ದ್ವೇಷ ಹರಡಿ, ಸಾರ್ವಜನಿಕರ ಹಣ‌ ಲೂಟಿ ಮಾಡುತ್ತಿರುವ ಬಿಜೆಪಿ, ಆರೆಸ್ಸೆಸ್: ರಾಹುಲ್‌ ಗಾಂಧಿ

ದ್ವೇಷ ಹರಡಿ, ಸಾರ್ವಜನಿಕರ ಹಣ‌ ಲೂಟಿ ಮಾಡುತ್ತಿರುವ ಬಿಜೆಪಿ, ಆರೆಸ್ಸೆಸ್: ರಾಹುಲ್‌ ಗಾಂಧಿ

ಗೌಹಾತಿ, ಜ. 18: ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯ ಯಾತ್ರೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಯಾತ್ರೆ ಅಸ್ಸಾಂನ ಶಿವಸಾಗರಕ್ಕೆ ತಲುಪಿದೆ. ನಾಗಾಲ್ಯಾಂಡ್‌ನಿಂದ ಶಿವಸಾಗರ್‌ನ ಹಲುವತಿಂಗ್‌ ಮೂಲಕ ಅಸ್ಸಾಂಗೆ ಭಾರತ್‌ ಜೋಡೋ ನ್ಯಾಯ ಯಾತ್ರೆ ಪ್ರವೇಶಿಸಿದೆ. ಗುರುವಾರ ಮುಂಜಾನೆ ನಾಗಾಲ್ಯಾಂಡ್‌ನ ತುಲಿಯಿಂದ ಬಸ್‌ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಬೆಳಿಗ್ಗೆ ಸುಮಾರು 9.45ರ ವೇಳೆಗೆ ಅಸ್ಸಾಂ ಪ್ರವೇಶಿಸಿದರು.

ಹಲುವತಿಂಗ್‌ನಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರನ್ನು ರಾಜ್ಯಕ್ಕೆ ಬರಮಾಡಿಕೊಂಡರು. ಅಸ್ಸಾಂನಲ್ಲಿ ತ್ರಿವರ್ಣ ಧ್ವಜವನ್ನು ಹಸ್ತಾಂತರ ಕಾರ್ಯಕ್ರಮವು ರಾಜ್ಯದಲ್ಲಿ ಯಾತ್ರೆ ಆರಂಭಕ್ಕೆ ಮೊದಲು ನಡೆದಿದೆ. ಅಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು ಬಹುಶಃ ಭಾರತದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಅಸ್ಸಾಂ ಸರಕಾರ, ಬಿಜೆಪಿ, ಆರೆಸ್ಸೆಸ್ ದ್ವೇಷ ಹರಡಿ, ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿ-ಆರೆಸ್ಸೆಸ್‌ ದೇಶ ಮತ್ತು ರಾಜ್ಯಗಳಲ್ಲಿ ಅನ್ಯಾಯ ಮಾಡುತ್ತಿದೆ. ಆರ್ಥಿಕ ಅನ್ಯಾಯ, ಸಾಮಾಜಿಕ ಅನ್ಯಾಯ ಅಥವಾ ರಾಜಕೀಯ ಅನ್ಯಾಯವಾಗುತ್ತಿದೆ. ಮಣಿಪುರದಲ್ಲಿ ಅಂತರ್ಯುದ್ಧದ ವಾತಾವರಣವಿದ್ದು, ಇಲ್ಲಿಯವರೆಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿಲ್ಲ. ನಾಗಾಲ್ಯಾಂಡ್‌ನಲ್ಲಿ 9 ವರ್ಷಗಳ ಹಿಂದೆ ಮೋದಿ ದೊಡ್ಡ ಭರವಸೆಗಳನ್ನು ಕೊಟ್ಟಿದ್ದರು. ಅವರು ನಾಗಾ ಒಪ್ಪಂದದ ಬಗ್ಗೆ ಭರವಸೆ ನೀಡಿದ್ದರು. ಆ ಒಪ್ಪಂದ ಈಗ ಏನಾಗಿದೆ ಎಂದು ನಾಗಾಲ್ಯಾಂಡ್‌ನ ಜನರು ಇಂದು ಕೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಅಸ್ಸಾಂನಲ್ಲೂ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಬಹುಶಃ ಭಾರತದ ಅತ್ಯಂತ ಭ್ರಷ್ಟ ಸರ್ಕಾರ ಅಸ್ಸಾಂನ ಸರಕಾರವಾಗಿದೆ. ನಮಗೆ ನಾಗಾಲ್ಯಾಂಡ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ಅಸ್ಸಾಂನಲ್ಲೂ ನಾವು ಅದೇ ರೀತಿ ಬೆಂಬಲ ಪಡೆಯುತ್ತೇನೆ ಎಂದು ನಾನು ಭಾವಿಸುತ್ತೇನೆ. ನಾವು ಅಸ್ಸಾಂನ ಇತಿಹಾಸವನ್ನು ಮತ್ತೆ ಪುನರಾವರ್ತಿಸುತ್ತಿದ್ದೇವೆ, ಶಂಕರ್ ದೇವ್ ಜಿ ನಿಮಗೆ ದಾರಿ ತೋರಿಸಿದ್ದಾರೆ, ಎಲ್ಲರನ್ನೂ ಒಗ್ಗೂಡಿಸಲು ಕೆಲಸ ಮಾಡಿದ್ದಾರೆ. ಅದೇ ರೀತಿ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಯಾಣವು ಅಸ್ಸಾಂನ ಜನರಿಗೆ ಉತ್ಸಾಹ ಮತ್ತು ಧೈರ್ಯದ ಪ್ರಯಾಣವಾಗಿದೆ ಏಕೆಂದರೆ ಇಲ್ಲಿನ ಜನರು ತೊಂದರೆಗೀಡಾಗಿದ್ದಾರೆ. ಜನರು ರಾಹುಲ್ ಗಾಂಧಿ ಇಲ್ಲಿಗೆ ಯಾವಾಗ ಬರುತ್ತಾರೆ ಎಂದು ಕಾಯುತ್ತಿದ್ದಾರೆ. ಇದು ಐತಿಹಾಸಿಕ ಪ್ರಯಾಣವಾಗಿದೆ. ನಮ್ಮ ಪಕ್ಷವು ಭಾರತದ ಸಂವಿಧಾನವನ್ನು ನಂಬುತ್ತದೆ. ಇಂದು
ಬಿಜೆಪಿಯು ಶಂಕರಾಚಾರ್ಯರಿಗಿಂತ ಹೆಚ್ಚು ಜ್ಞಾನಿ ಎಂದು ಹೇಳುತ್ತಿದೆ. ಅವರಲ್ಲಿ ಅಹಂಕಾರ ತುಂಬಿದೆ ಎಂದು ಇದೇ ವೇಳೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.
ನಮಗೆ ನ್ಯಾಯದ ಹಕ್ಕು ಸಿಗುವವರೆಗೂ ಯಾತ್ರೆ ಮುಂದುವರಿಯಲಿದೆ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಭಾರತ ಜೋಡೋ ನ್ಯಾಯ ಯಾತ್ರೆಯ ಐದನೇ ದಿನವಾದ ಇಂದು ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಾರ್ವಜನಿಕರು ಈ ‘ನ್ಯಾಯ ಯಾತ್ರೆ’ಯಲ್ಲಿ ನಮ್ಮೊಂದಿಗೆ ಒಗ್ಗಟ್ಟಾಗಿ ಮುನ್ನಡೆಯುತ್ತಿದ್ದಾರೆ. ಈ ಯಾತ್ರೆಯು ನಮಗೆ ನ್ಯಾಯದ ಹಕ್ಕು ಸಿಗುವವರೆಗೆ ಮುಂದುವರಿಯುತ್ತದೆ ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14ರಂದು ಮಣಿಪುರದ ತೌಬಲ್‌ನಿಂದ ಪ್ರಾರಂಭವಾಯಿತು. ಬಳಿಕ ನಾಗಾಲ್ಯಾಂಡ್‌ ಮೂಲಕ ಈಗ ಅಸ್ಸಾಂಗೆ ತಲುಪಿದೆ. ಯಾತ್ರೆಯು 67 ದಿನಗಳಲ್ಲಿ 6,700 ಕಿಲೋಮೀಟರ್‌ಗಳನ್ನು ಕ್ರಮಿಸಲಿದ್ದು 110 ಜಿಲ್ಲೆಗಳಲ್ಲಿ ಸಂಚರಿಸಲಿದೆ.

Previous Post
ಧೋನಿ ದಾಖಲೆ ಉಡೀಸ್: ರೋಹಿತ್ ಶರ್ಮಾ ಈಗ ನಂಬರ್ 1 ಕ್ಯಾಪ್ಟನ್
Next Post
ಬಿಲ್ಕಿಸ್‌ ಬಾನು ಪ್ರಕರಣ: ಶರಣಾಗತಿಗೆ ಕಾಲಾವಕಾಶ ಕೋರಿ ಸುಪ್ರೀಂ ಮೊರೆ ಹೋದ ಮೂವರು ಅಪರಾಧಿಗಳು

Recent News