ಬಿಜೆಪಿ ಬಗ್ಗೆ ಜಗನ್ ಗರಂ

ಬಿಜೆಪಿ ಬಗ್ಗೆ ಜಗನ್ ಗರಂ

ಬಿಜೆಪಿಯೊಂದಿಗೆ ಬಹಳ ಆತ್ಮೀಯತೆಯಿಂದ ಇದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಕಳೆದ ಎರಡು ವಾರಗಳಿಂದ ತನ್ನ ವರಸೆ ಬದಲಿಸಿದ್ದಾರೆ. ಅದರಲ್ಲೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರುತ್ತಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ ಜಗನ್ ಬಿಜೆಪಿ ಬಗ್ಗೆ ಗರಂ ಆಗಿದ್ದಾರೆ. ದಕ್ಷಿಣದ ಇತರ ರಾಜ್ಯಗಳಂತೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂದಿದ್ದಾರೆ. ಜಗನ್‌ಮೋಹನ್‌ ರೆಡ್ಡಿ ಆಂಧ್ರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆಡಿರುವ ಮಾತುಗಳು ರಾಜಕೀಯ ಚರ್ಚೆಗೆ ಕಾರಣವಾಗಿದೆ.

‘ಯಾವುದೇ ಪಕ್ಷವು ಕೇಂದ್ರದಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಬಾರದು ಎಂದು ನಾನು ಬಯಸುತ್ತೇನೆ. ಯಾಕೆಂದರೆ, ನಮ್ಮ ಬೆಂಬಲವನ್ನು ನೀಡಿದ್ದಕ್ಕೆ ಪ್ರತಿಯಾಗಿ ನಾವು ವಿಶೇಷ ಸ್ಥಾನಮಾನವನ್ನು ಕೇಳಬಹುದು’ ಎಂದಿದ್ದಾರೆ ಜಗನ್‌ಮೋಹನ್‌ ರೆಡ್ಡಿ. ಪವರ್‌ಪಾಯಿಂಟ್ ಪ್ರಸ್ತುತಿಯ ಮೂಲಕ ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಸದನಕ್ಕೆ ವಿವರಿಸಿರುವ ಜಗನ್, ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಕಡಿಮೆ ಪಾಲು ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಆಂಧ್ರ ಪ್ರದೇಶ ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಾಕ್ಷಿಯಾಗಲಿದೆ. ಈ ಹೊತ್ತಿನಲ್ಲಿ ವೈಎಸ್ ಜಗನ್ ಆಡಿರುವ ಮಾತಗಳು ಬಹಳ ಮಹತ್ವ ಪಡೆದುಕೊಂಡಿವೆ.

 

Previous Post
ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ನಾಟ್ ಓಕೆ
Next Post
ಬಿಜೆಪಿಗೆ ದಕ್ಷಿಣ ಭಾರತ ತಂದ ಸಂಕಷ್ಟ

Recent News