ಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಪ್ರಸಾರ: ಚಾನೆಲ್‌ ಲೈಸೆನ್ಸ್ ಅಮಾನತು

ಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಪ್ರಸಾರ: ಚಾನೆಲ್‌ ಲೈಸೆನ್ಸ್ ಅಮಾನತು

ಮುಂಬೈ, ಜ. 10: ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಕಿರಿತ್ ಸೋಮಯ್ಯ ಅವರ ಕುರಿತಾದ ಸೆಕ್ಸ್ ಟೇಪ್ ಸುದ್ದಿ ಪ್ರಸಾರ ಮಾಡಿದ ನಂತರ, ‘ಲೋಕಶಾಹಿ’ ಮರಾಠಿ ಸುದ್ದಿವಾಹಿನಿಯ ಪರವಾನಗಿಯನ್ನು ಎರಡನೇ ಬಾರಿಗೆ ಕೇಂದ್ರ ಸರ್ಕಾರ 30 ದಿನಗಳವರೆಗೆ ಅಮಾನತುಗೊಳಿಸಿದೆ.

ಜುಲೈ 17, 2023ರಂದು ಪ್ರಸಾರವಾದ ವರದಿಯ ಮೇಲೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಕಳೆದ ವರ್ಷ ಚಾನೆಲ್ ಅಮಾನತು ಸೂಚನೆಯನ್ನು ಸ್ವೀಕರಿಸಿತ್ತು. ಈಗ ಸರ್ಕಾರ ಚಾನೆಲ್‌ನ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಹಿಂದಿನ ಸೂಚನೆಯು 72 ಗಂಟೆಗಳ ಕಾಲ ಇತ್ತು. ಇದರ ವಿರುದ್ಧ ವಾಹಿನಿ ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಕೇಂದ್ರದ ಆದೇಶವನ್ನು ಕೋರ್ಟ್ ರದ್ದುಗೊಳಿಸಿದೆ.

ಚಾನೆಲ್‌ನ ಪ್ರೈಮ್‌ ಟೈಮ್‌ ಸುದ್ದಿಯಲ್ಲಿ ಬಿಜೆಪಿ ನಾಯಕನ ಲೈಂಗಿಕ ವೀಡಿಯೊವನ್ನು ಆಧರಿಸಿದೆ ಎಂಬ ಆರೋಪವಿದೆ. ಚಾನೆಲ್‌ನ ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಅವರು ಎಡಿಟ್ ಮಾಡಿದ ವೀಡಿಯೊದ ವಿಷಯವನ್ನು ಪ್ರಸ್ತುತಪಡಿಸಿ, ‘ಕಿರಿತ್ ಸೋಮಯ್ಯ ಹನಿ ಟ್ರಾಪ್ ಆಗಿದ್ದಾರೆಯೇ’ ಎಂದು ಪ್ರಶ್ನಿಸಿದ್ದರು. ವಿರೋಧ ಪಕ್ಷದ ನಾಯಕರು ಅವರ ಮೇಲೆ ಲೈಂಗಿಕ ದುರ್ನಡತೆ ಮತ್ತು ಸುಲಿಗೆ ಆರೋಪವನ್ನು ಮಾಡಿದರು. ಸುದ್ದಿ ಪ್ರಸಾರವಾದ ನಂತರ ಸೋಮಯ್ಯ ಅವರು, ಮುಂಬೈ ಪೊಲೀಸ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಗೆ ದೂರು ಸಲ್ಲಿಸಿದ್ದರು. ‘ನನ್ನ ಸಾರ್ವಜನಿಕ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ’ ಎಂದು ಆರೋಪಿಸಿ ಬಾಂಬೆ ಹೈಕೋರ್ಟಿಗೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

ಯಾರ ಹೆಸರಿನಲ್ಲಿ ಪರವಾನಗಿ ನೀಡಲಾಗಿದೆಯೋ ಹಾಗೂ ಚಾನೆಲ್‌ನ ನಿರ್ವಾಹಕರ ಹೆಸರು ಒಂದೇ ಆಗಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರವು ಈಗ ವಾಹಿನಿಯ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂದು ಸಚಿವಾಲಯದ ಹೆಸರಿಸದ ಮೂಲಗಳು ಪತ್ರಿಕೆಗೆ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆರು ತಿಂಗಳಲ್ಲಿ ಎರಡನೇ ಬಾರಿಗೆ ಚಾನೆಲ್ ವಿರುದ್ಧ ಕ್ರಮ ಕೈಗೊಂಡ ನಂತರ ಜನಪ್ರಿಯ ಮರಾಠಿ ಸುದ್ದಿ ವಾಹಿನಿ ಲೋಕಶಾಹಿ ಪ್ರಸಾರ ಸ್ಥಗಿತಗೊಳಿಸಲಾಗಿದೆ. ಚಾನೆಲ್‌ನ ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಅವರು ಅಮಾನತಿನ ವಿರುದ್ಧ ಮಾತನಾಡಿ, “ಕಾನೂನು ಬದ್ಧವಾಗಿ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.

‘ಚಾನೆಲ್ ತನ್ನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಸಲ್ಲಿಸಲು ವಿಫಲವಾದ ನಂತರ ಮಂಗಳವಾರ 30 ದಿನಗಳ ಕಾಲ ಪ್ರಸಾರವನ್ನು ಅಮಾನತು ಮಾಡಲಾಗಿದೆ. ಮಂಗಳವಾರ ಸಂಜೆ 5.30ರ ಸುಮಾರಿಗೆ ನಮಗೆ ಆದೇಶ ಬಂದಿದ್ದು, ಸಂಜೆ 6 ಗಂಟೆ ವೇಳೆಗೆ ಚಾನೆಲ್ ಪ್ರಸಾರ ಸ್ಥಗಿತಗೊಂಡಿದೆ. ಮಾಹಿ ಮತ್ತು ಪ್ರಸಾರ ಸಚಿವಾಲಯವು ನಮ್ಮ ಪರವಾನಗಿಯನ್ನು ಅಮಾನತುಗೊಳಿಸಿದೆ. ನಾವು ಅದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲಿದ್ದೇವೆ. ಇದು ಇತಿಹಾಸದಲ್ಲಿ 30 ದಿನಗಳ ಕಾಲ ಚಾನೆಲ್ ಅನ್ನು ಮುಚ್ಚುವಂತೆ ಕೇಳಲಾದ ಮೊದಲ ನಿದರ್ಶನವಾಗಿದ್ದು, ನಾವು ಹೆದರುವುದಿಲ್ಲ’ ಎಂದು ಮುಖ್ಯ ಸಂಪಾದಕ ಕಮಲೇಶ್ ಸುತಾರ್ ಬುಧವಾರ ತಿಳಿಸಿದ್ದಾರೆ.

ಜುಲೈ 2023 ರಲ್ಲಿ, ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ “ಸೆಕ್ಸ್ ವೀಡಿಯೋ” ದ ಸುದ್ದಿಯನ್ನು ಲೋಕಶಾಹಿಯನ್ನು ಪ್ರಸಾರ ಮಾಡಿತ್ತು. ಆ ನಂತರ, ಕಂಪನಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಲ್ಲಿಸದ ಕಾರಣ ಸಚಿವಾಲಯವು ವಾಹಿನಿಗೆ ನೀಡಿದ್ದ ಪರವಾನಗಿಯನ್ನು ಅಮಾನತು ಮಾಡಿದೆ. ‘ಲೋಕಾಹಿ ಯಾವಾಗಲೂ ಸುದ್ದಿ ಮತ್ತು ಸತ್ಯಗಳನ್ನು ನ್ಯಾಯಯುತ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಪ್ರಸ್ತುತಪಡಿಸಿದೆ. ನಾವು ಸರ್ಕಾರದ ಉತ್ತಮ ಪುಸ್ತಕಗಳಲ್ಲಿ ಇಲ್ಲದಿರಬಹುದು. ಆದರೆ ನಮ್ಮ ವಾಸ್ತವಿಕ ವರದಿಯನ್ನು ಮೆಚ್ಚುವ ಜನರ ಹೃದಯದಲ್ಲಿ ನಾವು ವಾಸಿಸುತ್ತೇವೆ. ಅಧಿಕಾರದಲ್ಲಿ ಇರುವವರ ತಪ್ಪು ಕೆಲಸಗಳ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ಹೊಂದಿದ್ದೇವೆ’ ಸುತಾರ್ ಹೇಳಿದ್ದಾರೆ.

‘ವಾಹಿನಿಯು ಗುಜರಾತ್ ಸಮಾಚಾರ್ ಮತ್ತು ಸ್ವರಾಜ್ ಮರಾಠಿ ಬ್ರಾಡ್‌ಕಾಸ್ಟಿಂಗ್ ಎಲ್ಎಲ್‌ಪಿ ನಡುವಿನ ಪಾಲುದಾರಿಕೆಯ ಉದ್ಯಮವಾಗಿದೆ’ ಎಂದು ಅವರು ಹೇಳಿದರು. ‘ಪರವಾನಗಿಯು ಒಬ್ಬ ಪಾಲುದಾರನ ಹೆಸರಿನಲ್ಲಿದೆ ಮತ್ತು ಇನ್ನೊಬ್ಬರು ಕಾರ್ಯಾಚರಣೆಯನ್ನು ನಡೆಸುತ್ತಾರೆ. ಸಚಿವಾಲಯವು ಇದನ್ನು ಆಕ್ಷೇಪಿಸಿದೆ. ಪರವಾನಗಿಯನ್ನು ನೀಡಿದ ಸಂಸ್ಥೆಯಿಂದ ಎಲ್ಲವನ್ನೂ ಮಾಡುವಂತೆ ನೋಡಿಕೊಳ್ಳಲು ಕೇಳಿದೆ. ನಾವು ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದ್ದೆವು. ನಾವು ಅದನ್ನು ಮಾಡುವ ಮೊದಲೇ, ಅವರು ಚಾನಲ್ ಅನ್ನು ಮುಚ್ಚಿದ್ದಾರೆ; ಇದು ಕಠಿಣ ನಿರ್ಧಾರ. ನಮ್ಮ ರೀತಿ ಅರವತ್ತು ಸಂಸ್ಥೆಗಳು ಬೇರೆ ಬೇರೆ ಪಾಲುದಾರರನ್ನು ಹೊಂದಿದ್ದರೂ ನಮ್ಮ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ’ ಎಂದು ಸುತಾರ್ ಆರೋಪಿಸಿದ್ದಾರೆ.

‘ಸೋಮಯ್ಯ ವಿಡಿಯೋಗಳನ್ನು ಪ್ರಸಾರ ಮಾಡಿದ ನಂತರ 72 ಗಂಟೆಗಳ ಕಾಲ ಚಾನೆಲ್ ಅನ್ನು ಸ್ಥಗಿತಗೊಳಿಸಲಾಯಿತು. ಆದರೆ, ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಚಾನೆಲ್ ಸ್ಥಗಿತಗೊಂಡಿದ್ದರೂ ಡಿಜಿಟಲ್ ಕಾರ್ಯಾಚರಣೆ ಮುಂದುವರಿಯಲಿದೆ. ಇದಲ್ಲದೆ, ನಾವು ಯೂಟ್ಯೂಬ್ ನಲ್ಲಿ ಸುದ್ದಿಗಳನ್ನು ಪ್ರಸ್ತುತಪಡಿಸುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

Previous Post
ಭಾರತ ಜೋಡೋ ನ್ಯಾಯ ಯಾತ್ರೆಗೆ ಮಣಿಪುರದಲ್ಲಿ ಅನುಮತಿ ನಿರಾಕರಿಸಿದ ಬಿಜೆಪಿ ಸರಕಾರ
Next Post
ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಶರಣಾಗತಿ ಬಗ್ಗೆ ಮಾಹಿತಿ ಇಲ್ಲ: ಪೊಲೀಸ್

Recent News