ಬೆಂಗಳೂರಿನಲ್ಲಿ 5 ರೂಪಾಯಿ ನೀರಿನ ಕೌಂಟರ್‌ಗಳು ಬಂದ್‌

ಬೆಂಗಳೂರಿನಲ್ಲಿ 5 ರೂಪಾಯಿ ನೀರಿನ ಕೌಂಟರ್‌ಗಳು ಬಂದ್‌; ಕುಡಿಯುವ ನೀರಿಗಾಗಿ ಪರದಾಟ

ಬೆಂಗಳೂರು, ಫೆಬ್ರವರಿ 13: ಸಣ್ಣ ಹೋಟೆಲ್‌ಗಳು, ಚಾಟ್ಸ್‌ ಸೆಂಟರ್‌ಗಳು, ಬೀದಿಬದಿ ವ್ಯಾಪರಿಗಳು ಸೇರಿಂದತೆ, ಮನೆಯಲ್ಲಿ ನೀರು ಶುದ್ಧೀಕರಣ ಯಂತ್ರ(Water Purifier)ಗಳನ್ನು ಹೊಂದಲು ಸಾಧ್ಯವಾಗದ ಅನೇಕರಿಗೆ ಕೇವಲ 5 ರೂಪಾಯಿಗೆ 20 ಲೀಟರ್ ಕುಡಿಯುವ ನೀರು ಜೀವನಾಡಿಯಾಗಿತ್ತು. ಆದರೆ ಈ ಆರ್‌ಒ ಘಟಕಗಳು ಸಂಪೂರ್ಣ ಮುಚ್ಚುವ ಹಂತದಲ್ಲಿದೆ. ಈ ಬಾರಿಯ ಮಳೆಯ ಕೊರತೆಯಿಂದ ಬೋರ್‌ವೆಲ್‌ಗಳ ನೀರು ಬತ್ತಿ ಹೋಗಿದೆ. ಹೀಗಾಗಿ ಬೆಂಗಳೂರು ನಗರದಲ್ಲಿನ ಅನೇಕ ರಿವರ್ಸ್ ಆಸ್ಮೋಸಿಸ್ (ಆರ್‌ಒ) ಘಟಕಗಳು ಮುಚ್ಚಿದ್ದು, ಕೆಲವು ಮುಚ್ಚುವ ಹಂತದಲ್ಲಿದೆ. ಇನ್ನೂ ಕೆಲವು ಆರ್‌ಒ ಘಟಕಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಮತ್ತು ನೀರಿನ ವೆಚ್ಚವನ್ನು ನಿರ್ವಹಿಸಲು 20 ಲೀಟರ್ ಕುಡಿಯುವ ನೀರಿನ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದೆ.

ದೊಡ್ಡಬೊಮ್ಮಸಂದ್ರದ ಆರ್‌ಒ ಘಟಕವು 20 ದಿನಗಳಿಂದ ಸ್ಥಗಿತಗೊಂಡಿದ್ದು, ಈ ಪ್ರದೇಶದ ಅನೇಕ ನಿವಾಸಿಗಳು ನಿರಾಶೆಗೊಂಡಿದ್ದಾರೆ. ಆರ್‌ಒವನ್ನೇ ಕುಡಿಯುವ ನೀರಿನ ಮೂಲ ಮಾಡಿಕೊಂಡಿದ್ದ ಜನರು ಹಾಗೂ ಸಣ್ಣ ವ್ಯಾಪಾರಿಗಳು ಕ್ಯಾನ್‌ ಹಿಡಿದು ನೀರಿಗಾಗಿ ಬೀದಿ, ಬೀದಿ ಅಲೆಯುವಂತಾಗಿದೆ. ಯಶವಂತಪುರ, ಆರ್.ಆರ್.ನಗರ ಮತ್ತು ಕೆಂಗೇರಿ ಭಾಗದಲ್ಲಿ ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ತಗ್ಗಿದ ಬಿಸಿ ತಟ್ಟಿದ್ದು, ಯಶವಂತಪುರದಲ್ಲಿ ಕಳೆದ ತಿಂಗಳಲ್ಲಿ ಕನಿಷ್ಠ 12 ಆರ್‌ಒ ಘಟಕಗಳನ್ನು ಮುಚ್ಚಲಾಗಿದೆ. “ಬೀದಿ ವ್ಯಾಪಾರಿಗಳಿಂದ ಹಿಡಿದು, ರಸ್ತೆಬದಿಯಲ್ಲಿ ತಿಂಡಿ ತಯಾರಿಸುವವರೂ ಈ ಆರ್‌ಓ ಘಟಕಗಳಿಂದ ನೀರು ಸಂಗ್ರಹಿಸುತ್ತಿದ್ದರು. ಪ್ರತಿ ದಿನ ಬಾಟೆಲ್‌ ವಾಟರ್‌ಗೆ ಹಣ ಖರ್ಚು ಮಾಡಲು ಸಾಧ್ಯವಾಗದವರು, ಇಲ್ಲಿ ಒಮ್ಮೆಲೆ 5 ರೂಪಾಯಿ ನೀಡಿ 20 ಲೀಟರ್ ನೀರು ಪಡೆದು ವಾರ ಗಟ್ಟಲೆ ಸಾಗಿಸುತ್ತಿದ್ದರು. ಆದರೆ ಈಗ ಇದು ಬಂದ್‌ ಆಗಿದ್ದು, ಕುಡಿಯುವ ನೀರಿಗೆ ಕಷ್ಟವಾಗಿದೆ” ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

“ನಾನು ಚಾಟ್ ಅಂಗಡಿಯನ್ನು ನಡೆಸುತ್ತಿದ್ದೇನೆ. ಆದ್ದರಿಂದ ದಿನಕ್ಕೆ ಕನಿಷ್ಠ ಐದು ಕ್ಯಾನ್ ನೀರು ಬೇಕು. ಪ್ಯಾಕ್ ಮಾಡಿದ ನೀರಿಗೆ ನೂರಾರು ರೂಪಾಯಿ ಖರ್ಚು ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನೀರಿಗಾಗಿ ಆರ್‌ಓ ಘಟಕವನ್ನು ಅವಲಂಬಿಸಿದ್ದೆ. ಆದರೆ ಈಗ ಅದನ್ನು ಮುಚ್ಚಲಾಗಿದ್ದು, ಪ್ರತಿನಿತ್ಯ ಎರಡು ಅಥವಾ ಮೂರು ಘಟಕಗಳಿಗೆ ಭೇಟಿ ನೀಡಿ ನೀರು ಸಂಗ್ರಹಿಸಬೇಕಾಗಿದೆ” ಎಂದು ಯಶವಂತಪುರದಲ್ಲಿ ಚಾಟ್‌ ಅಂಗಡಿ ನಡೆಸುವವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಆರ್‌ಒ ಘಟಕವೊಂದರ ನಿರ್ವಾಹಕರೊಬ್ಬರು ಮಾಹಿತಿ ನೀಡಿದ್ದು, “ಬೋರ್‌ವೆಲ್‌ಗಳು ನಮ್ಮ ಏಕೈಕ ನೀರಿನ ಮೂಲವಾಗಿದೆ. ಟ್ಯಾಂಕರ್‌ಗಳ ನೀರಿನ ಗುಣಮಟ್ಟ ಉತ್ತಮವಾಗಿಲ್ಲ, ಹಾಗೂ ಅವು ಕೈಗೆಟುಕುವ ದರದಲ್ಲಿಲ್ಲ. ಸದ್ಯ ಬೋರ್‌ವೆಲ್‌ಗಳು ಬತ್ತಿಹೋಗಿದೆ. ಹೀಗಾಗಿ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ” ಎಂದಿದ್ದಾರೆ. ಆರ್‌ಒ ಘಟಕಗಳು ಮುಚ್ಚುತ್ತಿರುವ ಬಗ್ಗೆ ದೂರು ಹೆಚ್ಚಾದ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ ಸಮೀಕ್ಷೆ ನಡೆಸಿ ಪರಿಹಾರದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಬೋರ್‌ವೆಲ್‌ಗಳನ್ನು ಪುನಶ್ಚೇತನಗೊಳಿಸಬೇಕು. ಕೆಲವು ಬೋರ್‌ವೆಲ್‌ಗಳ ದುರಸ್ತಿ ಮಾಡಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

Previous Post
ನಮ್ಮ ಮೆಟ್ರೋ ಈ ಮಾರ್ಗಗಳು ನೀರ್ಣಾಯಕ: 1,150 ಹೊಸ ಬಸ್ ಬಿಡುಗಡೆ: ಗೆಹ್ಲೋಟ್
Next Post
ವಿಶ್ವ ಗುರು ಬಸವಣ್ಣ ಸಾಂಸ್ಕøತಿಕ ನಾಯಕ ಎಂಬ ಘೋಷವಾಕ್ಯ ಇಡೀ ರಾಜ್ಯದ ತುಂಬ ಮೊಳಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

Recent News