ಪಡಿತರ ಅಂಗಡಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್ ಹಾಕುವಂತೆ ಸೂಚನೆ: ತಿರಸ್ಕರಿಸಿದ ಕೇರಳ

ಪಡಿತರ ಅಂಗಡಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್ ಹಾಕುವಂತೆ ಸೂಚನೆ: ತಿರಸ್ಕರಿಸಿದ ಕೇರಳ

ತಿರುವನಂತಪುರಂ, ಫೆ. 13: ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು, ಫ್ಲೆಕ್ಸ್‌ಗಳನ್ನು ಮತ್ತು ಬೋರ್ಡ್‌ಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನವನ್ನು ನೀಡಿದ್ದು, ಇದನ್ನು ಕೇರಳ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಪಿಣರಾಯಿ ವಿಜಯನ್ ಅವರು ತಿರಸ್ಕರಿಸಿದ್ದಾರೆ. ಈ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಕೇರಳ ಸಿಎಂ ಪಿಣರಾಯ್‌ ವಿಜಯನ್, ಇದು ಖಂಡಿತವಾಗಿಯೂ ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿದೆ. ಇದು ಸರಿಯಲ್ಲ ಮತ್ತು ಇದನ್ನು ಕೇರಳದಲ್ಲಿ ಜಾರಿಗೆ ತರುವುದು ಕಷ್ಟ ಎಂದು ನಾವು ಕೇಂದ್ರಕ್ಕೆ ತಿಳಿಸುತ್ತೇವೆ. ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತರಬಹುದೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿನ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್ ಇರುವ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ದೇಶಿಸಲಾಗಿತ್ತು. ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಪಡಿತರ ಅಂಗಡಿಗಳು ಕೇರಳದಲ್ಲಿ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗ ಈ ನಿರ್ದೇಶನವನ್ನು ನೀಡಿದೆ, ಖಂಡಿತವಾಗಿಯೂ ಇದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೀಡಿರುವುದಾಗಿದೆ. ನಾವು ಈ ನಿರ್ದೇಶನವನ್ನು ಜಾರಿಗೊಳಿಸುವುದಿಲ್ಲ ಎಂದು ಪಿಣರಾಯ್‌ ವಿಜಯನ್ ಹೇಳಿದ್ದಾರೆ.

ಇದಕ್ಕೂ ಮುನ್ನ 10,000 ಪಡಿತರ ಅಂಗಡಿಗಳಲ್ಲಿ ಮೋದಿ ಇರುವ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿ ವರದಿ ಸಲ್ಲಿಸುವಂತೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಕೇರಳದ ನಾಗರಿಕ ಮತ್ತು ಸರಬರಾಜು ಖಾತೆ ಸಚಿವ ಜಿ.ಆರ್‌ ಅನಿಲ್ ಸದನಕ್ಕೆ ತಿಳಿಸಿದ್ದಾರೆ. 550 ಪಡಿತರ ಅಂಗಡಿಗಳಲ್ಲಿ ಪ್ರಧಾನಿಯವರ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆಯೂ ನಿರ್ದೇಶನ ನೀಡಿದೆ ಇದಲ್ಲದೆ ಕೇಂದ್ರ ಸರ್ಕಾರದ ಬ್ರ್ಯಾಂಡಿಂಗ್ ಹೊಂದಿರುವ ಕ್ಯಾರಿ ಬ್ಯಾಗ್‌ಗಳನ್ನು ಸಹ ಗ್ರಾಹಕರಿಗೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಪ್ರಚಾರದ ಭಾಗದಲ್ಲಿ ‘ಸೆಲ್ಫಿ ಪಾಯಿಂಟ್‌ಗಳು’ ದೊಡ್ಡ ಭಾಗವಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳಲ್ಲಿ ಇರಿಸುವಂತೆ ಈ ಮೊದಲು ನಿರ್ದೇಶನವನ್ನು ನೀಡಲಾಗಿತ್ತು. ಇವೆಲ್ಲವನ್ನೂ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ವಿಶ್ವವಿದ್ಯಾನಿಲಯಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌ಗಳ ನಿರ್ಮಾಣಕ್ಕೆ ಆದೇಶ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರೈಲ್ವೇ ನಿಲ್ದಾಣಗಳಲ್ಲಿ ಸಾರ್ವಜನಿಕರ ವೆಚ್ಚದಲ್ಲಿ ಮೋದಿಯ ಪೋಟೋ ಇರುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ ಎನ್ನವುದು ಆರ್‌ಟಿಐ ಮಾಹಿತಿಯಿಂದ ಬಯಲಾಗಿತ್ತು. ಮೋದಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.

Previous Post
ರೈತರನ್ನು ಬಂಧಿಸಿಡಲು ಕ್ರೀಡಾಂಗಣಕ್ಕೆ ಕೇಂದ್ರ ಸರ್ಕಾರದಿಂದ ಬೇಡಿಕೆ: ನಿರಾಕರಿಸಿದ ಆಪ್ ಸರ್ಕಾರ
Next Post
ಎನ್‌ಸಿಪಿ ಪಕ್ಷದ ಹಕ್ಕಿನ ವಿಚಾರ: ಸುಪ್ರೀಂ ಮೆಟ್ಟಿಲೇರಿದ ಶರದ್ ಪವಾರ್

Recent News