ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಪ್ರಗತಿ ಮೈದಾನ ಸುರಂಗ ಮಾರ್ಗ

ದುರಸ್ಥಿ ಮಾಡಲಾಗದ ಸ್ಥಿತಿ ತಲುಪಿದ ಪ್ರಗತಿ ಮೈದಾನ ಸುರಂಗ ಮಾರ್ಗ

ನವದೆಹಲಿ, ಫೆ. 8: ಕಾಮಗಾರಿಯ ವಿಳಂಬ ಮತ್ತು ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ದೊಡ್ಡ ಮಟ್ಟದ ಬಿರುಕು ಕಾಣಿಸಿಕೊಂಡಿದ್ದು, ಸುರಂಗದ ಕೂಲಂಕುಷ ಪರೀಕ್ಷೆಯ ಅಗತ್ಯವಿದೆ ಎಂದು ದೆಹಲಿಯ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಯ ಹಿರಿಯ ಅಧಿಕಾರಿಯೊಬ್ಬರು ಫೆಬ್ರವರಿ 6,2024 ಮಂಗಳವಾರ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ. ಪ್ರಸ್ತುತ ಸುರಂಗ ಮಾರ್ಗವು ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲ. ಅದು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾಗಿ ಹಿಂದೂ ವರದಿ ಹೇಳಿದೆ. ಈ ವರದಿ ಕಳೆದ ಎರಡು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ.

ಅತ್ಯಂತ ಮಹತ್ವಾಕಾಂಕ್ಷೆಯ ಪ್ರಗತಿ ಮೈದಾನ ಸುರಂಗ ಮಾರ್ಗ ಯೋಜನೆಯನ್ನು ₹777ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿತ್ತು. ಜೂನ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದರು. ಉದ್ಘಾಟನಾ ಕಾರ್ಯಕ್ರಮವನ್ನು ದೇಶದ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. 1.3 ಕಿಮೀ ಉದ್ದದ ಸುರಂಗ ಮತ್ತು ಅದನ್ನು ಸಂಪರ್ಕಿಸುವ ಐದು ಅಂಡರ್‌ಪಾಸ್‌ಗಳು ಪ್ರಗತಿ ಮೈದಾನ್ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಪ್ರಾಜೆಕ್ಟ್‌ನ ಭಾಗವಾಗಿದೆ. ಇದು ನಗರದ ಪೂರ್ವ ಭಾಗಗಳು, ನೋಯ್ಡಾ ಮತ್ತು ಗಾಜಿಯಾಬಾದ್‌ನ ಸ್ಯಾಟ್‌ಲೈಟ್‌ ಪಟ್ಟಣಗಳೊಂದಿಗೆ ಮಧ್ಯ ದೆಹಲಿಯ ನಡುವಿನ ಸಂಪರ್ಕವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.

ಸುರಂಗ ಮಾರ್ಗ ಉದ್ಘಾಟನೆಗೊಂಡ ಕೆಲವೇ ತಿಂಗಳ ಬಳಿಕ, ಕಳೆದ ವರ್ಷ ದೆಹಲಿಯಲ್ಲಿ ಮಳೆಯಾಗಿತ್ತು. ಆಗ ಸುರಂಗದಲ್ಲಿ ನೀರು ತುಂಬಿದ್ದರಿಂದ ಮಾರ್ಗವನ್ನು ಮುಚ್ಚಲಾಗಿತ್ತು. “ನಗರದಲ್ಲಿ ಸಾಧಾರಣದಿಂದ ಹೆಚ್ಚಿನ ಮಳೆಯಾದಾಗಲೆಲ್ಲ ಸುರಂಗವು ಜಲಾವೃತವಾಗಿತ್ತು. ಸುರಂಗದೊಳಗೆ ಆಗಾಗ ಸಣ್ಣ ಮಟ್ಟದ ಸೋರಿಕೆಗಳನ್ನು ನಾವು ದುರಸ್ಥಿ ಮಾಡಿದ್ದೇವೆ. ಆದರೆ, ಈಗ ಸಮಸ್ಯೆ ದೊಡ್ಡದಾಗಿದೆ. ಕಳೆದ ಎರಡು ತಿಂಗಳಿನಿಂದ ಸುರಂಗದ ನಿರ್ವಹಣೆಯ ಹೊಣೆ ಹೊತ್ತ ಎಲ್‌&ಟಿ ಕಂಪನಿಯನ್ನು ನಾವು ಎಷ್ಟೇ ಬಾರಿ ಸಂಪರ್ಕಿಸಿದರೂ ಅವರು ಅದನ್ನು ದುರಸ್ಥಿ ಮಾಡಿಲ್ಲ” ಎಂದು ಮತ್ತೊಬ್ಬ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿ ಹೇಳಿದ್ದಾಗಿ ದಿ ಹಿಂದೂ ತಿಳಿಸಿದೆ.

ಫೆಬ್ರವರಿ 3ರಂದು ಪಿಡಬ್ಲ್ಯುಡಿ ಎಲ್‌&ಟಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿದ್ದು,-ಕನಿಷ್ಠ ₹500 ಕೋಟಿ ಟೋಕನ್ ಮೊತ್ತವನ್ನು ಠೇವಣಿ ಇಡಲು ಮತ್ತು ಸುರಂಗದ ದೋಷಯುಕ್ತ ವಿನ್ಯಾಸವನ್ನು ಸರಿಪಡಿಸುವುದರ ಜೊತೆಗೆ ದುರಸ್ತಿ ಕಾರ್ಯವನ್ನು ಪ್ರಾರಂಭಿಸಲು ಕೇಳಿದೆ. ನೋಟಿಸ್‌ನಲ್ಲಿ, ಸುರಂಗ ನಿರ್ಮಾಣವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಕಂಪನಿ ವಿಫಲವಾಗಿದೆ ಎಂದು ಪಿಡಬ್ಲ್ಯೂಡಿ ತಿಳಿಸಿದೆ. ಯೋಜನೆಯ ಟೆಂಡರ್ ಅನ್ನು 2017ರಲ್ಲಿ ಕರೆಯಲಾಗಿತ್ತು. 2019 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ, 2022ರಲ್ಲಿ ಯೋಜನೆ ಉದ್ಘಾಟನೆಗೊಂಡಿದೆ ಎಂದು ಪಿಡಬ್ಲ್ಯುಡಿ ಹೇಳಿದೆ.

ನಿರ್ಮಾಣ ಕಾರ್ಯದ ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ ಎಂಬ ತಿಳುವಳಿಕೆಗೆ ಒಳಪಟ್ಟು ಕಂಪನಿಗೆ ಕಾಲಮಿತಿಯಲ್ಲಿ ರಿಯಾಯಿತಿ ಒದಗಿಸಲಾಗಿತ್ತು. ಆದರೆ, ಭೈರೋನ್ ಮಾರ್ಗ್ ಬಳಿಯ ಅಂಡರ್ ಪಾಸ್ ನಂ.5ರ ವಿನ್ಯಾಸದಲ್ಲಿನ ದೋಷಗಳಿಂದಾಗಿ ಸುರಂಗಕ್ಕೆ ಗರಿಷ್ಠ ಹಾನಿಯಾಗಿದೆ ಎಂದು ಪಿಡಬ್ಲ್ಯುಡಿ ತಿಳಿಸಿದೆ. ಆರ್ಥಿಕ ಮತ್ತು ಪ್ರತಿಷ್ಠೆ ನಷ್ಟಕ್ಕೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ಫೆಬ್ರವರಿ 18 ರೊಳಗೆ ಪ್ರತಿಕ್ರಿಯಿಸುವಂತೆ ಎಲ್‌&ಟಿಗೆ ಪಿಡಬ್ಲ್ಯುಡಿ ಕೇಳಿದೆ. 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬಾಳಿಕೆ ಬರುವ ಖಾತ್ರಿ ನೀಡಿದ್ದ ಕಾಮಗಾರಿಯ ದುರಸ್ತಿ ಮತ್ತು ನಿರ್ವಹಣೆಯ ಜವಾಬ್ದಾರಿಯಿಂದ ತಪ್ಪಿಸಿಕೊಂಡರೆ ಕಂಪನಿಯು ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಹೊಣೆಗಾರನಾಗಿರುತ್ತಾನೆ ಎಂದು ಪಿಡಬ್ಲ್ಯುಡಿ ತನ್ನ ನೋಟಿಸ್‌ನಲ್ಲಿ ಎಚ್ಚರಿಸಿದೆ.

ಸುರಂಗದೊಳಗೆ ನಿರಂತರ ಸೋರಿಕೆ, ಕಾಂಕ್ರೀಟ್‌ನಲ್ಲಿ ಬಿರುಕುಗಳು, ಅತಿಯಾದ ನೀರು ಹರಿಯುವುದು ಮತ್ತು ಒಳಚರಂಡಿ ವ್ಯವಸ್ಥೆಯಲ್ಲಿ ಅಸಮರ್ಪಕ ಕಾರ್ಯ ಸೇರಿದಂತೆ 12 ಸಮಸ್ಯೆಗಳನ್ನು ಪಿಡಬ್ಲ್ಯುಡಿ ಇಲಾಖೆ ಗುರುತಿಸಿದೆ. ನಾವು ಎಲ್‌&ಟಿ ಸಂಸ್ಥೆಯನ್ನು ಸಂಪರ್ಕಿಸಿದಾಗ ಅದರ ವಕ್ತಾರರು ದೆಹಲಿ ಪಿಡಬ್ಲ್ಯುಡಿ ನಮ್ಮ ‘ಗೌರವಾನ್ವಿತ ಗ್ರಾಹಕ’. ಅದರೊಂದಿಗೆ ದೀರ್ಘ ವರ್ಷಗಳ ಒಡನಾಟವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿಯಲ್ಲಿ ಹೇಳಿದೆ. ಜೂನ್ 19,2022ರಂದು ಪ್ರಧಾನಿ ನರೇಂದ್ರ ಮೋದಿ ಪ್ರಗತಿ ಮೈದಾನ್‌ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಅಂಡರ್‌ಪಾಸ್‌ಗಳನ್ನು ಉದ್ಘಾಟಿಸಿದ್ದರು. ಬಳಿಕ ಸುರಂಗದಲ್ಲಿ ನಡೆದಾಡಿದ್ದ ಪ್ರಧಾನಿ, ಅಲ್ಲೇ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಯೊಂದನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದ್ದರು. ಈ ಕುರಿತು ವಿಡಿಯೋ ವೈರಲ್ ಆಗಿತ್ತು. ಪ್ರಧಾನಿ ಮೋದಿ ಕಸ ಹೆಕ್ಕಿ ಸ್ವಚ್ಚತೆಯ ಅರಿವು ಮೂಡಿಸಿದ್ದಾರೆ ಎಂದು ಮಾಧ್ಯಮಗಳು ಕೊಂಡಾಡಿತ್ತು. ಆದರೆ, ಪ್ರಧಾನಿ ಬರುವ ಮಾರ್ಗದಲ್ಲಿ ಸಾಮಾನ್ಯವಾಗಿ ಸ್ವಚ್ಚತೆ ಕಾಪಾಡಲಾಗುತ್ತದೆ. ಒಂದು ಕಸವೂ ಅಲ್ಲಿ ಇರದಂತೆ ನೋಡಿಕೊಳ್ಳಲಾಗುತ್ತದೆ. ಹಾಗಿದ್ದರೂ, ಹೊಸ ಮಾರ್ಗದಲ್ಲಿ ಹೇಗಪ್ಪ ಒಂದೇ ಒಂದು ಪ್ಲಾಸ್ಟಿಕ್ ಬಾಟಲಿ ಸಿಕ್ಕಿತು. ಇದೆಲ್ಲ ಪ್ರಚಾರದ ಸ್ಟಂಟ್ ಎಂದು ಸಾರ್ವಜನಿಕರು ಮಾತನಾಡಿಕೊಂಡಿದ್ದರು.

Previous Post
ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ ನ್ಯೂಸ್‌ಕ್ಲಿಕ್‌ ಎಚ್ಆರ್ ಚಕ್ರವರ್ತಿ
Next Post
‘ಹತ್ತು ವರ್ಷ ಅನ್ಯಾಯದ ಕಾಲ’ ಮೋದಿ ಸರ್ಕಾರದ ವಿರುದ್ಧ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ ಕಾಂಗ್ರೇಸ್

Recent News