ಪಕ್ಷ ಸೇರಿ ಇಲ್ಲ ಕೇಸ್ ಹಾಕುಸ್ಕೊಳಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಂದೆ ಆಪ್ಷನ್ ಇಡ್ತಾ ಬಿಜೆಪಿ!?

ಪಕ್ಷ ಸೇರಿ ಇಲ್ಲ ಕೇಸ್ ಹಾಕುಸ್ಕೊಳಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಂದೆ ಆಪ್ಷನ್ ಇಡ್ತಾ ಬಿಜೆಪಿ!?

ನವದೆಹಲಿ, ಫೆಬ್ರವರಿ.05: ದೆಹಲಿ ರಾಜಕೀಯದಲ್ಲಿ ಈಗ ಇಡಿ, ಐಟಿ ಅಧಿಕಾರಿಗಳದ್ದೇ ರಾಜ್ಯಭಾರ ಆಗಿದೆ. ಬಿಜೆಪಿ ಮತ್ತು ಆಪ್ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಇದರ ಬೆನ್ನಲ್ಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಲವು ಆರೋಪಗಳನ್ನು ಮಾಡಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಲು ಎಲ್ಲಾ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ಸ್ಫೋಟಕ ಮಾಹಿತಿ ಕೂಡ ನೀಡಿದ್ದಾರೆ. ಅದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ತಮ್ಮನ್ನು ಪಕ್ಷಕ್ಕೆ ಸೇರುವಂತೆ ಕೇಳಿದೆ. ಆದರೆ, ನಾನು ನಿರಾಕರಿಸಿದ್ದೇನೆ ಎಂದಿದ್ದಾರೆ. ವಾಯುವ್ಯ ದೆಹಲಿಯ ರೋಹಿಣಿಯ ಸೆಕ್ಟರ್ 41 ರಲ್ಲಿ ಕಿರಾರಿಯಲ್ಲಿ ನಾಲ್ಕು ಹೊಸ ಸರ್ಕಾರಿ ಶಾಲೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಈ ವಿಷಯಗಳನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ.

ಮುಂದಿನ ಜನವರಿ ವೇಳೆಗೆ ಹೊಸ ಸರ್ಕಾರಿ ಶಾಲೆಗಳು ಕಾರ್ಯಾರಂಭ ಮಾಡಲಿವೆ. ಶಾಲೆಗಳು ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಸುಮಾರು 10,000 ವಿದ್ಯಾರ್ಥಿಗಳಿಗೆ 100 ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳು, ಚಟುವಟಿಕೆ ಕೊಠಡಿಗಳು, ಲಿಫ್ಟ್‌ಗಳು ಮತ್ತು ಇತರ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ. ಇನ್ನು, ಎರಡೂ ಪಕ್ಷಗಳಿಂದ ಬರುತ್ತಿರುವ ಆರೋಪ- ಪ್ರತ್ಯಾರೋಪಗಳ ಸುರಿಮಳೆ ನಡುವೆ ಅರವಿಂದ್ ಕೇಜ್ರಿವಾಲ್ ಹೇಳಿಕೆ ಕೂಡ ಬಂದಿದೆ. ಎಎಪಿಯ ಎಲ್ಲಾ ಶಾಸಕರನ್ನು ತಮ್ಮ ಪಕ್ಷಕ್ಕೆ ಎಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಸರಣಿ ಭ್ರಷ್ಟಾಚಾರ ಪ್ರಕರಣಗಳನ್ನು ಆರೋಪಿಸಿದೆ ಎಂದು ಆಪ್ ಗಂಭೀರ ಆರೋಪ ಮಾಡಿದೆ. ಇತ್ತ, ಬಿಜೆಪಿ ಆಪ್ ಸರ್ಕಾರದ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ ಮತ್ತು ಎಎಪಿ ಸರ್ಕಾರದ ಭ್ರಷ್ಟಾಚಾರದ ತನಿಖೆಯಿಂದ ಮುಖ್ಯಮಂತ್ರಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ. ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿ ಕಣ್ಣು! ಎಎಪಿ ಕಾರ್ಯಕರ್ತರನ್ನು ಗುರಿಯಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿರುವ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಎಎಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಹಳಿತಪ್ಪಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಅವರು ತಮ್ಮ ಎಲ್ಲಾ ಪಿತೂರಿಗಳನ್ನು ರೂಪಿಸಿದ್ದಾರೆ. ಆದರೆ ನಮ್ಮನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ. ಕೇಜ್ರಿವಾಲ್ ಜೈಲಿಗೆ ಹೋದರೂ ಶಾಲೆಗಳು ಮತ್ತು ಆಸ್ಪತ್ರೆಗಳು ಅಭಿವೃದ್ಧಿಯಾಗುತ್ತಲೇ ಇರುತ್ತವೆ. ಅವರು ನಮ್ಮ ವಿರುದ್ಧ ಯಾವುದೇ ಷಡ್ಯಂತ್ರ ನಡೆಸಬಹುದು. ನಾನು ಬಗ್ಗುವುದಿಲ್ಲ” ಎಂದು ಹೇಳಿದ್ದಾರೆ.

ಮುಂದುವರಿದು, “ಅವರು ನನ್ನನ್ನು ಬಿಜೆಪಿಗೆ ಸೇರಲು ಕೇಳುತ್ತಿದ್ದಾರೆ. ಹಾಗೆ ಅವರ ಪಕ್ಷ ಸೇರಿದರೆ ನಮ್ಮನ್ನು ಬಿಡುತ್ತಾರೆ. ಆದರೆ, ನಾನು ಏನೇ ಮಾಡಿದರೂ ಬಿಜೆಪಿಗೆ ಸೇರಲು ಹೋಗುವುದಿಲ್ಲ ಎಂದು ಹೇಳಿದ್ದೇನೆ” ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಸಭೆಯಲ್ಲಿ ಘೋಷಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ಆಪ್ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಕೇಜ್ರಿವಾಲ್ ಮಾತನಾಡಿದ್ದಾರೆ. ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಕೇಂದ್ರವು ರಾಷ್ಟ್ರೀಯ ಬಜೆಟ್‌ನ 4% ಅನ್ನು ಮಾತ್ರ ಖರ್ಚು ಮಾಡುತ್ತದೆ. ಆದರೆ ದೆಹಲಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ 40% ರಷ್ಟು ಖರ್ಚು ಮಾಡಿದೆ.

ಜೈಲಿನಲ್ಲಿರುವ ಪಕ್ಷದ ಹಿರಿಯ ಪದಾಧಿಕಾರಿಗಳಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರ ಬಗ್ಗೆಯೂ ಅವರು ಮಾತನಾಡಿದ ಸಿಎಂ ಕೇಜ್ರಿವಾಲ್, “ಎಲ್ಲಾ ಏಜೆನ್ಸಿಗಳು ನಮ್ಮ ಹಿಂದೆ ಇವೆ. ಉತ್ತಮ ಶಾಲೆಗಳನ್ನು ಕಟ್ಟುತ್ತಿರುವುದು ಸಿಸೋಡಿಯಾ ಅವರ ತಪ್ಪು. ಸತ್ಯೇಂದ್ರ ಜೈನ್ ಅವರ ತಪ್ಪು ಎಂದರೆ ಅವರು ಉತ್ತಮ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದರು. ಶಾಲೆಯ ಮೂಲಸೌಕರ್ಯಗಳ ಸುಧಾರಣೆಗಾಗಿ ಸಿಸೋಡಿಯಾ ಕೆಲಸ ಮಾಡದೇ ಇದ್ದಿದ್ದರೆ ಅವರನ್ನು ಬಂಧಿಸುತ್ತಿರಲಿಲ್ಲ” ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.

Previous Post
ಯುಸಿಸಿ ಕರಡು ಪ್ರತಿಗೆ ಸಂಪುಟದಿಂದ ಹಸಿರು ನಿಶಾನೆ
Next Post
ರಾಜ್ಯ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ವಿರುದ್ದ ಪ್ರತಿಭಟನೆ ರಾಜಕೀಯ ಸ್ಟಂಟ್: ಬೊಮ್ಮಾಯಿ ಆರೋಪ

Recent News