ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಐತಿಹಾಸಿಕ‌ ಪರೇಡ್

ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಐತಿಹಾಸಿಕ‌ ಪರೇಡ್

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐತಿಹಾಸಿಕ‌ ಪರೇಡ್ ನಡೆಯಿತು. ಈ ಬಾರಿ ‘ವಿಕಸಿತ ಭಾರತ’ ಮತ್ತು ‘ಭಾರತ್-ಲೋಕತಂತ್ರ ಕಿ ಮಾತೃಕಾʼ ಗಣರಾಜ್ಯೋತ್ಸವ ಪರೇಡ್ ಥೀಮ್ ಆಗಿದ್ದು, ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಕಲರವ ಮನೆ ಮಾಡಿತ್ತು.ಕರ್ತವ್ಯ ಪಥದಲ್ಲಿ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳ ವತಿಯಿಂದ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು.
ಕರ್ನಾಟಕದ ನಾರಿಶಕ್ತಿ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ಗುಜರಾತ್​ ರಾಜ್ಯವು ಕಚ್​​ನ ಸಾಂಪ್ರದಾಯಿಕ ಮನೆಗಳಾದ ‘ಭೂಂಗಾ’ ಮತ್ತು ನವೀಕರಿಸಬಹುದಾದ ಇಂಧನದ ಥೀಮ್​ ಇಟ್ಟುಕೊಂಡು ಸ್ತಬ್ಧಚಿತ್ರ ಪ್ರದರ್ಶನ ಮಾಡಿತ್ತು. ಭೂಕಂಪ ಪೀಡಿತ ಕಚ್​ ನಲ್ಲಿ ಹಗುರ ಮನೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಈ ಮನೆಗಳ ಮಾದರಿಯನ್ನೇ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಯಿತು.ಉತ್ತರ ಪ್ರದೇಶವು ಅಯೋಧ್ಯೆಯಲ್ಲಿ ಪ್ರತಿವರ್ಷ ನಡೆಯುವ ಅದ್ಧೂರಿ ದೀಪೋತ್ಸವ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ ಮಾಡಿತು. ತ್ರಿಪುರದಲ್ಲಿ ಮಹಿಳೆಯ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಉತ್ತೇಜನಗೊಳ್ಳುತ್ತಿರುವ ರೀತಿ ಮತ್ತು ಸಾವಯವ ಕೃಷಿಗೆ ಸಂಬಂಧಪಟ್ಟ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು. ಯುನೆಸ್ಕೋದ ಸಾಂಸ್ಕೃತಿಕ ಪಟ್ಟಿಗೆ ಸೇರಿದ ತನ್ನ ನೆಲದ ಅದ್ಧೂರಿ ಸಾಂಸ್ಕೃತಿಕ ಉತ್ಸವವಾದ ದುರ್ಗಾಪೂಜೆ ಥೀಮ್​ಇರುವ ಸ್ತಬ್ಧಚಿತ್ರವನ್ನು ಪಶ್ಚಿಮ ಬಂಗಾಳ ಪ್ರಸ್ತುತ ಪಡಿಸಿತು.ಕಾಶ್ಮೀರವು ಅನಂತ್​​ನಾಗ್​ಜಿಲ್ಲೆಯಲ್ಲಿರುವ ಹಿಂದುಗಳ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್​ದ ಶಿವಲಿಂಗ ಪ್ರದರ್ಶಿಸಿತು. ಅರುಣಾಚಲ ಪ್ರದೇಶವು 1962ರ ಥವಾಂಗ್ ಯುದ್ಧ, ರಾಜ್ಯದ ಸುಪ್ರಸಿದ್ಧ ಶಿಂಗ್ಫೋ ಹಬ್ಬ ಹಾಗೂ ಡೋನ್ಯಿ ಪೋಲೊ ವಿಮಾನ ನಿಲ್ದಾಣದ ಥೀಮ್​ಇಟ್ಟುಕೊಂಡು ಸ್ತಬ್ಧಚಿತ್ರ ಪ್ರದರ್ಶನ ಮಾಡಿತು. ಕೇಂದ್ರಾಡಳಿತ ಪ್ರದೇಶ ಲಡಾಖ್ ತನ್ನಲ್ಲಿನ ಪ್ರವಾಸೋದ್ಯಮ ಮತ್ತು ಸಂಯೋಜಿತ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಿತು. ಬುಡಕಟ್ಟು ಜನಾಂಗದವರ ಹಕ್ಕುಗಳಿಗೆ ಹೋರಾಡಿದ ಬಿರ್ಸಾ ಮುಂಡಾ ಮತ್ತು ಬೈದ್ಯನಾಥ ದೇವಾಲಯದ ಸ್ತಬ್ಧಚಿತ್ರಗಳನ್ನು ಜಾರ್ಖಂಡ್​ ಪ್ರದರ್ಶಿಸಿತು.

ಆಂಧ್ರಪ್ರದೇಶದ ಸ್ತಬ್ಧಚಿತ್ರ ಕೂಡ ವಿಭಿನ್ನವಾಗಿತ್ತು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದಲ್ಲಿ ಆಚರಿಸಲಾಗುವ ಅತಿ ದೊಡ್ಡ ಉತ್ಸವ ‘ಪ್ರಭಾಲಾ ತೀರ್ಥಂ’ನೇ ಥೀಮ್​ ಆಗಿಟ್ಟುಕೊಂಡು ಆ ರಾಜ್ಯ ಟ್ಯಾಬ್ಲೋ ಪ್ರದರ್ಶನ ಮಾಡಿತು. ಸಾಡೆ ತೀನ್ ಶಕ್ತಿ ಪೀಠದ ಮಹತ್ವ ಹಾಗೂ ಸ್ತ್ರೀಶಕ್ತಿ ಮಹತ್ವವನ್ನ ಸಾರುವ ಟ್ಯಾಬ್ಲೋವನ್ನು ಮಹಾರಾಷ್ಟ್ರ ಪ್ರದರ್ಶಿಸಿತು.ಹರಿಯಾಣ ರಾಜ್ಯವು ಭಗವಾನ್ ಶ್ರೀಕೃಷ್ಣ, ಮಹಾಭಾರತ ಕಾಲದಲ್ಲಿ ದ್ರೋಣಚಾರ್ಯರು ಅವರ ಶಿಷ್ಯರಿಗೆ ವಿದ್ಯೆ ಕಲಿಸಿದ ಸನ್ನಿವೇಶ ಮತ್ತು ಕುರುಕ್ಷೇತ್ರವನ್ನು ಬಿಂಬಿಸುವಸ್ತಬ್ಧಚಿತ್ರಪ್ರದರ್ಶನಮಾಡಿತು.2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಈ ಸಲದ ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರದ ಮೂಲಕ ‘ಸಿರಿಧಾನ್ಯ’ದ ಮಹತ್ವ ಸಾರಿತು.ಅಸ್ಸಾಂ ರಾಜ್ಯವು, ಅಹೋಮ್ ಜನರಲ್ ಲಚಿತ್ ಬೋರ್ಫುಕನ್ ಮತ್ತು ಕಾಮಾಕ್ಯ ದೇವಾಲಯದಂತಹ ಸಾಂಸ್ಕೃತಿಕ ಪ್ರತಿಮೆಗಳನ್ನು ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶನ ಮಾಡಿತು.

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ: ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಕರ್ನಾಟಕದ 9 ಮಂದಿ ಸೇರಿ 132 ಸಾಧಕರಿಗೆ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.’ಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು: ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

Previous Post
ನಮ್ಮವರ ಕುತಂತ್ರ-ಪಿತೂರಿಯಿಂದಲೇ ಬ್ರಿಟಿಷರು 400 ವರ್ಷ ಭಾರತ ಆಳಿದರು: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೃತೂರ್ವಕ ಶುಭಾಶಯಗಳನ್ನು ಕೋರಿ, ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Recent News