ಬಂಧನ ಪ್ರಶ್ನಿಸಿ ಹೇಮಂತ್ ಸೊರೆನ್ ಸುಪ್ರೀಂ ಮೊರೆ

ಬಂಧನ ಪ್ರಶ್ನಿಸಿ ಹೇಮಂತ್ ಸೊರೆನ್ ಸುಪ್ರೀಂ ಮೊರೆ

ನವದೆಹಲಿ, ಫೆ. 1: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಗುರುವಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ ಎಂ ಸಿಂಘ್ವಿ ಅವರು ಸೊರೆನ್ ಪರವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ, ತುರ್ತು ವಿಚಾರಣೆಯನ್ನು ಕೋರಿದ್ದರು.

‘ಇಡಿ’ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ, ಆದರೆ ಹೈಕೋರ್ಟ್‌ನಿಂದ ಅರ್ಜಿಯನ್ನು ಹಿಂಪಡೆಯುವುದಾಗಿ ಕಪಿಲ್‌ ಸಿಬಲ್ ಹೇಳಿದ್ದಾರೆ. ಹೇಮಂತ್‌ ಸೋರೆನ್ ಪರ ವಕೀಲರು ಇದು ಅತ್ಯಂತ ಗಂಭೀರವಾದ ವಿಷಯ ಎಂದು ಪ್ರತಿಪಾದಿಸಿದ್ದಾರೆ. ಏಕೆಂದರೆ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ ಇದು ದೇಶದ ರಾಜಕೀಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಕೋರ್ಟ್‌ ಗಮನಕ್ಕೆ ತಂದಿದ್ದಾರೆ. ಬುಧವಾರ ಸಂಜೆ 5 ಗಂಟೆಗೆ ಹೇಮಂತ್‌ ಸೋರೆನ್ ಅವರನ್ನು ಬಂಧಿಸಲಾಗಿದೆ ಎಂದು ಸೋರೆನ್ ಅವರ ವಕೀಲರು ಹೇಳಿದ್ದಾರೆ. ಆದರೆ ಬಂಧನ ಮೆಮೊದಲ್ಲಿ ರಾತ್ರಿ 10 ಗಂಟೆಗೆ ಬಂಧಿಸಲಾಗಿದೆ ಎಂದು ನಮೂದಿಸಲಾಗಿದೆ ಎಂದು ಕೋರ್ಟ್‌ನಲ್ಲಿ ಹೇಳಿದ್ದಾರೆ.

‘ಇಡಿ’ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಕೋರ್ಟ್‌ನಲ್ಲಿ ಹೇಳಿದ್ದಾರೆ. ಶುಕ್ರವಾರ ಈ ವಿಷಯವನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಪೀಠ ಹೇಳಿದ್ದು, ಸಿಜೆಐ ನೇತೃತ್ವದ ವಿಶೇಷ ಪೀಠ ಈ ಕುರಿತು ವಿಚಾರಣೆಯನ್ನು ನಡೆಸಲಾಗಿದೆ. ಜಾರ್ಖಾಂಡ್‌ ಸಿಎಂ ಹೇಮಂತ್ ಸೊರೆನ್ ಅವರನ್ನು ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೂ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಆ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಭೂ ಹಗರಣ ಪ್ರಕರಣವು ಸರ್ಕಾರಿ ಜಮೀನಿನ ಮಾಲೀಕತ್ವವನ್ನು ಬದಲಾಯಿಸುವ ಮತ್ತು ಅದನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡುವ ದೊಡ್ಡ ದಂಧೆಯನ್ನು ಒಳಗೊಂಡಿದೆ ‘ಇಡಿ’ ಆರೋಪಿಸಿದೆ. ಈ ಪ್ರಕರಣದಲ್ಲಿ 2011ರ ಬ್ಯಾಚ್‌ನ ಐಎಎಸ್ ಅಧಿಕಾರಿ ಛಾವಿ ರಂಜನ್ ಅವರು ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ರಾಂಚಿಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ 14 ಜನರನ್ನು ಇದುವರೆಗೆ ಬಂಧಿಸಲಾಗಿದೆ.

Previous Post
‘ತಂತ್ರಜ್ಞಾನ ಸಂಶೋಧನೆ & ಅಭಿವೃದ್ಧಿ ಕ್ಷೇತ್ರಕ್ಕೆ 1 ಲಕ್ಷ ಕೋಟಿ ನಿಧಿ ಮೀಸಲು, ಬೆಂಗಳೂರು ನಗರಕ್ಕೆ ಹೆಚ್ಚಿನ ಲಾಭ’ : ಸಂಸದ ಶ್ರೀ ತೇಜಸ್ವೀ ಸೂರ್ಯ
Next Post
ಗೋ ಹತ್ಯೆ ಮಾಡಿ ಮುಸ್ಲಿಂ ವ್ಯಕ್ತಿ ಸಿಲುಕಿಸಲು ಯತ್ನ: ಬಜರಂಗದಳದ ಜಿಲ್ಲಾಧ್ಯಕ್ಷ ಸೇರಿ ನಾಲ್ವರ ಬಂಧನ

Recent News