ನರಮೇಧ ತಡೆಯಿರಿ: ಇಸ್ರೇಲ್‌ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚನೆ

ನರಮೇಧ ತಡೆಯಿರಿ: ಇಸ್ರೇಲ್‌ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚನೆ

ಗಾಝಾ, ಜ. 27: ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ತಡೆಯಬೇಕು ಮತ್ತು ಅಂತಹ ಚಟುವಟಿಕೆಗಳಿಗೆ ಪ್ರಚೋದನೆ ನೀಡುವವರನ್ನು ಶಿಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಉನ್ನತ ಅಂತಾರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್‌ಗೆ ಸೂಚಿಸಿದೆ. ಗಾಝಾದಲ್ಲಿ ನರಮೇಧ ತಡೆಯಲು ನರಮೇಧ ತಡೆ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳ ಆರ್ಟಿಕಲ್ IIರ ಅಡಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಸ್ರೇಲ್‌ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದೆ.

ತಕ್ಷಣ ಕದನ ವಿರಾಮಕ್ಕೆ ಆದೇಶಿಸಬೇಕು ಎಂದು ಇಸ್ರೇಲ್‌ ವಿರುದ್ದ ದಾವೆ ಹೂಡಿದ್ದ ದಕ್ಷಿಣ ಆಫ್ರಿಕಾ ಆಗ್ರಹಿಸಿತ್ತು. ಆದರೆ, ನ್ಯಾಯಾಲಯ ಕದನ ವಿರಾಮಕ್ಕೆ ಆದೇಶಿಸಿಲ್ಲ. ಇಸ್ರೇಲ್‌ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ದಕ್ಷಿಣ ಆಫ್ರಿಕಾದ ವಾದವನ್ನು ಇಸ್ರೇಲ್ ತಳ್ಳಿ ಹಾಕಿದೆ. ನಾವು ಗಾಝಾ ನಾಗರಿಕರನ್ನು ರಕ್ಷಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದೆ.

ಗಾಝಾದಲ್ಲಿ ನಡೆಯುತ್ತಿರುವ ಜೀವಹಾನಿಯ ಬಗ್ಗೆ ನ್ಯಾಯಾಲಯಕ್ಕೆ ಅರಿವಿದೆ. ದುರಂತದ ವ್ಯಾಪ್ತಿ ಗೊತ್ತಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ಜೋನ್ ಇ. ಡೊನೊಗ್ಯು ಹೇಳಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಗಾಝಾದಲ್ಲಿ ನಮ್ಮ ಜನರ ನರಮೇಧ ತಡೆಯಲಿದೆ. ಅನ್ನ, ಪಾನಿಯ ಸಿಗದೆ ಕಂಗೆಟ್ಟಿರುವವರಿಗೆ ಅಗತ್ಯ ವಸ್ತುಗಳು ಸಿಗಲಿದೆ. ನಮ್ಮ ಜನರ ಮೇಲಿನ ಆಕ್ರಮಣವನ್ನು ತಡೆಯಲಿದೆ ಎಂಬ ಭರವಸೆ ಇದೆ ಎಂದು ಪ್ಯಾಲೆಸ್ತೀನ್ ಅಧ್ಯಕ್ಷ ಪ್ರಧಾನಿ ಮೊಹಮ್ಮದ್ ಶ್ತಯ್ಯ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ ಜೀವಹಾನಿ ತಡೆಯಲು ಶ್ರಮಿಸುತ್ತಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದೆ. ಇಸ್ರೇಲ್‌ ಕೂಡ ಇದನ್ನೇ ವಾದಿಸುತ್ತಿದೆ. ಆದರೆ, ಜಗತ್ತಿಗೆ ಗೊತ್ತಿರುವಂತೆ 2023 ಅಕ್ಟೋಬರ್‌ 7ರಿಂದ ಇಸ್ರೇಲ್‌ ನಡೆಸಿದ ಆಕ್ರಮಣದಲ್ಲಿ ಇದುವರೆಗೆ ಗಾಝಾದ 26 ಸಾವಿರಕ್ಕಿಂತಲೂ ಅಧಿಕ ಅಮಾಯಕ ಜನರು ಬಲಿಯಾಗಿದ್ದಾರೆ.

Previous Post
ದೆಹಲಿ ಸರ್ಕಾರ ಉರುಳಿಸಲು ಬಿಜೆಪಿ ತಂತ್ರ, ಶಾಸಕರಿಗೆ ತಲಾ 25 ಕೋಟಿ ಆಮಿಷ: ಎಎಪಿ
Next Post
ಅಸ್ಸಾಂನಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಮೇಲೆ ದಾಳಿ ಖಂಡಿಸಿ 100 ಪ್ರಗತಿಪರರಿಂದ ಪತ್ರ

Recent News