ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಪುನಃ ಜೈಲು: ತೀರ್ಪು ಸ್ವಾಗತಿಸಿದ ಪ್ರತಿಪಕ್ಷಗಳು

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಪುನಃ ಜೈಲು: ತೀರ್ಪು ಸ್ವಾಗತಿಸಿದ ಪ್ರತಿಪಕ್ಷಗಳು

ನವದೆಹಲಿ, ಜ. 8: 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಮೂರು ವರ್ಷದ ತನ್ನ ಮಗಳೂ ಸೇರಿದಂತೆ ಕುಟುಂಬದ 14 ಜನರನ್ನು ಕಳೆದುಕೊಂಡಿದ್ದ ಗರ್ಭಿಣಿ ಬಿಲ್ಕಿಸ್ ಬಾನು, ತನ್ನ ನೆರೆಹೊರೆಯ ಹಿಂದೂ ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ 11 ಜನ ಅತ್ಯಾಚಾರಿಗಳಿಗೆ ಕ್ಷಮಾಧಾನ ನೀಡಿದ್ದ ಗುಜರಾತ್ ಸರ್ಕಾರ, 2021ರಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಎಲ್ಲ ಅತ್ಯಾಚಾರಿಗಳನ್ನು ಮತ್ತೆ ಜೈಲಿಗಟ್ಟುವ ಆದೇಶ ನೀಡಿದ್ದು, ಬಾನು ಅವರ ಸ್ವಗ್ರಾಮದಲ್ಲಿ ಸಂತಸ ಮನೆಮಾಡಿದೆ. ಜತೆಗೆ, ಕಾಂಗ್ರೆಸ್, ಕಮ್ಯೂನಿಸ್ಟ್ ಸೇರಿದಂತೆ ವಿಪಕ್ಷ ನಾಯಕರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.

ತೀರ್ಪು ಪ್ರಕಟವಾಗುತ್ತಿದ್ದಂತೆ ಗುಜರಾತ್‌ನ ದೇವಗಢ್ ಬರಿಯಾದಲ್ಲಿರುವ ಬಿಲ್ಕಿಸ್ ಬಾನು ಅವರ ನಿವಾಸದ ಹೊರಗೆ ಗ್ರಾಮಸ್ಥರು ಪಟಾಕಿ ಸಿಡಿಸಿದ್ದಾರೆ. ತೀರ್ಪಿನ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಚುನಾವಣಾ ಲಾಭಕ್ಕಾಗಿ ನ್ಯಾಯವನ್ನು ಕೊಲ್ಲುವ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನ ಮೂಲಕ ದೇಶಕ್ಕೆ ‘ಅಪರಾಧಿಗಳ ಪೋಷಕ’ ಯಾರೆಂದು ಮತ್ತೊಮ್ಮೆ ಹೇಳಿದೆ. ಬಿಲ್ಕಿಸ್ ಬಾನೊ ಅವರ ಅವಿರತ ಹೋರಾಟವು ದುರಹಂಕಾರಿ ಬಿಜೆಪಿ ಸರ್ಕಾರದ ವಿರುದ್ಧ ನ್ಯಾಯ ವಿಜಯದ ಸಂಕೇತವಾಗಿದೆ’ ಎಂದು ಹೇಳಿದ್ದಾರೆ.

‘ಅಂತಿಮವಾಗಿ ನ್ಯಾಯಕ್ಕೆ ಜಯ ಸಿಕ್ಕಿದೆ. ಗುಜರಾತ್ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಆದೇಶದೊಂದಿಗೆ ಭಾರತೀಯ ಜನತಾ ಪಕ್ಷದ ಮಹಿಳಾ ವಿರೋಧಿ ನೀತಿಗಳ ಮೇಲಿನ ಮುಸುಕು ತೊಲಗಿದೆ. ಈ ಆದೇಶದ ನಂತರ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸ ಮತ್ತಷ್ಟು ಬಲಗೊಳ್ಳಲಿದೆ. ತನ್ನ ಹೋರಾಟವನ್ನು ಧೈರ್ಯದಿಂದ ಮುಂದುವರೆಸಿದ್ದಕ್ಕಾಗಿ ಬಿಲ್ಕಿಸ್ ಬಾನುಗೆ ಅಭಿನಂದನೆಗಳು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

‘ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕಗ್ಗತ್ತಲ ಕಾಲದಲ್ಲಿ ನ್ಯಾಯದ ಬೆಳಕಿನ ಬಾಗಿಲು ತೆರೆದಂತೆ. ಅತ್ಯಾಚಾರಿಗಳ ಪರ ವಕಲಾತ್ತು ವಹಿಸಿದ್ದ ಗುಜರಾತಿನ ಪ್ರಭುತ್ವಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಹೆಣ್ತನದ ಆತ್ಮಾಭಿಮಾನ ಹಾಗೂ ನ್ಯಾಯಂಗದ ನಂಬಿಕೆ ಉಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ಸ್ವಾಗತಾರ್ಹ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಗೋದ್ರೋತ್ತರ ಹತ್ಯಾಕಾಂಡದಲ್ಲಿ ಈ ಪ್ರಕರಣವೂ ಒಂದು. ಈ ಪ್ರಕರಣದಲ್ಲಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದಲ್ಲದೆ ಆಕೆಯ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಇಂತಹ ಹೇಯ ಕೃತ್ಯ ಎಸಗಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಅವಧಿಪೂರ್ವವಾಗಿ ಬಿಡುಗಡೆ ಮಾಡುವ ಮೂಲಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕುವ ಕೆಲಸ ಮಾಡಿತ್ತು. ಒಂದು ಕಡೆ ಬೇಟಿ ಬಚಾವೋ,ಬೇಟಿ ಪಡಾವೋ., ಎಂದು ನಾಟಕ ಮಾಡುವ ಬಿಜೆಪಿಯವರು ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆಕೆ ಒಂದು ಹೆಣ್ಣು ಮಗಳು ಎಂಬುದನ್ನು ಮರೆತು ಅಪರಾಧಿಗಳ ಬಿಡುಗಡೆಯನ್ನು ಸಂಭ್ರಮಿಸಿದ್ದರು. ಸುಪ್ರೀಂ ಕೋರ್ಟ್ನ ಇಂದಿನ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆ ಉಳಿಸಿಕೊಳ್ಳಬಹುದು ಎಂಬ ಭಾವನೆ ಮೂಡಿಸಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾನು ಮೊದಲ ದಿನದಿಂದ ಹೇಳುತ್ತಿದ್ದೇನೆ, ಬಿಜೆಪಿ ಸಂತ್ರಸ್ತರ ಜೊತೆ ನಿಲ್ಲುವ ಬದಲು ಯಾವಾಗಲೂ ಈ ಘೋರ ಅಪರಾಧ ಮಾಡಿದ ದುಷ್ಕರ್ಮಿಗಳ ಜೊತೆ ನಿಂತಿದೆ. ಬಿಲ್ಕಿಸ್ ಬಾನು ಅವರು ತುಂಬಾ ಧೈರ್ಯದಿಂದ ಹೋರಾಡಿದರು. ಆಕೆಯ ಜೀವವನ್ನು ಹಳಿಯಲ್ಲಿಟ್ಟ ಅದೇ ಗುಜರಾತ್ ಸರ್ಕಾರ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮಗುವನ್ನು ಕೊಂದ ಈ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿತು. ಅವರು ಯಾವ ರಾಜಕೀಯ ಸಿದ್ಧಾಂತಕ್ಕೆ ಸೇರಿದವರಾಗಿದ್ದರೂ ಎಲ್ಲ ಅತ್ಯಾಚಾರಿಗಳಿಗೆ ಬಲವಾದ ಸಂದೇಶವನ್ನು ರವಾನಿಸಬೇಕು’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನು ಸೋಮವಾರ ಸ್ವಾಗತಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ಹಿರಿಯ ನಾಯಕಿ ಬೃಂದಾ ಕಾರಟ್, ‘ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನ್ಯಾಯದ ಮೇಲೆ ಭರವಸೆ ಮೂಡಿಸಿದೆ’ ಎಂದು ಹೇಳಿದ್ದಾರೆ. ‘ನಾವು ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ. ಏಕೆಂದರೆ, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕನಿಷ್ಠ ಭರವಸೆಯನ್ನು ಮೂಡಿಸುತ್ತಿದೆ. ಮುಖ್ಯವಾಗಿ, ಈ ತೀರ್ಪು ಕೇಂದ್ರ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷದ ನೇತೃತ್ವದ ಗುಜರಾತ್ ಸರ್ಕಾರದ ಸಾಮರ್ಥ್ಯವನ್ನು ಸಹ ಸೂಚಿಸುತ್ತವೆ’ ಎಂದಿದ್ದಾರೆ.

‘ಅಪರಾಧಿಗಳು ಸಕಾರಣದಿಂದ ಬಿಡುಗಡೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಗುಜರಾತ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವನ್ನು ಹೊಂದಿದ್ದ ಅತ್ಯಾಚಾರಿಗಳಿಗೆ ಗೃಹ ಸಚಿವಾಲಯವು ಪ್ರೋತ್ಸಾಹಿಸಿ, ಬಿಡುಗಡೆಗೆ ಒಪ್ಪಿಗೆ ನೀಡಿದೆ. ಕಳೆದ ಎರಡು ದಶಕಗಳಲ್ಲೆ ಅತ್ಯಂತ ಕೆಟ್ಟ ಅಪರಾಧಗಳಲ್ಲಿ ಒಂದಾದ ಅಪರಾಧಿಗಳ ಬಿಡುಗಡೆಗಾಗಿ ಗುಜರಾತ್ ಸರ್ಕಾರ ಮಾಡಿದ ಉಲ್ಲೇಖವಾಗಿದೆ. ಆದ್ದರಿಂದ ಈ ತೀರ್ಪು ಸ್ವಾಗತಾರ್ಹ’ ಎಂದು ಕಾರಟ್ ಹೇಳಿದ್ದಾರೆ.

ಮಾರ್ಚ್ 2002 ರಲ್ಲಿ, ಗೋಧ್ರಾ ನಂತರದ ಗಲಭೆಗಳ ಸಮಯದಲ್ಲಿ, ಬಾನು ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಅವರು ತಮ್ಮ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ 14 ಸದಸ್ಯರನ್ನು ಕಳೆದುಕೊಂಡರು. ಗಲಭೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ವಡೋದರಾದಲ್ಲಿ ಆಕೆಯ ಕುಟುಂಬದ ಮೇಲೆ ಗಲಭೆಕೋರರು ದಾಳಿ ನಡೆಸಿದಾಗ, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು.

Previous Post
ಶಾಂತಿ, ನಿರ್ಭೀತ ವಾತಾವರಣ ಸೃಷ್ಟಿಸಲು ಬೆಂಗಳೂರು ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ
Next Post
1 ರಾಷ್ಟ್ರ, 1 ಚುನಾವಣೆ ಕಲ್ಪನೆ ‘ಪ್ರಜಾಪ್ರಭುತ್ವ ವಿರೋಧಿ’: ಸಿಪಿಐ(ಎಂ)

Recent News