರು-ಮೊಘಲರು ನಮ್ಮ ದೇಶ ಆಳಿದ್ದು ನಮ್ಮ ನಮ್ಮನ್ನೇ ಒಡೆದು ಆಳುವ ನೀತಿಯಿಂದ ಮಾತ್ರ. ಬ್ರಿಟಿಷರ ವಿರುದ್ದ ವಿರೋಚಿತವಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಮೋಸದಿಂದ ಹಿಡಿದು ಕೊಟ್ಟವರು ಕೂಡ ನಮ್ಮವರೇ. ರಾಯಣ್ಣ ದೇಶಭಕ್ತಿಗೆ ಮಾದರಿಯಾದರೆ, ರಾಯಣ್ಣನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟವರು ದೇಶದ್ರೋಹಿಗಳು ಎಂದರು.

ದೇಶಭಕ್ತಿ ಎಂದರೆ ದೇಶದ ಜನರನ್ನು ಪ್ರೀತಿಸುವುದು. ಜಾತಿ-ಧರ್ಮದ ಹೆಸರಲ್ಲಿ ದೇಶದ ಜನರನ್ನೇ ದ್ವೇಷಿಸುವವರು ದೇಶಭಕ್ತರಾಗಿರಲು ಸಾಧ್ಯವೇ ಇಲ್ಲ. ಶರಣಶ್ರೇಷ್ಠ ಬಸವಣ್ಣನವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ಕೂಡ ಜಾತಿ ತಾರತಮ್ಯ ಇಲ್ಲದ ಮನುಷ್ಯ ಪ್ರೇಮವನ್ನು ಸಾರಿದರು ಎಂದು ವಿವರಿಸಿದರು.

ರೈತರು, ಶಿಕ್ಷಕರು, ಸೈನಿಕರು ಈ ದೇಶವನ್ನು ಒಳಗಿನಿಂದ ಮತ್ತು ಹೊರಗಿನಿಂದ ಕಾಯುತ್ತಿರುವ ಸೈನಿಕರು. ಅನ್ನ ಬೆಳೆಯುವ ರೈತ ಕೂಡ ದೇಶ ರಕ್ಷಣೆಯ ಸೈನಿಕ ಇದ್ದ ಹಾಗೆ. ರೈತರ ಏಳಿಗೆಗಾಗಿ ಹಸಿರು ಕ್ರಾಂತಿಯನ್ನು ಈ ದೇಶದಲ್ಲಿ ನಡೆಸಿದ್ದು ಕಾಂಗ್ರೆಸ್ ಪಕ್ಷ ಎಂದರು.

ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15. ಇದೇ ದಿನ ದೇಶಕ್ಕೆ ಸ್ವಾತಂತ್ರ್ಯ ಬಂತು. ರಾಯಣ್ಣ ಹುತಾತ್ಮ ಆಗಿದ್ದು ಜನವರಿ 26. ಇದು ಗಣರಾಜ್ಯೋತ್ಸವ ದಿನ ಎಂದು ಕಾಕತಾಳೀಯವನ್ನು ವಿವರಿಸಿದರು.

ಮನುಷ್ಯ ದ್ವೇಷ ಹರಡಿ, ಮಸೀದಿ ದ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ. ಆ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ. ರಾಯಣ್ಣನ ತ್ಯಾಗ ಬಲಿದಾನಕ್ಕೆ ಚಪ್ಪಾಳೆ ತಟ್ಟೋಣ ಎಂದರು.

ಸಂಗೊಳ್ಳಿರಾಯಣ್ಣನ ದೇಶಭಕ್ತಿ ಮತ್ತು ಹೋರಾಟದ ಛಲ ಹಾಗೂ ತ್ಯಾಗವನ್ನು ಶಾಶ್ವತಗೊಳಿಸುವ ಕಾರಣದಿಂದ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ರಚಿಸಲಾಯಿತು. ಇದರಿಂದ ಇಡೀ ಕ್ಷೇತ್ರ ಹಲವು ದಿಕ್ಕುಗಳಿಂದ ಅಭಿವೃದ್ಧಿ ನಡೆಯುತ್ತಿದೆ. ಇಲ್ಲಿನ ಸೈನಿಕ ಶಾಲೆಗೆ ಶಂಕುಸ್ಥಾಪನೆ ನಾನೇ ನೆರವೇರಿಸಿದ್ದೆ. ಈಗ 250 ಮಕ್ಕಳು ಅಚ್ಚುಕಟ್ಟಾಗಿ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಮಹಂತೇಶ್ ಕೌಜಲಗಿ ಸಜ್ಜನ ಮತ್ತು ಮನುಷ್ಯ ಪ್ರೇಮದ ರಾಜಕಾರಣಿ. ಇಂಥವರು ಹೆಚ್ಚೆಚ್ಚು ರಾಜಕಾರಣಕ್ಕೆ ಬರಬೇಕು. ಮನುಷ್ಯ ದ್ವೇಷಿಗಳು ರಾಜಕಾರಣಕ್ಕೆ ಬರಬಾರದು. ಕೌಜಲಗಿ ಪ್ರತಿನಿಧಿಸುವ ಕ್ಷೇತ್ರ ಮತ್ತು ಸಂಗೊಳ್ಳಿಯ ಇಡಿ ಕ್ಷೇತ್ರ ಅಭಿವೃದ್ಧಿಗೆ ಅಗತ್ಯವಾದಷ್ಟು ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಶಾಸಕರಾದ ಮಹಂತೇಶ್ ಕೌಜಲಗಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಶ್ರೀ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮತ್ತು ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಸಚಿವರಾದ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಶಿವರಾಜ್ ತಂಗಡಗಿ‌ ಜತೆಗೆ ಶಾಸಕರಾದ ಎಚ್.ವೈ.ಮೇಟಿ, ಅಶೋಕ್ ಪಟ್ಟಣ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಪ್ರಕಾಶ್ ಹುಕ್ಕೇರಿ, ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಬಾಕ್ಸ್

ಮೋದಿ ವ್ಯಂಗ್ಯಕ್ಕೆ ಜನ ಚಪ್ಪಾಳೆ

ರಾಜ್ಯದಲ್ಲಿ ಕನ್ನಡಿಗರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಮಾತನ್ನು ವ್ಯಂಗ್ಯವಾಡಿದ ಮುಖ್ಯಮಂತ್ರಿಗಳು ಐದಕ್ಕೆ ಐದೂ ಗ್ಯಾರಂಟಿ ಸರ್ಕಾರ ಬಂದು 7 ತಿಂಗಳಲ್ಲೇ ಜಾರಿ ಆಗಿದೆ. ರಾಜ್ಯ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳ ಮಾತಿಗೆ ಸಾರ್ವಜನಿಕರು ಜೋರು ತಪ್ಪಾಳೆ ತಟ್ಟಿ ಸ್ವಾಗತಿಸಿದರು.

Previous Post
ದೇವರನ್ನು ಆಟಿಕೆ ಎನ್ನುವ ಕಾಂಗ್ರೆಸ್‌ ಪಕ್ಷಕ್ಕೆ ಈ ಹೇಳಿಕೆಯೇ ಅವನತಿಯ ಅಡಿಗಲ್ಲು: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ
Next Post
ಈ ತಿಂಗಳ ೧೯ ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಕಲಬುರಗಿಗೆ ಅವರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

Recent News