ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ, ಶಾಸಕರಿಗೆ ತಲಾ 25 ಕೋಟಿ ಆಮಿಷ: ಎಎಪಿ

ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ, ಶಾಸಕರಿಗೆ ತಲಾ 25 ಕೋಟಿ ಆಮಿಷ: ಎಎಪಿ

ನವದೆಹಲಿ, ಜ. 27: ದೆಹಲಿಯಲ್ಲಿ ಆಪರೇಷನ್ ಕಮಲ 2.0 ನಡೆಯುತ್ತಿದ್ದು, ಎಎಪಿ ಶಾಸಕರಿಗೆ ಬಿಜೆಪಿ ಹಣದ ಆಮಿಷ ಒಡ್ಡುವ ಮೂಲಕ ರಾಜ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಶಿಕ್ಷಣ ಸಚಿವೆ ಅತಿಶಿ ಮರ್ಲೆನಾ ಅವರು, ಬಿಜೆಪಿ ನಮ್ಮ ಏಳು ಮಂದಿ ಶಾಸಕರನ್ನು ಸಂಪರ್ಕಿಸಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅತಿಶಿ, “ಬಿಜೆಪಿ ‘ಆಪರೇಷನ್ ಕಮಲ 2.0’ ಆರಂಭಿಸಿದೆ. ದೆಹಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಎಎಪಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಎಎಪಿಯ ಏಳು ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಅವರು ಶೀಘ್ರದಲ್ಲೇ ಬಂಧಿಸಲಾಗುವುದು. ಆ ಬಳಿಕ ಎಎಪಿ ಶಾಸಕರ ನಡುವೆ ಬಿರುಕು ಮೂಡಲಿದೆ ಅವರು ನಮ್ಮ ಶಾಸಕರಿಗೆ ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.

21 ಎಎಪಿ ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ. ಏಳು ಶಾಸಕರ ಪೈಕಿ ಪ್ರತಿಯೊಬ್ಬರಿಗೂ ತಲಾ 25 ಕೋಟಿ ರೂಪಾಯಿ ಮತ್ತು ಬಿಜೆಪಿ ಟಿಕೆಟ್ ನೀಡುವ ಆಮಿಷ ಒಡ್ಡಲಾಗಿದೆ ಎಂದು ಅತಿಶಿ ಆರೋಪಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಆಪರೇಷನ್ ಕಮಲದ ತಂತ್ರ ಪ್ರಯೋಗಿಸುತ್ತಿದೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಅರುಣಾಚಲ ಪ್ರದೇಶ ಮತ್ತು ಮಧ್ಯಪ್ರದೇಶಗಳು ಇದಕ್ಕೆ ಉದಾಹರಣೆಗಳಾಗಿವೆ ಎಂದು ಅತಿಶಿ ತಿಳಿಸಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಎಕ್ಸ್‌ನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದು, “ನನ್ನನ್ನು ಅಬಕಾರಿ ನೀತಿ ಹಗರಣದ ತನಿಖೆಯ ಭಾಗವಾಗಿ ಬಂಧಿಸುತ್ತಿಲ್ಲ. ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ನಮ್ಮ ಸರ್ಕಾರವನ್ನು ಬೀಳಿಸಲು ಅನೇಕ ಷಡ್ಯಂತ್ರಗಳನ್ನು ರೂಪಿಸಿದ್ದಾರೆ. ಆದರೆ, ಅದರಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಎಲ್ಲಾ ಶಾಸಕರು ಕೂಡ ಬಲವಾಗಿ ಜೊತೆಗಿದ್ದಾರೆ. ಈ ಬಾರಿಯೂ ಅವರ ಕೆಟ್ಟ ಉದ್ದೇಶ ವಿಫಲವಾಗಲಿದೆ” ಎಂದಿದ್ದಾರೆ.

Previous Post
ಜ್ಞಾನವಾಪಿ ಪ್ರಕರಣ: ಹಿಂದೂ ಪರ ವಕೀಲನಿಂದ ಎಎಸ್‌ಐ ಸಮೀಕ್ಷೆ ವರದಿ ಬಹಿರಂಗ
Next Post
ನರಮೇಧ ತಡೆಯಿರಿ: ಇಸ್ರೇಲ್‌ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚನೆ

Recent News