‘ದಿಲ್ಲಿ ಚಲೋ’: ಈಡೇರದೆ ಉಳಿದಿರುವ ರೈತರ ಪ್ರಮುಖ ಬೇಡಿಕೆಗಳೇನು?

‘ದಿಲ್ಲಿ ಚಲೋ’: ಈಡೇರದೆ ಉಳಿದಿರುವ ರೈತರ ಪ್ರಮುಖ ಬೇಡಿಕೆಗಳೇನು?

ನವದೆಹಲಿ, ಫೆ. 13: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಹಲವು ರಾಜ್ಯಗಳ ರೈತರು ಇಂದು (ಫೆ.13) ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದಾರೆ. ರೈತರ ಬೇಡಿಕೆಗಳಲ್ಲಿ ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು’ ಪ್ರಮುಖವಾಗಿದೆ. ರೈತರ ಇತರ ಬೇಡಿಕೆಗಳೆಂದರೆ, ವಿದ್ಯುತ್ ಕಾಯ್ದೆ 2020ರ ರದ್ದತಿ, ಲಖಿಂಪುರ ಖೇರಿಯಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ ಮತ್ತು ರೈತ ಚಳವಳಿಯಲ್ಲಿ ತೊಡಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವುದಾಗಿದೆ.

ಸೋಮವಾರ (ಫೆ. 12) ಮಧ್ಯರಾತ್ರಿಯವರೆಗೆ ರೈತ ಮುಖಂಡರ ಜೊತೆಗೆ ಚಂಡೀಗಢದಲ್ಲಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಮತ್ತು ಕೃಷಿ ಸಚಿವ ಅರ್ಜುನ್ ಮುಂಡಾ ಸಭೆ ನಡೆಸಿದ್ದು, ವಿದ್ಯುತ್ ಕಾಯ್ದೆ 2020 ರದ್ದತಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಮತ್ತು ರೈತರ ಚಳವಳಿಯ ಸಂದರ್ಭಗಳಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿದ್ದಾರೆ.

ಆದರೆ, ರೈತರ ಮೂರು ಪ್ರಮುಖ ಬೇಡಿಕೆಗಳಾದ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು, ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. 2020-21ರಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ದ ನಡೆದ ಅಂದೋಲನದ ವೇಳೆ, ರೈತ ಚಳವಳಿಯ ಸಂದರ್ಭಗಳಲ್ಲಿ ದಾಖಲಾದ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು, ಎಂಎಸ್‌ಪಿ ಕಾನೂನು ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ನಿನ್ನೆಯ(ಫೆ.12) ಸಭೆಯಲ್ಲಿ ಕೇವಲ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಒಪ್ಪಿಕೊಂಡಿದೆ. ಆದರೆ, ರೈತರ ಪ್ರಮುಖ ಬೇಡಿಕೆಯಾದ ಎಂಎಸ್‌ಪಿಯ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಹಾಗಾಗಿ, ಹೋರಾಟ ಮುಂದುವರೆಸುವುದಾಗಿ ರೈತರು ಹೇಳಿದ್ದಾರೆ.

ರೈತ ಮುಖಂಡರಾದ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವಾನ್ ಸಿಂಗ್ ಪಂಧೇರ್ ಅವರು ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಎಂಎಸ್‌ಪಿ, ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಸಂಬಂಧ ಕಾನೂನು ಜಾರಿಗೊಳಿಸುವ ಕುರಿತು ಚರ್ಚಿಸಲು ಸಮಿತಿ ರಚಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ರೈತ ಪ್ರತಿನಿಧಿಗಳು ಅದಕ್ಕೆ ಒಪ್ಪಿಲ್ಲ.

ನವೆಂಬರ್ 19, 2021ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಮಾಡಿದ್ದರು. ಆ ಮೂಲಕ ದೆಹಲಿಯ ಗಡಿಯಲ್ಲಿ ಹದಿಮೂರು ತಿಂಗಳ ಕಾಲ ಸತತ ಹೋರಾಟ ನಡೆಸಿದ್ದ ರೈತರಿಗೆ ಮಹತ್ವದ ಜಯ ಸಿಕ್ಕಿತ್ತು. ರೈತರ ಹೋರಾಟದ ವೇಳೆ ಅವರ ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ, ಆ ಮಾತಿಗೆ ತಪ್ಪಿದ ಸರ್ಕಾರ ಭರವಸೆ ಕೊಟ್ಟ ಸುಮಾರು 9 ತಿಂಗಳ ನಂತರ ಜುಲೈ 12, 2022 ರಂದು ಸಮಿತಿಯೊಂದನ್ನು ರಚಿಸಿತ್ತು. ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಒಟ್ಟು 29 ಸದಸ್ಯರಿದ್ದು, ನಾಲ್ವರು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ನಾಲ್ವರು ರಾಜ್ಯ ಸರ್ಕಾರ ಪ್ರತಿನಿಧಿಗಳು ಈ ಸಮಿತಿಯಲ್ಲಿದ್ದಾರೆ.

ಕೃಷಿ ಕಾನೂನಗಳ ವಿರುದ್ದ ನಡೆದ ಹೋರಾಟದಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ರೈತರು ಪ್ರಮುಖ ವಹಿಸಿದ್ದರು. ಈ ರಾಜ್ಯಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಸರ್ಕಾರ ರಚಿಸಿದ ಸಮಿತಿಯಲ್ಲಿ ಈ ರಾಜ್ಯಗಳ ಪ್ರತಿನಿಧಿಗಳೇ ಇರಲಿಲ್ಲ. ಅಲ್ಲದೆ, ಕೃಷಿ ಕಾನೂನುಗಳನ್ನು ವಿರೋಧಿಸುವ ಯಾವುದೇ ಅರ್ಥಶಾಸ್ತ್ರಜ್ಞರು ಅಥವಾ ತಜ್ಞರು ಇಲ್ಲದಿರುವುದು ರೈತರಿಗೆ ಕಳವಳ ಉಂಟು ಮಾಡಿದೆ. ಭೂಸ್ವಾಧೀನ ಕಾಯಿದೆ 2013ರ ಮರುಸ್ಥಾಪನೆ, ವಿಶ್ವ ವ್ಯಾಪಾರ ಸಂಸ್ಥೆಯಿಂದ ಹಿಂದೆ ಸರಿಯುವುದು ಮತ್ತು ಹಿಂದಿನ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಇತರ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ.

ಪ್ರತಿಭಟನಾ ಮೆರವಣಿಗೆ ಕೈಗೊಂಡಿರುವ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ಸಿಂಘು, ಟಿಕ್ರಿ ಮತ್ತು ಗಾಝಿಪುರ ಗಡಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾರ್ವಜನಿಕ ಸಭೆಗಳು ನಡೆಸುವುದಕ್ಕೆ ಮತ್ತು ಟ್ರ್ಯಾಕ್ಟರ್, ಟ್ರಾಲಿಗಳು ನಗರಕ್ಕೆ ಪ್ರವೇಶಿಸದಂತೆ ಪೊಲೀಸರು ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ. ದೆಹಲಿಯಾದ್ಯಂತ ಬೃಹತ್ ಸಭೆಗಳನ್ನು ನಿಷೇಧಿಸಲಾಗಿದೆ. ಹೆಚ್ಚಿನ ರಸ್ತೆಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ಮುಳ್ಳು ತಂತಿಗಳು ಮತ್ತು ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿದೆ. ವಾಣಿಜ್ಯ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Previous Post
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಬೃಂದಾ ಕಾರಟ್
Next Post
ರೈತರನ್ನು ಬಂಧಿಸಿಡಲು ಕ್ರೀಡಾಂಗಣಕ್ಕೆ ಕೇಂದ್ರ ಸರ್ಕಾರದಿಂದ ಬೇಡಿಕೆ: ನಿರಾಕರಿಸಿದ ಆಪ್ ಸರ್ಕಾರ

Recent News