ಪ.ಬಂಗಾಳ: ಸದನದಲ್ಲಿ ಬಿಜೆಪಿ ಶಾಸಕರಿಂದ ಹೈಡ್ರಾಮ: 6 ಮಂದಿ ಅಮಾನತು

ಪ.ಬಂಗಾಳ: ಸದನದಲ್ಲಿ ಬಿಜೆಪಿ ಶಾಸಕರಿಂದ ಹೈಡ್ರಾಮ: 6 ಮಂದಿ ಅಮಾನತು

ಕೋಲ್ಕತ್ತಾ, ಫೆ. 12: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿ ಹೈಡ್ರಾಮ ಮಾಡಿದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ಶಾಸಕರನ್ನು ಸ್ಪೀಕರ್‌ ಅಮಾನತು ಮಾಡಿದ್ದಾರೆ. ಭೂ ಕಬಳಿಕೆ ಆರೋಪದ ಮೇಲೆ ಟಿಎಂಸಿ ನಾಯಕ ಶಹಜಹಾನ್ ಶೇಖ್ ಮತ್ತು ಅವರ ಇಬ್ಬರು ಸಹಾಯಕರನ್ನು ಬಂಧಿಸುವಂತೆ ಕೋರಿ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಬಿಜೆಪಿ ಬೆಂಬಲಿತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇದೇ ಘಟನೆ ಬಗ್ಗೆ ಪಶ್ಚಿಮ ಬಂಗಾಳ ವಿಧಾನಸಭೆಗೆ ಎಳೆದು ತಂದು ಸುವೇಂದು ಅಧಿಕಾರಿ ಸೇರಿದಂತೆ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಸೃಷ್ಟಿಸಿ ಸದನದ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದರು.

ಬಂಗಾಳ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಜೊತೆಗೆ ಮಿಹಿರ್ ಗೋಸ್ವಾಮಿ, ಶಂಕರ್ ಘೋಷ್, ತಾಪಸಿ ಮೊಂಡೋಲ್, ಅಗ್ನಿಮಿತ್ರ ಪಾಲ್ ಮತ್ತು ಬಂಕಿಮ್ ಘೋಷ್ ಅವರನ್ನು ಅಮಾನತು ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಬಿಜೆಪಿಯ ಎಲ್ಲ ಶಾಸಕರು ಟೀ ಶರ್ಟ್‌ ಧರಿಸಿಕೊಂಡು ಅಧಿವೇಶನಕ್ಕೆ ಬಂದಿದ್ದು, ‘ನಾವು ಸಂದೇಶ ಖಾಲಿ ಜೊತೆಗಿದ್ದೇವೆ’ ಎಂದು ಅದರಲ್ಲಿ ಬರೆಯಲಾಗಿತ್ತು, ಘಟನೆಯ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದನದಲ್ಲಿ ಮಾತನಾಡಬೇಕು ಎಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದರು.

ಟಿ-ಶರ್ಟ್‌ಗಳನ್ನು ನೋಡಿದ ಸ್ಪೀಕರ್ ಬಿಮನ್ ಬ್ಯಾನರ್ಜಿ, ಅದನ್ನು ತೆಗೆಯಲು ವಿರೋಧ ಪಕ್ಷದ ಶಾಸಕರಿಗೆ ನಿರ್ದೇಶನ ನೀಡುವಂತೆ ಸುವೇಂದು ಅಧಿಕಾರಿಗೆ ಮನವಿ ಮಾಡಿದ್ದಾರೆ, ಆದರೆ ಅವರು ನಿರಾಕರಿಸಿದ್ದರು. ಟೀ-ಶರ್ಟ್‌ಗಳ ಮೇಲೆ ಆಕ್ಷೇಪಾರ್ಹವಾದ ಪದಗಳನ್ನು ಬರೆಯಲಾಗಿಲ್ಲವಾದ್ದರಿಂದ ಅವುಗಳನ್ನು ಏಕೆ ತೆಗೆಯಬೇಕು ಎಂದು ಸುವೇಂದು ಅಧಿಕಾರಿ ಕೇಳಿದ್ದರು. ನಂತರ ಸ್ಪೀಕರ್‌ ಮನವಿಯನ್ನು ಧಿಕ್ಕರಿಸಿ ಸದನದ ಬಾವಿಯ ಕೆಳಗೆ ಕುಳಿತು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದರಿಂದ ಸ್ಪೀಕರ್ ಆರು ಶಾಸಕರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಫೆಬ್ರವರಿ 10ರಂದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದೆ. ಪಡಿತರ ಹಗರಣದಲ್ಲಿ ತಲೆ ಮರೆಸಿಕೊಂಡಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಮಹಿಳೆಯರು ಮೆರವಣಿಗೆ ನಡೆಸಿದ್ದರು. ಜಾರಿ ನಿರ್ದೇಶನಾಲಯ ತಂಡವು ಷಹಜಹಾನ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಲು ಹೋದಾಗ ಅವರ ಮೇಲೆ ಹಲ್ಲೆ ಕೂಡ ನಡೆದಿತ್ತು. ಸ್ಥಳೀಯ ಮಹಿಳೆಯರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಂದೇಶ ಖಾಲಿಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಶೇಖ್ ಷಹಜಹಾನ್ ಮತ್ತು ಅವರ ತಂಡದ ಸದಸ್ಯರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಡ ಪ್ರತಿಭಟನಾನಿರತರು ಆರೋಪಿಸಿದ್ದರು. ಈ ಬಗ್ಗೆ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲವನ್ನುಂಟುಮಾಡಿದ್ದು, ಅವರನ್ನು ಸ್ಪೀಕರ್‌ ಅಮಾನತು ಮಾಡಿದ್ದಾರೆ.

Previous Post
ವಿಶ್ವಾಸ ಸಾಬೀತುಪಡಿಸಿದ ನಿತೀಶ್ ಕುಮಾರ್, ಆರ್‌ಜೆಡಿ ಬಹಿಷ್ಕಾರ
Next Post
ತಮಿಳುನಾಡು ವಿಧಾನಸಭೆ ವಾಡಿಕೆ ಭಾಷಣ ಮಾಡಲು ರಾಜ್ಯಪಾಲ ರವಿ ನಕಾರ

Recent News