ಪ. ಬಂಗಾಳ ತಲುಪಿದ ಭಾರತ್ ಜೋಡೋ ನ್ಯಾಯ ಯಾತ್ರೆ

ಪ. ಬಂಗಾಳ ತಲುಪಿದ ಭಾರತ್ ಜೋಡೋ ನ್ಯಾಯ ಯಾತ್ರೆ

ಕೋಲ್ಕತ್ತಾ, ಜ. 25: ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆ ಗುರುವಾರ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ್ದು, ಪ.ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಅವರು ಬಂಗಾಳದಲ್ಲಿ ಯಾತ್ರೆಯನ್ನು ಸ್ವಾಗತಿಸಿದ್ದಾರೆ. ಯಾತ್ರೆಯು ಕೂಚ್ ಬೆಹಾರ್ ಜಿಲ್ಲೆಯ ಬಕ್ಷಿರ್ಹತ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ.

ನ್ಯಾಯ ಯಾತ್ರೆ ಪಶ್ಚಿಮ ಬಂಗಾಳ ಪ್ರವೇಶಿಸಿದಾಗ ಕೂಚ್ ಬೆಹಾರ್‌ನಲ್ಲಿ ರಸ್ತೆಯುದ್ದಕ್ಕೂ ಜನರು ಸಾಲು ನಿಂತು ರಾಹುಲ್‌ ಗಾಂಧಿ ಸ್ವಾಗತವನ್ನು ಕೋರಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಬಂದಿದ್ದಕ್ಕೆ ಖುಷಿಯಾಗಿದೆ. ನಿಮ್ಮ ಮಾತನ್ನು ಕೇಳಲು ಮತ್ತು ನಿಮ್ಮೊಂದಿಗೆ ದೃಢವಾಗಿ ನಿಲ್ಲಲು ನಾವು ಇಲ್ಲಿಗೆ ಬಂದಿದ್ದೇವೆ. ದೇಶಾದ್ಯಂತ ಅನ್ಯಾಯದ ವಿರುದ್ಧ ಪ್ರತಿಪಕ್ಷ INDIA ಬಣ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಅನ್ಯಾಯ ನಡೆಯುತ್ತಿರುವುದರಿಂದ ‘ನ್ಯಾಯ’ ಪದವನ್ನು ಯಾತ್ರೆಗೆ ಸೇರಿಸಿದ್ದೇವೆ. ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ. INDIA ಬಣವು ದೇಶದಾದ್ಯಂತ ಅನ್ಯಾಯದ ವಿರುದ್ಧ ಹೋರಾಟವನ್ನು ನಡೆಸುತ್ತದೆ ಎಂದು ಹೇಳಿದ್ದಾರೆ. ಅಸ್ಸಾಂನ ಗೌರಿಪುರದಲ್ಲಿ ರಾತ್ರಿ ತಂಗಿದ್ದ ರಾಹುಲ್‌ ಗಾಂಧಿ ಅಸ್ಸಾಂನಲ್ಲಿ ಕೊನೆಯ ದಿನದ ಯಾತ್ರೆಯ ಭಾಗವಾಗಿ ವಾಹನದಲ್ಲಿ ಸ್ವಲ್ಪ ದೂರದವರೆಗೆ ಸಾಗಿದರು. ಅಸ್ಸಾಂನ ಧುಬ್ರಿ ಜಿಲ್ಲೆಯ ಗೋಲಕ್‌ಗಂಜ್ ಮೂಲಕ ಸಾಗಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಅಸ್ಸಾಂನಲ್ಲಿ ಮುಕ್ತಾಯಗೊಂಡಿದೆ. ಅಸ್ಸಾಂನಲ್ಲಿ ಯಾತ್ರೆ ವೇಳೆ ಅಸ್ಸಾಂನ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ನಡೆದಿತ್ತು.

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಹಿಂಸಾಚಾರ, ಪ್ರಚೋದನೆ, ಹಲ್ಲೆ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ. ಅಸ್ಸಾಂನ ಗುವಾಹಟಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಮುಂದುವರಿದಾಗ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಜೋರ್ಹತ್ ಜಿಲ್ಲಾ ಪೊಲೀಸರು ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದು, ಜನವರಿ 31ರಂದು ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ.ಬಂಗಾಳದಲ್ಲಿ ರಾಹುಲ್‌ ಗಾಂಧಿಯವರು ಇತರ ಹಿರಿಯ ನಾಯಕರೊಂದಿಗೆ ಟೀ ಸ್ಟಾಲ್‌ವೊಂದಕ್ಕೆ ಭೇಟಿ ನೀಡಿ ಅಲ್ಲಿನ ಬಡ ಮತ್ತು ಹಿಂದುಳಿದ ವರ್ಗದ ಜನರೊಂದಿಗೆ ಸಂವಹನ ನಡೆಸಿದ್ದಾರೆ.

ಕಳೆದ ವರ್ಷ ರಚನೆಯಾದ 28 ವಿರೋಧ ಪಕ್ಷಗಳನ್ನೊಳಗೊಂಡ ಪ್ರತಿಪಕ್ಷಗಳ ಒಕ್ಕೂಟವಾದ INDIA ಬಣದ ಜೊತೆಗೆ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಣಿಸಿಕೊಂಡಿದ್ದರು. ಬಂಗಾಳದಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಇದಾದ ಒಂದು ದಿನದ ಬಳಿಕ ಭಾರತ್‌ ಜೋಡೋ ನ್ಯಾಯ ಯಾತ್ರೆ ಬಂಗಾಳವನ್ನು ಪ್ರವೇಶಿಸಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14ರಂದು ಮಣಿಪುರದಿಂದ ಪ್ರಾರಂಭವಾಯಿತು ಮತ್ತು ಮಾರ್ಚ್ 20ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

Previous Post
ಕ್ಯಾನ್ಸರ್‌ನಿಂದ ಬಳಲುತ್ತಿದ್ದ 7 ವರ್ಷದ ಮಗುವನ್ನು ಗಂಗಾ ನದಿಯಲ್ಲಿ ಅದ್ದಿದ ಪೋಷಕರು: ಉಸಿರು ಚೆಲ್ಲಿದ ಕೂಸು
Next Post
ಮನುಸ್ಮೃತಿ ಉಲ್ಲೇಖಿಸಿ ಜಾರ್ಖಂಡ್ ಹೈಕೋರ್ಟ್ ತೀರ್ಪು

Recent News