ಧೋನಿ ದಾಖಲೆ ಉಡೀಸ್: ರೋಹಿತ್ ಶರ್ಮಾ ಈಗ ನಂಬರ್ 1 ಕ್ಯಾಪ್ಟನ್

ಧೋನಿ ದಾಖಲೆ ಉಡೀಸ್: ರೋಹಿತ್ ಶರ್ಮಾ ಈಗ ನಂಬರ್ 1 ಕ್ಯಾಪ್ಟನ್

ನವದೆಹಲಿ, ಜ. 18: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ 3ನೇ ಟಿ20 ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 212 ರನ್​ಗಳಿಸಿದರೆ, ಈ ಮೊತ್ತವನ್ನು ಸರಿಗಟ್ಟುವ ಮೂಲಕ ಅಫ್ಘಾನಿಸ್ತಾನ್ ಪಂದ್ಯವನ್ನು ಟೈ ಮಾಡಿಕೊಂಡಿತು.

ಮೊದಲ ಸೂಪರ್​ನಲ್ಲಿ ಅಫ್ಘಾನಿಸ್ತಾನ್ ನೀಡಿದ 16 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕಲೆಹಾಕಿದ್ದು 16 ರನ್​ಗಳು. ಈ ಟೈನೊಂದಿಗೆ ಪಂದ್ಯವು 2ನೇ ಸೂಪರ್​ ಓವರ್​ನತ್ತ ಸಾಗಿತು. ದ್ವಿತೀಯ ಸೂಪರ್ ಓವರ್​ನಲ್ಲಿ ಭಾರತ ತಂಡವು 11 ರನ್ ಕಲೆಹಾಕಿದರೆ, ಅಫ್ಘಾನಿಸ್ತಾನ್ 1 ರನ್​ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು 10 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಭಾರತ ತಂಡದ ಯಶಸ್ವಿ ನಾಯಕರೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಧೋನಿ ನಾಯಕತ್ವದಲ್ಲಿ ಭಾರತ ತಂಡವು ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಟಿ20 ಕ್ರಿಕೆಟ್​ನಲ್ಲಿ 72 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಧೋನಿ ಒಟ್ಟು 41 ಗೆಲುವು ತಂದುಕೊಟ್ಟಿದ್ದರು. ಇದೀಗ 54 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಒಟ್ಟು 42 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ಅತ್ಯಧಿಕ ಗೆಲುವು ತಂದುಕೊಟ್ಟ ನಾಯಕ ಎನಿಸಿಕೊಂಡಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯಲ್ಲೂ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 42 ಗೆಲುವುಗಳೊಂದಿಗೆ ಇಯಾನ್ ಮೋರ್ಗನ್ (ಇಂಗ್ಲೆಂಡ್), ಬಾಬರ್ ಆಝಂ (ಪಾಕಿಸ್ತಾನ್) ಹಾಗೂ ಅಸ್ಗರ್ ಅಫ್ಘಾನ್ (ಅಫ್ಘಾನಿಸ್ತಾನ್) ಮೊದಲ ಸ್ಥಾನಗಳಲ್ಲಿದ್ದಾರೆ. ಇದೀಗ 42 ಜಯದೊಂದಿಗೆ ರೋಹಿತ್ ಶರ್ಮಾ ಈ ದಾಖಲೆಯನ್ನು ಸರಿಗಟ್ಟಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಒಂದು ಗೆಲುವು ತಂದುಕೊಟ್ಟರೆ ಟಿ20 ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕ ಎಂಬ ವಿಶ್ವ ದಾಖಲೆ ರೋಹಿತ್ ಶರ್ಮಾ ಪಾಲಾಗಲಿದೆ.

Previous Post
ಸಮುದ್ರದಲ್ಲಿ ಮುಳುಗಿದ 4000 ಕೋಟಿ ಮೌಲ್ಯದ ಐಷಾರಾಮಿ ಕಾರುಗಳಿದ್ದ ಹಡಗು..
Next Post
ದ್ವೇಷ ಹರಡಿ, ಸಾರ್ವಜನಿಕರ ಹಣ‌ ಲೂಟಿ ಮಾಡುತ್ತಿರುವ ಬಿಜೆಪಿ, ಆರೆಸ್ಸೆಸ್: ರಾಹುಲ್‌ ಗಾಂಧಿ

Recent News