ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಶರಣಾಗತಿ ಬಗ್ಗೆ ಮಾಹಿತಿ ಇಲ್ಲ: ಪೊಲೀಸ್

ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಶರಣಾಗತಿ ಬಗ್ಗೆ ಮಾಹಿತಿ ಇಲ್ಲ: ಪೊಲೀಸ್

ಅಹಮದಾಬಾದ್, ಜ. 10: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಕೊಲೆ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ನಂತರ ದಾಹೋದ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಪರಾಧಿಗಳ ಶರಣಾಗತಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.

ಅಪರಾಧಿಗಳಿಗೆ ಮತ್ತೆ ಜೈಲಿಗೆ ಹೋಗಲು ಆದೇಶಿಸಿದ ಬಳಿಕ ಶಾಂತಿ ಕಾಪಾಡಲು ಅಪರಾಧಿಗಳು ವಾಸಿಸುವ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಅಪರಾಧಿಗಳು ತಲೆಮರೆಸಿಕೊಂಡಿಲ್ಲ ಮತ್ತು ಅವರಲ್ಲಿ ಕೆಲವರು ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದಾರೆ ಎಂದು ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ಹೇಳಿದ್ದಾರೆ.

2002ರಲ್ಲಿ ಗೋಧ್ರಾದಲ್ಲಿ ರೈಲು ಸುಟ್ಟ ಘಟನೆಯ ನಂತರ ನಡೆದಿದ್ದ ಕೋಮು ಗಲಭೆ ವೇಳೆ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆದರೆ ಆಕೆಯ ಮೂರು ವರ್ಷದ ಮಗಳು ಮತ್ತು ಇತರ ಆರು ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು 11 ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ಸುಪ್ರೀಂಕೋರ್ಟ್ ಸೋಮವಾರ ರದ್ದುಗೊಳಿಸಿದೆ. 2022ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಎಲ್ಲಾ ಅಪರಾಧಿಗಳನ್ನು ಎರಡು ವಾರಗಳಲ್ಲಿ ಶರಣಾಗುವಂತೆ ಹೇಳಿದೆ.

ಈ ಬಗ್ಗೆ ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ಪ್ರತಿಕ್ರಿಯಿಸಿದ್ದು, ಶರಣಾಗತಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಪ್ರತಿ ನಮಗೆ ತಲುಪಿಲ್ಲ. ಶಿಕ್ಷೆಗೊಳಗಾದವರು ಸಿಂಗವಾಡ್ ತಾಲೂಕಿನ ನಿವಾಸಿಗಳಾಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ತೀರ್ಪು ಹೊರಬೀಳುವ ಮುನ್ನ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಕೋಮು ಸಂಘರ್ಷ ನಡೆಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಇಡೀ ರಂಧಿಕ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಲ್ಲಿ ಒಂಬತ್ತು ಮಂದಿ ವಾಸಿಸುತ್ತಿದ್ದ ಗುಜರಾತ್‌ನ ದೋಹದ್ ಜಿಲ್ಲೆಯ ರಣಧಿಕ್‌ಪುರ್ ಮತ್ತು ಸಿಂಗ್‌ವಾಡ್ ಅವಳಿ ಗ್ರಾಮಗಳಲ್ಲಿ ಮನೆಗಳಿಗೆ ಬೀಗ ಹಾಕಲಾಗಿದೆ. ಅಲ್ಲಿಗೆ ತೆರಳಿದರೆ ಅಪರಾಧಿಗಳ ಮನೆಗಳು ಬಾಗಿಲು ಮುಚ್ಚಿಕೊಂಡಿದೆ ಮತ್ತು ಭದ್ರತೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ನಮ್ಮನ್ನು ಸ್ವಾಗತಿಸುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

ಸುಪ್ರೀಂಕೋರ್ಟ್‌ ತೀರ್ಪಿನ ಬೆನ್ನಲ್ಲೇ ನಾವು ಅಪರಾಧಿಗಳು ವಾಸಿಸುತ್ತಿದ್ದ ಗ್ರಾಮಕ್ಕೆ ತೆರಳಿದ್ದೆವು. ಆದರೆ, ಅಲ್ಲಿದ್ದ ಅವರ ಸಂಬಂಧಿಕರು 9 ಅಪರಾಧಿಗಳು ಎಲ್ಲಿದ್ದಾರೆ ಎಂಬ ಮಾಹಿತಿ ಬಿಟ್ಟುಕೊಡಲು ನಿರಾಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿತ್ತು. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರದ ಅಪರಾಧಿ ರಾಧೇಶ್ಯಾಮ್ ಶಾ ಕಳೆದ 15 ತಿಂಗಳಿಂದ ಮನೆಗೆ ಬಂದಿಲ್ಲ ಎಂದು ಆತನ ತಂದೆ ಭಗವಾನ್‌ದಾಸ್ ಶಾ ಹೇಳಿದ್ದರು. ಆದರೆ ರಾಧೇಶ್ಯಾಮ್ ಸೇರಿದಂತೆ ಬಹುತೇಕ ಎಲ್ಲಾ ಅಪರಾಧಿಗಳು ಭಾನುವಾರದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದರು.

ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆ ಮಾಧ್ಯಮದವರು ಮನೆ ಬಳಿ ಬರಬಹುದೆಂದು ಅವರು ಬೀಗ ಹಾಕಿ ಹೋಗಿರಬಹುದು. ಅಲ್ಲದೆ ತಲೆಮರೆಸಿಕೊಳ್ಳುವ ಉದ್ದೇಶ ಅವರಿಗೆ ಇರಲು ಸಾಧ್ಯವಿಲ್ಲ. ಏಕೆಂದರೆ ಕಳೆದ 20 ವರ್ಷಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಗೊಂಡಾಗಲೂ ಅವರು ಯಾರೂ ತಪ್ಪಿಸಿಕೊಂಡಿರಲಿಲ್ಲ ಎಂದು ಅಪರಾಧಿ ಗೋವಿಂದ್‌ನ ತಂದೆ ಅಖಂಭಾಯ್ ಹೇಳಿರುವ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

Previous Post
ಬಿಜೆಪಿ ಮುಖಂಡನ ಸೆಕ್ಸ್ ಟೇಪ್ ಪ್ರಸಾರ: ಚಾನೆಲ್‌ ಲೈಸೆನ್ಸ್ ಅಮಾನತು
Next Post
ಅನುಷ್ಠಾನ ಸಮಿತಿಗಳ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Recent News