ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಬೃಂದಾ ಕಾರಟ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಬೃಂದಾ ಕಾರಟ್

ನವದೆಹಲಿ, ಫೆ. 13: ದಿಲ್ಲಿ ಚಲೋ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ(ಎಂ)ನ ಹಿರಿಯ ನಾಯಕಿ ಬೃಂದಾ ಕಾರಟ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ವಾಸ್ತವ ಕೋಟೆಯಾಗಿ ಮಾರ್ಪಟ್ಟಿದೆ, ಅಧಿಕಾರಿಗಳು ರೈತರನ್ನು ನಗರಕ್ಕೆ ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ. ರೈತರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅವರು ಬಿಜೆಪಿ ಸರಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.

ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದ ಸಾವಿರಾರು ರೈತರನ್ನು ಅಧಿಕಾರಿಗಳು ಗಡಿಗಳಲ್ಲಿ ತಡೆದ ಬೆನ್ನಲ್ಲಿ ಬೃಂದಾ ಕಾರಟ್ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಏಕೆ ಹೇಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರವು ರೈತರು ಮತ್ತು ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೆ ಅವರಿಗೆ ದ್ರೋಹ ಎಸಗಿದೆ. ಕೇಂದ್ರ ಸರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನನ್ನು ಏಕೆ ಜಾರಿಗೆ ತಂದಿಲ್ಲ? ಖ್ಯಾತ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನವನ್ನು ಯಾಕೆ ತಡವಾಗಿ ಘೋಷಿಸಲಾಗಿದೆ? ಸ್ವಾಮಿನಾಥನ್ ಅವರು ರೈತರ ಹಕ್ಕುಗಳ ಪರವಾಗಿ ನಿಂತವರು, ಆದರೆ ರೈತರಿಗೆ ಸಹಾಯ ಮಾಡುವ ಸ್ವಾಮಿನಾಥನ್ ಸೂತ್ರವನ್ನು ಕೇಂದ್ರವು ಜಾರಿಗೆ ತಂದಿಲ್ಲ. ಅನ್ನದಾತರ ಅನುಕೂಲಕ್ಕಾಗಿ ಸ್ವಾಮಿನಾಥನ್‌ ಆಯೋಗವು ನೀಡಿದ್ದ ಶಿಫಾರಸುಗಳನ್ನು ಇನ್ನೂ ಜಾರಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ ರೈತರು ಪ್ರಧಾನಿ ನೀಡಿದ ಆಶ್ವಾಸನೆಗಳನ್ನು ಪ್ರಹಸನ ಮತ್ತು ವಂಚನೆ ಎಂದು ಕರೆಯುತ್ತಿದ್ದಾರೆ, ಭಾರತದಾದ್ಯಂತ ರೈತರು ಫೆಬ್ರವರಿ 16ರಂದು ‘ಗ್ರಾಮೀಣ ಬಂದ್’ ಆಚರಿಸಲಿದ್ದಾರೆ. ಇದು ಕಾರ್ಮಿಕ ವರ್ಗದ ದೊಡ್ಡ ಹೋರಾಟವಾಗಿದೆ ಎಂದು ಬೃಂದಾ ಕಾರಟ್‌ ಹೇಳಿದ್ದಾರೆ. ಎಂಎಸ್‌ಪಿಗೆ ಕಾನೂನು ಖಾತರಿಯ ಜೊತೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ ಮತ್ತು ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ನ ವಿವಿಧ ಗ್ರಾಮಗಳಿಂದ ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಒಣ ಪಡಿತರ, ವಾಟರ್ ಪ್ರೂಫ್ ಶೀಟ್‌ಗಳು ಮತ್ತು ಹಾಸಿಗೆಗಳನ್ನು ತುಂಬಿಕೊಂಡು ರಾಷ್ಟ್ರ ರಾಜಧಾನಿಯತ್ತ ತೆರಳಲು ಪ್ರಾರಂಭಿಸಿದ್ದರು. ಶಂಭು ಗಡಿಯಲ್ಲಿ ಪ್ರತಿಭಟನೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹರ್ಯಾಣ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಗಡಿಯಲ್ಲಿ ರೈತರ ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Previous Post
ದಿಲ್ಲಿ ಚಲೋ ಬಗ್ಗೆ ಬಲಪ್ರಯೋಗ ಕೊನೆ ಆಯ್ಕೆಯಾಗಬೇಕು: ಹೈಕೋರ್ಟ್
Next Post
‘ದಿಲ್ಲಿ ಚಲೋ’: ಈಡೇರದೆ ಉಳಿದಿರುವ ರೈತರ ಪ್ರಮುಖ ಬೇಡಿಕೆಗಳೇನು?

Recent News