ಪ್ರತಿ ತಿಂಗಳು ಮನಗೆ 300 ಯೂನಿಟ್ ಉಚಿತ ವಿದ್ಯುತ್

ಪ್ರತಿ ತಿಂಗಳು ಮನಗೆ 300 ಯೂನಿಟ್ ಉಚಿತ ವಿದ್ಯುತ್

ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಭಾಷಣದಲ್ಲಿ ಉಚಿತ ವಿದ್ಯುತ್ ಘೋಷಣೆಯನ್ನು ಮಾಡಿದ್ದಾರೆ. ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇದಾಗಿದೆ. ನಿರ್ಮಲಾ ಸೀತಾರಾಮನ್ 2024-25ನೇ ಸಾಲಿಗೆ ಬಜೆಟ್‌ ಭಾಷಣದಲ್ಲಿ ಗುರುವಾರ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕದಿಂದ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಘೋಷಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಸುವ ಗುರಿಯೊಂದಿಗೆ ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಣೆ ಮಾಡಿದ್ದಾರೆ. ಅಲ್ಲದೇ ಈ ಯೋಜನೆಗೆ ಚಾಲನೆ ನೀಡುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಯೋಜನೆ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೌರಶಕ್ತಿ ( ಸೋಲಾರ್ ರೂಫ್ ಟಾಪ್) ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸಲಿದೆ” ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ‘ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ’ ಘೋಷಣೆ ಮಾಡಲಾಗಿದೆ. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಮತ್ತು ಅವರ ವಿದ್ಯುತ್ ಅಗತ್ಯಗಳಿಗಾಗಿ ಸೌರಶಕ್ತಿ ಅವಲಂಬಿಸುವ ಮೂಲಕ ನಿಜವಾದ ಆತ್ಮನಿರ್ಭರ್ ಆಗಲು ಪ್ರತಿ ಮನೆಯವರು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಈ ಯೋಜನೆಯಡಿ 1 ಕೋಟಿ ಮನೆಯ ಮೇಲ್ಛಾವಣಿ ಮೇಲೆ ಸೌರಶಕ್ತಿ ಫಲಕ ಆಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ಮನೆಗಳು ಸೌರಶಕ್ತಿ ವಿದ್ಯುತ್ ಪಡೆಯುವ ಜೊತೆಗೆ ಹೆಚ್ಚಿನ ವಿದ್ಯುತ್‌ ಅನ್ನು ಮಾರಾಟ ಮಾಡಲು ಸಹ ಅವಕಾಶ ಕಲ್ಪಿಸಲಾಗುತ್ತದೆ. ಯೋಜನೆ ಜಾರಿಗೊಳಿಸಲು ರಾಷ್ಟ್ರ ಮಟ್ಟದ ಅಭಿಯಾನವನ್ನು ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಅರಿವು ಮೂಡಿಸಲು ಬೃಹತ್ ರಾಷ್ಟ್ರೀಯ ಮಟ್ಟದ ಅಭಿಯಾನ ನಡೆಯಲಿದೆ. ಸೌರಶಕ್ತಿಯ ಬಳಕೆಯ ಕುರಿತು ವಿಶ್ವದ ವಿವಿಧ ದೇಶಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು, ತಂತ್ರಜ್ಞಾನ ವಿನಿಮಯಕ್ಕೆ ಮಾತುಕತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಭಾರತ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ಯಡಿ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಪ್ಪಿಸಲು ಕಾರ್ಯ ಯೋಜನೆ ತಯಾರು ಮಾಡಿದೆ.

 

Previous Post
ಐದು ವರ್ಷಗಳಲ್ಲಿ ಮೂರು ಕೋಟಿ ಮನೆ ನಿರ್ಮಾಣದ ಗುರಿ
Next Post
ಆಪರೇಷನ್ ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News