ನಿಗಮ, ಮಂಡಳಿಗಳಿಗೆ 36 ಶಾಸಕರು, 39 ಕಾರ್ಯಕರ್ತರ ನೇಮಕ: ಡಿಸಿಎಂ ಡಿ.ಕೆ. ಶಿವಕುಮಾರ್

ನಿಗಮ, ಮಂಡಳಿಗಳಿಗೆ 36 ಶಾಸಕರು, 39 ಕಾರ್ಯಕರ್ತರ ನೇಮಕ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಜನವರಿ 18: ಲೋಕಸಭಾ ಚುಣಾವಣೆ ಹಿನ್ನೆಲೆ ಕಾಂಗ್ರೆಸ್‌ ನಲ್ಲಿ ಅಸಮಾಧಾನಗೊಂಡ ಶಾಸಕರು ಹಾಗೂ ಕಾರ್ಯಕರ್ತರನ್ನ ಸಮಾಧಾನಗೊಳಿಸಲು ನಿಗಮ ಮಂಡಳಿ ಸ್ಥಾನ ನೀಡಲು ಸಿಎಂ ಹಾಗೂ ಡಿಸಿಎಂ ಮುಂದಾಗಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾತನಾಡಿ, ನಿಗಮ, ಮಂಡಳಿಗಳ ನೇಮಕ ಪಟ್ಟಿಯಲ್ಲಿ 36 ಶಾಸಕರು, 39 ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು. ಅಲ್ಲದೇ ಯಾವುದೇ ಕ್ಷಣದಲ್ಲಿ ನಿಗಮ, ಮಂಡಳಿಗಳ ನೇಮಕ ಪಟ್ಟಿ ಬಿಡುಗಡೆ ಆಗಲಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಅವರ ಹಕ್ಕಿನಂತೆ ಈ ಅಧಿಕಾರ ನೀಡಲಾಗುತ್ತಿದೆ.

ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ನಾಳೆ ಸಂಜೆ 4.30 ಕ್ಕೆ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆಸಲಾಗುವುದು. ಮೊದಲಿಗೆ ಮಧ್ಯಾಹ್ನ ಸಭೆ ಮಾಡಲು ಆಲೋಚನೆ ಮಾಡಿದ್ದೆವು. ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ಸಂಜೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ನಾಳೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಆಗುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಮೊದಲ ಸುತ್ತಿನ ಚರ್ಚೆ ನಡೆಯಲಿದೆ. ಈ ಸಭೆಗೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಆಹ್ವಾನಿಸಲಾಗಿದ್ದು, ಉಳಿದಂತೆ ಈ ಹಿಂದೆ ಚುನಾವಣಾ ಸಮಿತಿಯಲ್ಲಿದ್ದವರೇ ಇದ್ದಾರೆ. ಸಚಿವರು ಎಲ್ಲಾ ಕ್ಷೇತ್ರಗಳಿಗೆ ಹೋಗಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯಲಿದೆ. ಕೆಲ ಸಚಿವರು ಸ್ಪರ್ಧೆ ಮಾಡುವ ಕುರಿತು ಪಕ್ಷ ಸೂಚಿಸಿದರೆ ನಾನು ನಿಲ್ಲಬೇಕು, ಅವರೂ ನಿಲ್ಲಬೇಕು ಎಂದು ತಿಳಿಸಿದರು.

ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ ಜೆಡಿಎಸ್ ಎನ್ಡಿಎ ಜತೆ ಮೈತ್ರಿಗೆ ಮುಂದಾಗಿರುವ ಬಗ್ಗೆ ಮಾತನಾಡಿ, ಅದು ಅವರ ಇಚ್ಛೆ. ನಾವು ಕೂಡ ಹಿಂದೆ ಅವರ ಜತೆಗೂಡಿದಾಗ ಹೆಚ್ಚಿನ ಕ್ಷೇತ್ರ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ ಅಂತಿಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡೋಣ. ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ” ಎಂದು ತಿಳಿಸಿದರು. ಧರ್ಮದಲ್ಲಿ ರಾಜಕೀಯ ಇರಬಾರದು ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಪಕ್ಷಕ್ಕೆ ಹಿನ್ನಡೆ ತರಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೆಸರಿನಲ್ಲೇ ರಾಮನಿದ್ದಾನೆ. ನನ್ನ ಹೆಸರಲ್ಲಿ ಶಿವ ಇದ್ದಾನೆ. ಧರ್ಮ ನಮ್ಮ ವೈಯಕ್ತಿಕ ವಿಚಾರ. ನಾನು ಎಲ್ಲಾ ಧರ್ಮ, ಸಮುದಾಯಗಳ ಮೇಲೆ ನಂಬಿಕೆ ಇಟ್ಟಿದ್ದು, ನಮ್ಮ ಧರ್ಮದ ಆಚರಣೆ ಬಗ್ಗೆಯೂ ನಂಬಿಕೆ ಇದೆ. ರಾಮ ಮಂದಿರ ವಿಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಒಂದು ವಿಚಾರ ಸ್ಪಷ್ಟ ಪಡಿಸುತ್ತೇನೆ. ರಾಜಕೀಯದಲ್ಲಿ ಧರ್ಮ ಇರಬೇಕೇ ವಿನಃ ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಿಳಿಸಿದರು.

Previous Post
ಅಮಿತ್ ಶಾ ಅವರೊಂದಿಗೆ 45 ನಿಮಿಷಗಳ ಕಾಲ ಚರ್ಚೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ
Next Post
ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ: ಸಂಚಾರ ಮಾರ್ಗ ಬದಲಾವಣೆ ವಿವರ ಇಲ್ಲಿದೆ

Recent News