ತೆರಿಗೆ, ಅನುದಾನ ಹಂಚಿಕೆಯಲ್ಲಿ ಅನ್ಯಾಯ ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೇಸ್ ಪ್ರತಿಭಟನೆ

ತೆರಿಗೆ, ಅನುದಾನ ಹಂಚಿಕೆಯಲ್ಲಿ ಅನ್ಯಾಯ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೇಸ್ ಪ್ರತಿಭಟನೆ

ನವದೆಹಲಿ : ಕೇಂದ್ರ ಸರ್ಕಾರ ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ತಾಳಿದ್ದು, ರಾಜ್ಯಕ್ಕೆ 1,87,867 ಕೋಟಿ ರೂ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಇಂದು ಕಾಂಗ್ರೇಸ್ ಪ್ರತಿಭಟನೆ ನಡೆಸಲಿದೆ‌ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಆದಿಯಾಗಿ ಎಲ್ಲ ಸಚಿವರು ಶಾಸಕರು, ಹಿರಿಯ ನಾಯಕರು ಭಾಗಿಯಾಗಿವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು ಈಗಾಗಲೇ ಎಲ್ಲ ನಾಯಕರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಪತ್ರ ಬರೆದು ಆಹ್ವಾನಿಸಿದ್ದಾರೆ.

ಇಂದು ಪ್ರತಿಭಟನೆ ನಡೆಯುವ ಸ್ಥಳ ಜಂತರ್ ಮಂತರ್​ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಇದು‌ ಸರ್ಕಾರದ ಹೋರಾಟ, ಕಾಂಗ್ರೆಸ್, ಬಿಜೆಪಿಗೆ ಸಂಬಂಧವಿಲ್ಲ. ಕೇಂದ್ರದ ಗಮನ ಸೆಳೆಯಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಅನುದಾನ ನಮ್ಮ ಹಕ್ಕು, ಜನರಿಗೆ ಮನದಟ್ಟು ಮಾಡಬೇಕು. ನಮಗೆ ಸಿಗಬೇಕಾದ ಪಾಲು ಕೊಡಿಸುವುದು ನಮ್ಮ ಕರ್ತವ್ಯ. ಜನ ವೋಟ್ ಕೊಟ್ಟು ಗೆಲ್ಲಿಸಿದ್ದಾರೆ, ನ್ಯಾಯ ಸಲ್ಲಿಸಬೇಕಲ್ಲವೇ? ಕೇಂದ್ರ ಸರ್ಕಾರದ ಬಳಿ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಸ್ಟಂಟ್ ಮಾಡಲು ನಾನು ಸಿನಿಮಾ ನಟನಲ್ಲ. ಕೇಂದ್ರ ಬಳಿ ಅನುದಾನ ಕೇಳಲು ನಿಮಗೆ ಬಾಯಿ ಇಲ್ಲ ಅಂದರೆ ನಮಗೆ ಇಲ್ವಾ? ನೀವು ಇದ್ದಾಗ ಏನೂ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡಿದ ಅವರು ಬರ ಪರಿಹಾರಕ್ಕೆ ನಮ್ಮ ಸಚಿವರು ಬೇಡಿಕೆ ಇಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದಾರೆ. ಇದು ಸ್ಟಂಟಾ? ಮನರೇಗಾ ಕೂಲಿ ಹಣಕೊಟ್ಟಿಲ್ಲ, ಇದು ಸ್ಟಂಟಾ? ಇದು ಜನರ ಧ್ವನಿ, ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನಾವು ಕಟ್ಟುವ ತೆರಿಗೆಯಲ್ಲಿ ಅರ್ಧ ಕೊಡಿ ಸಾಕು. ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ. ಹಣಕಾಸು ಸಚಿವರನ್ನು ಭೇಟಿ ಮನವಿ ಮಾಡುತ್ತೇವೆ. ರಾಜ್ಯದ ಎಲ್ಲ ಸಂಸದ, ಶಾಸಕರಿಗೂ ಪ್ರತಿಭಟನೆಗೆ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ. ನರ್ಮತೆಯಿಂದ ತಲೆಬಾಗಿ ಕೇಳಿಕೊಳ್ಳುತ್ತೇನೆ ಎಂದರು.

ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆ ಸಮರ್ಥನೆ ಮಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಅನಿವಾರ್ಯವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ. ಬಿಜೆಪಿ ಸರ್ಕಾರ ಇಲ್ಲದ ಎಲ್ಲಾ ರಾಜ್ಯದ ಪರಿಸ್ಥಿತಿ ಇದೆ ಆಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ, ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೇಳುವ ಧೈರ್ಯವಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೇ ಕೆಲಸವನ್ನು ಮೋದಿ ಮುಂದೆ ಮಾಡಿದ್ದರೆ ಪ್ರತಿಭಟನೆ ಅವಶ್ಯಕತೆಯೇ ಇರಲಿಲ್ಲ ಎಂದರು.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಮಾತಿಗೆ ಬೆಲೆ ಕೊಡ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದೇವೆ. ಚುನಾವಣಾ ಸಂದರ್ಭಧಲ್ಲಿ ಈ ರೀತಿ ಅನ್ಯಾಯ ಮಾಡುತ್ತಿದೆ. ಕೇಂದ್ರಕ್ಕೆ ನಮ್ಮ ಹಕ್ಕನ್ನ ನಾವು ಕೇಳುತ್ತಿದ್ದೇವೆ. ಕೇಂದ್ರದ ಮೇಲೆ ಒತ್ತಡ ಹಾಕಿದ್ರೆ ಅದು ಭಿಕ್ಷೆನಾ..? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿ, ಬಿಜೆಪಿಯ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಆಗಿದೆ. ಬಿಜೆಪಿ ಸರ್ಕಾರ ಇದ್ದಾಗಲೂ ಅನುದಾನ ಕೊಡಲಿಲ್ಲ. ಈಗ ಹೋರಾಟ ಅನಿವಾರ್ಯವಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅಂಕಿ-ಅಂಶಗಳನ್ನು ಇಟ್ಟುಕೊಂಡು ಮಾತನಾಡಬೇಕು. ಅವರು ಈಗ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಇಷ್ಟು ದಿನ ಮಾತನಾಡುವ ರೀತಿ ಮಾತನಾಡುವುದು ಬೇಡ. ನಾನು ಕಾಂಗ್ರೆಸ್ ಬಿಡುವುದಿಲ್ಲ. ಬಿಜೆಪಿ ನಾಯಕರು ಸಂಪರ್ಕದಲ್ಲಿ ಇರೋದು ನಿಜ. ನನ್ನ ಹುಟ್ಟುಹಬ್ಬದ ಫ್ಲೆಕ್ಸ್‌ನಲ್ಲಿ ಎಂದೂ ಸಹ ಪಕ್ಷದ ಸಿಂಬಲ್ ಹಾಕಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ ನಾಯಕ ಟಿ.ಬಿ. ಜಯಚಂದ್ರ ಮಾತನಾಡಿ, ನಮ್ಮ ರಾಜ್ಯಕ್ಕೆ ಅನುದಾನ ತಾರತಮ್ಯ ಆಗಿದೆ. ತಾರತಮ್ಯ ಆದಾಗ ಪ್ರತಿಭಟನೆ ಅಗತ್ಯವಿದೆ. ನಲವತ್ತು ವರ್ಷಗಳಿಂದ ನಾನು ಶಾಸಕನಾಗಿದ್ದೇನೆ. ಕೇಂದ್ರ ಸರ್ಕಾರದ ವಿರುದ್ಧ ಈ ರೀತಿ ಪ್ರತಿಭಟನೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ಸರಿಯಲ್ಲ. ರಾಜ್ಯಗಳಿಂದ ದೇಶ, ದೇಶದಿಂದ ರಾಜ್ಯಗಳಲ್ಲ ಎಂಬುದನ್ನು ಪ್ರಧಾಣಿ ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯಗಳನ್ನು ನಡೆಸಿಕೊಳ್ಳುವುದರ ಮೇಲೆ ಒಕ್ಕೂಟ ವ್ಯವಸ್ಥೆ ನಿಲ್ಲುತ್ತದೆ ಎಂದು ಹೇಳಿದರು.

ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹೇಗಿರಬೇಕು ಎಂದು ಸಂವಿಧಾನ ಹೇಳಿದೆ. ಬಿಜೆಪಿ ಸರ್ಕಾರಗಳು ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬರ ಪರಿಹಾರ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ ಹಣ ಕೊಟ್ಟಿಲ್ಲ. ನಾನು ಬಿಜೆಪಿಯವರಿಗೆ ಮನವಿ ಮಾಡುತ್ತೇನೆ. ಇಷ್ಟು ದಿನ ನೀವುಗಳು ಮಾತನಾಡಿಲ್ಲ. ಈಗ ಸುಮ್ಮನೆ ಇದ್ದು ಬಿಡಿ, ನಾವು ನ್ಯಾಯ ಕೇಳಲು ಹೋಗುತ್ತಿದ್ದೇವೆ. ನಮ್ಮ ಪ್ರತಿಭಟನೆಯನ್ನು ಡೈವರ್ಟ್ ಮಾಡಲು ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರಿಗೆ ನಮ್ಮ ಪ್ರತಿಭಟನೆ ಉದ್ದೇಶ ಅರ್ಥವಾಗಲಿದೆ. ನಮ್ಮ ಪ್ರತಿಭಟನೆ ಯಶಸ್ವಿಯಾದರೆ ತಮಿಳುನಾಡು, ತೆಲಂಗಾಣ, ಕೇರಳದವರು ಕೈ ಜೋಡಿಸಬಹುದು. ನಾವು ಸತ್ಯವನ್ನು ಮಾತಾಡುತ್ತಿದ್ದೇವೆ. ಮಾತಾಡುತ್ತಿರುವುದು ಸುಳ್ಳು ಎಂದಾದರೆ ಬಿಜೆಪಿಯವರು ನಿರೂಪಿಸಲಿ ಎಂದು ಹೇಳಿದರು.

ಕೇಂದ್ರದಿಂದ ಅನುದಾನ ತಾರತಮ್ಯ ಖಂಡಿಸಿ ದೆಹಲಿಯಲ್ಲಿ ಹೋರಾಟ ವಿಚಾರ ಕುರಿತು ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ, ಬಿಜೆಪಿ ಸಂಸದರೆಲ್ಲಾ ಗಂಡಸರಲ್ಲ, ಶೋ ಪೀಸ್‌ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತೆಗೆದುಕೊಂಡು ಬರೋದು ಅಷ್ಟೇ ಇವರ ಕೆಲಸಅವರು, ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮ ಕರ್ನಾಟಕ. ಆದರೆ ನಮಗೆ ಕೊಡಬೇಕಾದ ಅನುದಾನವನ್ನು ಕೇಂದ್ರ ನಮಗೆ ಕೊಡುತ್ತಿಲ್ಲ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಪರ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಪಾಪ ನಮ್ಮ ಹೋರಾಟ ನೋಡಿ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ. ಮಾಡಲ್ಲ ಏಕೆಂದರೆ ಬಿಜೆಪಿಯಲ್ಲಿ ಯಾರೂ ಗಂಡಸರು ಇಲ್ಲ ಎಂದರ್ಥ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೇಸ್ ಪ್ರತಿಭಟನೆಗೆ ಬಿಜೆಪಿ ವಿರೋಧ

ಕಾಂಗ್ರೆಸ್‌ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಮುನಿಸ್ವಾಮಿ, 25 ಬಿಜೆಪಿ ಸಂಸದರು ಏನು ಮಾಡಿದ್ದಾರೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಂತಹ ಭ್ರಷ್ಟರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಸಂಸದರು ಏನು ಮಾಡಿದ್ದಾರೆ ಅಂತ ನಮ್ಮ ಜನರಿಗೆ ಗೊತ್ತು. ಇವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ನರೇಂದ್ರ ಮೋದಿ ಕೊಟ್ಟಿರುವಷ್ಟು ಅನುದಾನವನ್ನು ರಾಜ್ಯಕ್ಕೆ ಯಾರು ಸಹ ಕೊಟ್ಟಿಲ್ಲ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿ, ಡಿ.ಕೆ. ಸುರೇಶ್ ದೇಶ ವಿಭಜನೆ ಹೇಳಿಕೆ ಸರಿಯಲ್ಲ. ಗ್ಯಾರಂಟಿ ಯೋಜನೆಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಮೇಲೆ ಪ್ರೀತಿ ಇರುವುದಕ್ಕೆ ಇಷ್ಟೊಂದು ಅನುದಾನ ಕೊಟ್ಟಿದ್ದಾರೆ. ಯುಪಿಎ ಸರ್ಕಾರಕ್ಕಿಂತ 3 ಪಟ್ಟು ಹೆಚ್ಚು ಅನುದಾನವನ್ನು ಮೋದಿ ನೀಡಿದ್ದಾರೆ. ಈ ಪ್ರತಿಭಟನೆ ಯಾವುದೇ ಜನರ ಪರವಾದದ್ದು ಅಲ್ಲ. ಈ ಪ್ರತಿಭಟನೆ ಕೇವಲ ಕಾಂಗ್ರೆಸ್‌ನದ್ದು ಅಷ್ಟೇ. ಅವರು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡಿದ್ದಾರೆ. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಯಾವುದೇ ತಾರತಮ್ಯ ಆಗಿಲ್ಲ. ತಾರತಮ್ಯ ಆಗಿದ್ದೆ ಆಗಿದ್ದರೆ ನಾವು ಸಹ ಜನರ ಹಿತದೃಷ್ಟಿಯಿಂದ ಭಾಗಿಯಾಗುತ್ತಿದ್ದೆವು. ಆದರೆ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿಲ್ಲ. ಕೊಟ್ಟ ಭರವಸೆ ಈಡೇರಿಸಿಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸಂಸದರು ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಬರೋದು ಖಚಿತ. ಮೋದಿ ಕೊಟ್ಟ ಐದು ಕೆಜಿ ಅಕ್ಕಿಯನ್ನು ಸಹ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸುಳ್ಳು. ಈ ಬಗ್ಗೆ ಚರ್ಚೆಗೆ ಬರಲಿ ನಾನು ಸಿದ್ಧನಿದ್ದೇನೆ. ಮೋದಿ ಬಂದ ಬಳಿಕ ಜನಧನ್, ಆಯುಷ್ಮಾನ್ ಭಾರತ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದಾರೆ. ಡಿ.ಕೆ. ಸುರೇಶ್ ಅವರು ನೀಡಿರುವ ದೇಶ ವಿರೋಧಿ ಹೇಳಿಕೆಯನ್ನು ಮರೆ ಮಾಚಲು ಸಹ ಕಾಂಗ್ರೆಸ್‌ ಈ ಪ್ರತಿಭಟನೆಯನ್ನು ಮಾಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Previous Post
ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ , ನೀರು ನವೆಂಬರ್ ತಿಂಗಳಿನಿಂದ ಪೂರೈಕೆ
Next Post
ಫೇಸ್‌ ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಬಿ.ಆರ್.‌ ನಾಯ್ಡು ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ ಹೊರಡಿಸಿದೆ

Recent News