ಪತ್ರಕರ್ತರನ್ನು ಟ್ರೋಲ್‌ ಮಾಡಿ ಮತ್ತೆ ಉದ್ಧಟತನ ಮೆರೆದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ಪತ್ರಕರ್ತರನ್ನು ಟ್ರೋಲ್‌ ಮಾಡಿ ಮತ್ತೆ ಉದ್ಧಟತನ ಮೆರೆದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ಚೆನ್ನೈ, ಜನವರಿ 27: ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಹಾಗೂ ತಮಿಳುನಾಡಿನ ಪತ್ರಕರ್ತರ ನಡುವಿನ ಸಂಘರ್ಷ ಮುಂದುವರಿದಿದೆ. ಅಣ್ಣಾಮಲೈ ಅವರು ಪತ್ರಕರ್ತರಿಗೆ ಅವಹೇಳನ ಮಾಡಿರುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪ್ರತಿಭಟನೆಗಳು ನಡೆದಿವೆ. ಅಣ್ಣಾಮಲೈ ಅವರ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿವಿಧ ಪತ್ರಕರ್ತರ ಸಂಘಗಳು ಗುರುವಾರ ಚೆನ್ನೈನ ವಳ್ಳುವರ್ ಕೊಟ್ಟಂನಲ್ಲಿ ಪ್ರತಿಭಟನೆ ನಡೆಸಿವೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅಣ್ಣಾಮಲೈ ಅವರು ನ್ಯೂಸ್‌ 18 ಪತ್ರಕರ್ತ ಕಾರ್ತಿಗೈ ಸೆಲ್ವನ್ ವಿರುದ್ಧ ಹರಿಹಾಯ್ದಿದ್ದರು. ಸಚಿವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಕಾರ್ತಿಗೈ ಸೆಲ್ವನ್ ನಡೆಸಿದ ಸಂದರ್ಶನದ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಟ್ರೋಲ್‌ ಭಾಷೆಯಲ್ಲಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ಅಣ್ಣಾಮಲೈ ಅವರ ಈ ಅತಿರೇಕಿ ವರ್ತನೆಗಳನ್ನು ಖಂಡಿಸಿರುವ ಪತ್ರಕರ್ತರು ಬಿಜೆಪಿ ರಾಜ್ಯಾಧ್ಯಕ್ಷರು ಕೂಡಲೇ ಕ್ಷಮೆ ಕೇಳಬೇಕೆಂದು ಪಟ್ಟುಹಿಡಿದ್ದಾರೆ. ಆದರೆ, ಮಾಜಿ ಐಪಿಎಸ್‌ ಅಧಿಕಾರಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.

ಪ್ರತಿಭಟನೆಯನ್ನು ಪ್ರಚಾರದ ತಂತ್ರ ಎಂದು ಆರೋಪಿಸಿರುವ ಅಣ್ಣಾಮಲೈ, ಪತ್ರಕರ್ತರು ಡಿಎಂಕೆ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ‘ಎಕ್ಸ್’ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಪತ್ರಕರ್ತರು ತೆಗೆದುಕೊಂಡಿರುವ ಹಿಂದಿನ ಸಂದರ್ಶನಗಳ ಎಡಿಟ್ ಮಾಡಿದ ವಿಡಿಯೊ ತುಣುಕುಗಳನ್ನು ಸಹ ಹಂಚಿಕೊಂಡಿದ್ದಾರೆ. ಅಣ್ಣಾಮಲೈ ವಿರುದ್ಧ ಹರಿಹಾಯ್ದಿರುವ ಹಿರಿಯ ಪತ್ರಕರ್ತೆ ಕವಿತಾ ಮುರಳೀಧರನ್ ಅವರು ಟ್ರೋಲ್ ವರ್ತನೆಯ ರೀತಿಯಲ್ಲಿ ಹೇಳಿಕೆ ನೀಡಿರುವುದು ಬಿಜೆಪಿ ಪಕ್ಷದ ನಾಯಕರಿಗೆ ಯೋಗ್ಯವಲ್ಲ ಎಂದು ಹೇಳಿದ್ದಾರೆ. ಅಣ್ಣಾಮಲೈ ಅವರ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳು ಅವರನ್ನು ಬಹಿಷ್ಕರಿಸಬೇಕು ಎಂದು ನಕ್ಕೀರನ್ ಪತ್ರಿಕೆಯ ಸಂಪಾದಕ ನಕ್ಕೀರನ್ ಗೋಪಾಲ್ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ನಾಯಕರ ಹೇಳಿಕೆಯನ್ನು ಖಂಡಿಸುವ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿ ಹಿಂದೂ ಗ್ರೂಪ್ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಎನ್ ರಾಮ್, ಅಣ್ಣಾಮಲೈ ಈ ರೀತಿಯ ಟೀಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಬಿಜೆಪಿ ನಾಯಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಹೇಳಿದ್ದಾರೆ. ಬಿಜೆಪಿಯ ಹಿರಿಯ ನಾಯಕರಾದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅಣ್ಣಾಮಲೈ ಅವರು ಮಾಡಿದ ರೀತಿಯ ಟೀಕೆಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಎಂ ಕರುಣಾನಿಧಿ ಮತ್ತು ಜಯಲಲಿತಾ ಅವರನ್ನು ಪತ್ರಿಕೆಗಳು ಟೀಕಿಸಿದ್ದವು. ಆದರೆ, ಅವರು ಎಂದಿಗೂ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ ಎಂದು ರಾಮ್ ತಿಳಿಸಿದ್ದಾರೆ. ಮಾಧ್ಯಮ ಸಂಸ್ಥೆಗಳ ಪದಾಧಿಕಾರಿಗಳಾದ ಬಿ.ಆರ್. ಅರವಿಂದಾಕ್ಷನ್, ಪೀರ್ ಮಹಮ್ಮದ್, ಕವಿತಾ ಮುರಳೀಧರನ್, ಮಣಿಮಾರನ್, ಎ.ಸೆಲ್ವರಾಜ್, ಹಸೀಫ್ ಮೊಹಮ್ಮದ್, ಸಗಾಯರಾಜ್, ಮತ್ತು ಎಂ.ಪ್ರಬುಧಾಸನ್ ಅವರು ಬಿಜೆಪಿ ನಾಯಕರ ಅಸಂವೇದನಾಶೀಲ ಹೇಳಿಕೆಯನ್ನು ಖಂಡಿಸಿದರು.

Previous Post
“ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ, ಸುದೀರ್ಘ ಚರ್ಚೆ ಬಳಿಕವೇ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್
Next Post
ಶಿವರಾಮ ಕಾರಂತ ಬಡಾವಣೆ ಮೇಲ್ವಿಚಾರಣಾ ಸಮಿತಿ ರದ್ದುಗೊಳಿಸಿದ ಹೈಕೋರ್ಟ್

Recent News