ಬಜೆಟ್‌ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ಬಜೆಟ್‌ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

ನವದೆಹಲಿ, ಜನವರಿ 29: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ 2024ರ ಮುಂಗಡ ಪತ್ರವನ್ನು ಅಥವಾ ಬಜೆಟ್‌ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಲಿದ್ದು, ಅಧಿವೇಶನಕ್ಕೆ ಮುನ್ನಾ ಕೇಂದ್ರ ಸರ್ಕಾರ ಜನವರಿ(30) ಮಂಗಳವಾರ ಸರ್ವಪಕ್ಷಗಳ ಸಭೆ ಕರೆದಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸಭೆ ಕರೆದಿದ್ದು, ಜನವರಿ 30 ರಂದು ಮಧ್ಯಾಹ್ನ ಸಂಸತ್ತಿನ ಆವರಣದಲ್ಲಿ ಸಭೆ ನಡೆಯಲಿದೆ. ಈ ವೇಳೆ ಸರ್ಕಾರ ಸುಗಮ ಕಲಾಪ ನಡೆಸಲು ಎಲ್ಲಾ ಪಕ್ಷಗಳ ಸಹಕಾರ ಕೋರುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಈ ಬಾರಿ ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 9 ರ ನಡುವೆ ಸಣ್ಣ ಅಧಿವೇಶನವಾಗಿದ್ದು, ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ಅನ್ನು ಮಂಡಿಸಲಿದ್ದಾರೆ. ಬಳಿಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷಗಳು ಕೂಡ ಕಲಾಪಕ್ಕೆ ಸಜ್ಜಾಗುತ್ತಿದೆ. ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್‌ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಅಧಿವೇಶನದಲ್ಲಿ ಚರ್ಚಿಸಲು ಪ್ರತಿಪಕ್ಷದ ನಾಯಕರು ಸಿದ್ಧರಾಗುತ್ತಿದ್ದಾರೆ.

ತಿಪಕ್ಷಗಳು ಈಗಾಗಲೇ ಯೋಜಿಸಿಕೊಂಡಿರುವ ಅನೇಕ ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾರ್ಯತಂತ್ರ ರೂಪಿಸಿವೆ. ಸರ್ವಪಕ್ಷ ಸಭೆ ಬಳಿಕ ಮಧ್ಯಾಹ್ನ ಎನ್‌ಡಿಎ ಸಂಸದೀಯ ನಾಯಕರ ಸಭೆಯೂ ನಡೆಯಲಿದ್ದು, ಆಡಳಿತಾರೂಢ ಪಕ್ಷ ಅಧಿವೇಶನದ ಕಾರ್ಯತಂತ್ರ ರೂಪಿಸಲಿದೆ. ಬಜೆಟ್‌ನ ಹಲ್ವಾ ಸಮಾರಂಭ ಸಂಪನ್ನ ಇನ್ನು ಬಜೆಟ್‌ನ ಒಂದು ಅವಿಭಾಜ್ಯ ಆರಂಭಿಕ ಸಂಪ್ರದಾಯವು ‘ಹಲ್ವಾ ಸಮಾರಂಭ’ ಕೂಡ ನಡೆದಿದೆ. ಇದು ಬಜೆಟ್‌ಗೆ ಸಂಬಂಧಿಸಿದ ವಿವಿಧ ದಾಖಲೆಗಳ ಮುದ್ರಣ ಪ್ರಕ್ರಿಯೆಯ ಅಧಿಕೃತ ಪ್ರಾರಂಭದ ಸೂಚಕವಾಗಿದ್ದು, ಪ್ರತಿ ಬಜೆಟ್‌ ಮುನ್ನ ಮಾಡಲಾಗುತ್ತದೆ. ಪ್ರತಿ ವರ್ಷ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುವ ಸುಮಾರು 9 ರಿಂದ 10 ದಿನಗಳ ಮೊದಲು ಹಣಕಾಸು ಸಚಿವಾಲಯವು ‘ಹಲ್ವಾ ಸಮಾರಂಭ’ವನ್ನು ಆಯೋಜಿಸುತ್ತದೆ. ಹಣಕಾಸು ಸಚಿವರು ಆಯೋಜಿಸುವ ಮತ್ತು ಇತರ ಅಧಿಕಾರಿಗಳು ಭಾಗವಹಿಸುವ ಈ ಸಮಾರಂಭವು ಹಲವಾರು ತಿಂಗಳುಗಳ ಕಾಲ ವ್ಯಾಪಕವಾದ ಬಜೆಟ್ ತಯಾರಿಕೆಯ ಕಾರ್ಯವಿಧಾನದ ಅಂತಿಮ ಹಂತಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕೃತವಾಗಿ ಸಮಾರಂಭದ ಆರಂಭವನ್ನು ಇದು ಸೂಚಿಸುತ್ತದೆ.

Previous Post
ಪ್ರಧಾನಿ ನರೇಂದ್ರ ಮೋದಿ ಇಂದು ಪರೀಕ್ಷಾ ಪೇ ಚರ್ಚಾದಲ್ಲಿ ‘ವಿದ್ಯಾರ್ಥಿಗಳೊಂದಿಗೆ’ ಸಂವಾದ ನಡೆಸಿದರು
Next Post
ಶಾಲಾ ಬಸ್‌ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವು: ಪರಿಹಾರ ಘೋಷಿಸಿದ ಸಿಎಂ

Recent News