ದಿಲ್ಲಿ ಚಲೋ ಬಗ್ಗೆ ಬಲಪ್ರಯೋಗ ಕೊನೆ ಆಯ್ಕೆಯಾಗಬೇಕು: ಹೈಕೋರ್ಟ್

ದಿಲ್ಲಿ ಚಲೋ ಬಗ್ಗೆ ಬಲಪ್ರಯೋಗ ಕೊನೆ ಆಯ್ಕೆಯಾಗಬೇಕು: ಹೈಕೋರ್ಟ್

ನವದೆಹಲಿ, ಫೆ. 13: ರೈತರ ದೆಹಲಿ ಚಲೋ ಪ್ರತಿಭಟನೆ ಮತ್ತು ಪೊಲೀಸ್‌ ಬಲಪ್ರಯೋದ ಬಗೆಗಿನ ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ರೈತರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಬಲಪ್ರಯೋಗ ಕೊನೆಯ ಆಯ್ಕೆಯಾಗಬೇಕು ಎಂದು ಹೇಳಿದೆ. ದೆಹಲಿ, ಪಂಜಾಬ್ ಮತ್ತು ಹರ್ಯಾಣದ ಗಡಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ಎರಡು ಅರ್ಜಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ಪೀಠವು ವಿಚಾರಣೆ ನಡೆಸುತ್ತಿದೆ.

ಪ್ರತಿಭಟನಾಕಾರರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ರಸ್ತೆಗಳನ್ನು ಬಂದ್‌ ಮಾಡುವ ಹರ್ಯಾಣ ಸರ್ಕಾರದ ಕ್ರಮವನ್ನು ಒಂದು ಅರ್ಜಿ ಖಂಡಿಸಿದರೆ, ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುವುದು ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಇನ್ನೊಂದು ಅರ್ಜಿ ಹೇಳಿದೆ. ಅರ್ಜಿ ವಿಚಾರಣೆಯ ವೇಳೆ ಪ್ರತಿಭಟನಾಕಾರರಿಗೆ ಅಭಿವ್ಯಕ್ತಿಗೆ ಮೂಲಭೂತ ಹಕ್ಕಗಳಿದ್ದರೂ, ರಾಜ್ಯ ಸರ್ಕಾರವು ತನ್ನ ನಾಗರಿಕರನ್ನು ರಕ್ಷಿಸಲು ಮತ್ತು ಅವರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ಬದ್ಧವಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ನಡುವೆ ಸಮತೋಲನವಿರಬೇಕು. ಎರಡನ್ನು ಪ್ರತ್ಯೇಕವಾಗಿ ನೋಡಲಾಗದು. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು. ಇದಕ್ಕೆ ಸಂಬಂಧಪಟ್ಟವರೆಲ್ಲ ಜೊತೆಗೆ ಕುಳಿತು ಸೌಹಾರ್ಧಯುತವಾಗಿ ಸಮಸ್ಯೆ ಪರಿಹರಿಸಬೇಕು ಮತ್ತು ಪ್ರತಿಭಟನೆಗೆ ಸರಿಯಾದ ಪ್ರದೇಶವನ್ನು ಗುರುತಿಸಬೇಕು ಎಂದು ನ್ಯಾಯಾಲಯವು ಹೇಳಿದೆ.

ನ್ಯಾಯಾಲಯವು ಈ ಕುರಿತು ಕೇಂದ್ರ ಸರಕಾರ ಪಂಜಾಬ್, ಹರಿಯಾಣ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಭಟನೆಗಳಿಗೆ ಸ್ಥಳವನ್ನು ನಿರ್ಧರಿಸುವಂತೆ ಕೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 15ರಂದು ನಡೆಯಲಿದೆ. ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ನ ಹಲವಾರು ರೈತ ಸಂಘಗಳು ಕನಿಷ್ಠ ಬೆಂಬಲ ಬೆಲೆ (MSP) ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿತ್ತು. ಮಂಗಳವಾರ ಬೆಳಗ್ಗೆ ಪಂಜಾಬ್ ಮತ್ತು ಹರಿಯಾಣದ ವಿವಿಧ ಗ್ರಾಮಗಳಿಂದ ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಒಣ ಪಡಿತರ, ವಾಟರ್ ಪ್ರೂಫ್ ಶೀಟ್‌ಗಳು ಮತ್ತು ಹಾಸಿಗೆಗಳನ್ನು ತುಂಬಿಕೊಂಡು ರಾಷ್ಟ್ರ ರಾಜಧಾನಿಯತ್ತ ತೆರಳಲು ಪ್ರಾರಂಭಿಸಿದ್ದರು. ಶಂಭು ಗಡಿಯಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹರ್ಯಾಣ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಗಡಿಯಲ್ಲಿ ರೈತರ ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Previous Post
ವಿಶ್ವ ಗುರು ಬಸವಣ್ಣ ಸಾಂಸ್ಕøತಿಕ ನಾಯಕ ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬ ಮೊಳಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಬೃಂದಾ ಕಾರಟ್

Recent News