ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

ಅಹಮದಾಬಾದ್, ಜ. 9: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಲ್ಲಿ ಒಂಬತ್ತು ಮಂದಿ ವಾಸಿಸುತ್ತಿದ್ದ ಗುಜರಾತ್‌ನ ದೋಹದ್ ಜಿಲ್ಲೆಯ ರಣಧಿಕ್‌ಪುರ್ ಮತ್ತು ಸಿಂಗ್‌ವಾಡ್ ಅವಳಿ ಗ್ರಾಮಗಳಲ್ಲಿ ಮನೆಗಳಿಗೆ ಬೀಗ ಹಾಕಲಾಗಿದೆ. ಅಲ್ಲಿಗೆ ತೆರಳಿದರೆ ಬಾಗಿಲು ಮುಚ್ಚಿರುವ ಅಪರಾಧಿಗಳ ಮನೆಗಳು ಮತ್ತು ಭದ್ರತೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ನಮ್ಮನ್ನು ಸ್ವಾಗತಿಸುತ್ತಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ.

ಸೋಮವಾರ, 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಬೆನ್ನಲ್ಲೇ ನಾವು ಅಪರಾಧಿಗಳು ವಾಸಿಸುತ್ತಿದ್ದ ಗ್ರಾಮಕ್ಕೆ ತೆರಳಿದ್ದೆವು. ಆದರೆ, ಅಲ್ಲಿದ್ದ ಅವರ ಸಂಬಂಧಿಕರು 9 ಅಪರಾಧಿಗಳು ಎಲ್ಲಿದ್ದಾರೆ ಎಂಬ ಮಾಹಿತಿ ಬಿಟ್ಟುಕೊಡಲು ನಿರಾಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

“ನನ್ನ ಮಗ ನಿರಪರಾಧಿ. ಆತ ಕಾಂಗ್ರೆಸ್‌ನ ರಾಜಕೀಯ ದ್ವೇಷಕ್ಕೆ ಬಲಿಯಾಗಿದ್ದಾನೆ” ಎಂದು ಅಪರಾಧಿಗಳಲ್ಲಿ ಒಬ್ಬನಾದ ಗೋವಿಂದ್ ನಾಯ್ (55) ನ ತಂದೆ ಅಖಂಭಾಯ್ ಚತುರ್ಭಾಯಿ ರಾವಲ್ (87) ಹೇಳಿದ್ದಾರೆ. ಆತ ಮನೆ ಬಿಟ್ಟು ಒಂದು ವಾರ ಕಳೆಯಿತು ಎಂದು ತಿಳಿಸಿದ್ದಾರೆ.

ಶನಿವಾರ (ಜನವರಿ 6) ಗೋವಿಂದ್ ಮನೆಯಿಂದ ಹೊರ ಹೋಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಮ್ಮದು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆ, ಭಕ್ತಿ ಇರುವ ಕುಟುಂಬ, ನಮ್ಮ ಮಕ್ಕಳು ಆ ರೀತಿಯ ಅಪರಾಧ ಎಸಗಲು ಸಾಧ್ಯವಿಲ್ಲ” ಎಂದು ಗೋವಿಂದ್ ನಾಯ್‌ನ ವಯಸ್ಸಾದ ಪೋಷಕರು ಹೇಳಿದ್ದಾರೆ. ಗೋವಿಂದ್ ನಾಯ್‌ನ ಸಹೋದರ ಜಶ್ವಂತ್ ನಾಯ್ ಕೂಡ 11 ಅತ್ಯಾಚಾರಿಗಳಲ್ಲಿ ಒಬ್ಬ.

“ನಮ್ಮ ಮಕ್ಕಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಬೇಕೆಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಏನನ್ನೂ ಮಾಡದೆ ದಿನವೂ ತಿರುಗಾಡುವುದಕ್ಕಿಂತ ಸೇವೆ ಮಾಡುವುದು ಉತ್ತಮ. ಅವರು ಜೈಲಿನಿಂದ ಬಿಡುಗಡೆಯಾದಾಗಿನಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಜೈಲಿಗೆ ಹಿಂತಿರುಗುವುದು ದೊಡ್ಡ ವಿಷಯವಲ್ಲ. ಅವರು ಕಾನೂನು ಬಾಹಿರವಾಗಿ ಜೈಲಿನಿಂದ ಹೊರಬಂದಿಲ್ಲ. ಕಾನೂನು ಪ್ರಕ್ರಿಯೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು, ಈಗ ಕಾನೂನು ಹಿಂತಿರುಗಿ ಹೋಗುವಂತೆ ಹೇಳಿದೆ. ಆದ್ದರಿಂದ ಹಿಂತಿರುಗುತ್ತಾರೆ. ಅವರು 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಇದು ಹೊಸದೇನಲ್ಲ” ಎಂದು ಅಖಂಭಾಯ್ ಹೇಳಿದ್ದಾರೆ.

ಅಪರಾಧಿಗಳ ಮನೆಗಳ ಪೈಕಿ ಗೋವಿಂದ್‌ನ ಮನೆ ಬಿಲ್ಕಿಸ್ ಬಾನೊ 2002 ರಲ್ಲಿ ವಾಸಿಸುತ್ತಿದ್ದ ಸ್ಥಳದಿಂದ ಅತ್ಯಂತ ದೂರದಲ್ಲಿದೆ. ಹಿಂದಿನ ದಿನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯ ನಂತರ ಬಿಲ್ಕಿಸ್ ಬಾನೊ ಮತ್ತು ಆಕೆಯ ಕುಟುಂಬ ಫೆಬ್ರವರಿ 28,2002 ರಂದು ರಣಧಿಕ್‌ಪುರದಲ್ಲಿದ್ದ ತಮ್ಮ ಮನೆಯನ್ನು ತೊರೆದಿದ್ದರು. ಮಾರ್ಚ್ 3,2002 ರಂದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಸದಸ್ಯರನ್ನು ದಾಹೋಡ್‌ನ ಲಿಮ್ಖೇಡಾ ತಾಲೂಕಿನ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಮೃತ 14 ಮಂದಿಯ ಪೈಕಿ ಆರು ಮಂದಿಯ ಮೃತದೇಹಗಳು ಇದುವರೆಗೆ ಪತ್ತೆಯಾಗಿಲ್ಲ. ಜನವರಿ 21, 2008 ರಂದು ಸಿಬಿಐ ವಿಶೇಷ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸೋಮವಾರ ತಮ್ಮ ವರದಿಗಾರರು ತೆರಳಿದ್ದ ವೇಳೆ ಅತ್ಯಾಚಾರಿ ಗೋವಿಂದ್‌ನ ಮನೆಗೆ ಬೀಗ ಹಾಕಲಾಗಿತ್ತು. ಮನೆಯ ಮುಂದೆ ರಣಧಿಕ್‌ಪುರ್‌ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಕಾವಲು ಕಾಯುತ್ತಿದ್ದರು. ಗೋವಿಂದ್‌ನ ಮನೆಯ ಪಕ್ಕದಲ್ಲೇ ಆತನ ಪೋಷಕರ ಮನೆಯಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಹೇಳಿದೆ.

ಬಿಲ್ಕಿಸ್ ಬಾನೊ ಅತ್ಯಾಚಾರದ ಮತ್ತೋರ್ವ ಅಪರಾಧಿ, ರಾಧೇಶ್ಯಾಮ್ ಶಾ ಕಳೆದ 15 ತಿಂಗಳಿಂದ ಮನೆಗೆ ಬಂದಿಲ್ಲ ಎಂದು ಆತನ ತಂದೆ ಭಗವಾನ್‌ದಾಸ್ ಶಾ ಹೇಳಿದ್ದಾರೆ. ಆದರೆ, ರಾಧೇಶ್ಯಾಮ್ ಸೇರಿದಂತೆ ಬಹುತೇಕ ಎಲ್ಲಾ ಅಪರಾಧಿಗಳು ಭಾನುವಾರದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. “ರಾಧೇಶ್ಯಾಮ್ ಎಲ್ಲಿದ್ದಾನೆಂದು ನಮಗೆ ಗೊತ್ತಿಲ್ಲ. ಆತ ತನ್ನ ಹೆಂಡತಿ ಮತ್ತು ಮಗನ ಜೊತೆ ಮನೆ ಬಿಟ್ಟು ಹೋಗಿದ್ದಾನೆ” ಎಂದು ಭಗವಾನ್‌ದಾಸ್ ಹೇಳಿದ್ದಾರೆ.

ವರದಿಗಾರರು ತೆರಳಿದ್ದಾಗ ರಾಧೇಶ್ಯಾಮ್‌ನ ಸಹೋದರ ಆಶಿಶ್ ಶಾ ತರಾತುರಿಯಲ್ಲಿ ತನ್ನ ಬಟ್ಟೆ, ಬರೆಗಳನ್ನು ಪ್ಯಾಕ್ ಮಾಡ್ತಿದ್ದ. ಆತ ರಾಧೇಶ್ಯಾಮ್‌ನ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾನೆ. ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಕೇಳಿದ್ದಕ್ಕೆ, “ಈಗಷ್ಟೇ ತೀರ್ಪು ಹೊರ ಬಿದ್ದಿದೆ. ನಾವಿನ್ನೂ ನಮ್ಮ ವಕೀಲರ ಜೊತೆ ಮಾತನಾಡಿಲ್ಲ. ಮುಂದೆ ಏನು ಮಾಡೋದು ನೋಡೋಣ” ಎಂದು ಆಶಿಶ್ ಶಾ ಹೇಳಿದ್ದಾಗಿ ವರದಿ ತಿಳಿಸಿದೆ.

ಸ್ಥಳೀಯ ಅಂಗಡಿಯವರನ್ನು ಮಾತನಾಡಿಸಲು ಪ್ರಯತ್ನಿಸಲಾಯಿತಾದರೂ, ಅವರು ಯಾರೂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಮುಂದೆ ಬಂದಿಲ್ಲ. ಎಲ್ಲರೂ ಮೌನ ಪಾಲಿಸಿದ್ದರು. ಈಗ ನಿಮಗೆ ಅವರು ಸಿಗಲಾರರು, ಅವರು ಮನೆಗಳಿಗೆ ಬೀಗ ಹಾಕಿ ತೆರಳಿದ್ದಾರೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.

“ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಪರಾಧಿಗಳ ಮನೆಗಳ ಮುಂದೆ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು” ಎಂದು ರಣಧಿಕ್‌ಪುರ್‌ ಪೊಲೀಸ್ ಠಾಣೆಯ ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ ಜಿ ಬಿ ರಥ್ವಾ ಮಾಹಿತಿ ನೀಡಿದ್ದಾರೆ.

“ತೀರ್ಪಿನ ಹಿನ್ನೆಲೆ ಮಾಧ್ಯಮದವರು ಮನೆ ಬಳಿ ಬರಬಹುದೆಂದು ಅಂದಾಜಿಸಿ ಅವರು ಬೀಗ ಹಾಕಿ ಹೋಗಿರಬಹುದು. ಅಲ್ಲದೆ, ತಲೆಮರೆಸಿಕೊಳ್ಳುವ ಉದ್ದೇಶ ಅವರಿಗೆ ಇರಲು ಸಾಧ್ಯವಿಲ್ಲ. ಏಕೆಂದರೆ, ಕಳೆದ 20 ವರ್ಷಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಂಡಾಗಲೂ ಅವರು ಯಾರೂ ತಪ್ಪಿಸಿಕೊಂಡಿಲ್ಲ” ಎಂದು ಅಪರಾಧಿ ಗೋವಿಂದ್‌ನ ತಂದೆ ಅಖಂಭಾಯ್ ಹೇಳಿದ್ದಾರೆ.

ಪ್ರಕರಣ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ (57)ನ ಮನೆಗೆ ಕೂಡ ಬೀಗ ಹಾಕಲಾಗಿತ್ತು. ಪ್ರದೀಪ್ ಸೋಮವಾರ ಮುಂಜಾನೆ ಮನೆಯಿಂದ ಹೊರ ಹೋಗಿದ್ದಾನೆ. ಆತನ ಬೈಕ್ ಮನೆ ಬಳಿಯೇ ಇದೆ. ಆದ್ದರಿಂದ ವಾಪಸ್ ಬರಬಹುದು ಎಂದು ಮನೆ ಬಳಿ ನಿಯೋಜಿಸಿದ್ದ ಸಬ್ ಇನ್ಸ್‌ಪೆಕ್ಟರ್ ಆರ್ ಎನ್ ದಾಮೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ. ಪೊಲೀಸ್ ಭದ್ರತೆ ಕಲ್ಪಿಸಿ ಕೇವಲ ಒಂದೆರಡು ದಿನಗಳಾಗಿವೆ. ಕಳೆದ 16 ತಿಂಗಳಿನಿಂದ ಅಪರಾಧಿಗಳು ಮನೆಯಲ್ಲೇ ಇದ್ದರು. ಎಲ್ಲೂ ತಪ್ಪಿಸಿಕೊಂಡಿಲ್ಲ ಎಂದು ದಾಮೋರ್ ತಿಳಿಸಿದ್ದಾರೆ.

ಮತ್ತೋರ್ವ ಅಪರಾಧಿ ರಮೇಶ್ ಚಂದ್‌ ಮನೆಯಲ್ಲಿ ಇರಲಿಲ್ಲ. ಆತನಿಗೆ ಕರೆ ಮಾಡಿದ್ರೆ ಸ್ವೀಕರಿಸಿಲ್ಲ. 2022ರ ಆಗಸ್ಟ್‌ನಲ್ಲಿ ಆತನ ಜೈಲಿನಿಂದ ಬಿಡುಗಡೆಯಾದಾಗ ಮಾಧ್ಯಮವದರು ಆತನನ್ನು ಭೇಟಿಯಾಗಿದ್ದರು. ಸಿಂಗ್‌ವಾಡ್‌ ಗ್ರಾಮದಲ್ಲಿ ನೆಲೆಸಿದ್ದ ರಮೇಶ್, ಪ್ರಸ್ತುತ ಗೋದ್ರಾದಲ್ಲಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಮೇಶ್‌ನ ಮನೆಯ ಪಕ್ಕದಲ್ಲೇ ಆತನ ಅಳಿಯ ಪ್ರದೀಪ್‌ನ ಮನೆ ಇದೆ. ಆತನೊಂದಿಗೆ ರಮೇಶ್ ಬಗ್ಗೆ ವಿಚಾರಿಸಿದ್ದಕ್ಕೆ, “ರಮೇಶ್ ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ, ಫೋನ್‌ ಮೂಲಕವೂ ಮಾತನಾಡುವುದು ಕಷ್ಟ” ಎಂದು ಹೇಳಿದ್ದಾರೆ.

ಅಪರಾಧಿ ರಾಧೇಶ್ಯಾಮ್‌ನ ಮನೆಯ ಪಕ್ಕದಲ್ಲೇ ಇನ್ನಿಬ್ಬರು ಅಪರಾಧಿಗಳಾದ ಶೈಲೇಶ್ ಭಟ್ (65) ಮತ್ತು ಮಿತೇಶ್ ಭಟ್ (58) ಮನೆಯಿದೆ. ಅಲ್ಲಿ ಅವರು ಇರುವ ಬಗ್ಗೆ ರಾಧೇಶ್ಯಾಮ್‌ನ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ವಾಸವಿದ್ದ ಉಳಿದ ಅಪರಾಧಿಗಳೆಂದರೆ ರಾಜುಭಾಯ್ ಸೋನಿ, ಕೇಶರಭಾಯ್ ವೋಹಾನಿಯಾ, ಬಕಾಭಾಯಿ ವೋಹಾನಿಯಾ ಮತ್ತು ಬಿಪಿನ್‌ಚಂದ್ರ ಜೋಶಿ, ಇವರು ಪ್ರಸ್ತುತ ಜಿಲ್ಲೆಯಲ್ಲೇ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾಗಿ ವರದಿ ಹೇಳಿದೆ.

Previous Post
ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
Next Post
ರಾಮಮಂದಿರ ಉದ್ಘಾಟನೆ ಗಿಮಿಕ್ ಶೋ: ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ

Recent News