ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಬೆಂಗಳೂರು, ಜನವರಿ 08: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಸಚಿವರಿಗೆ ಮುಖ್ಯಮಂತ್ರಿ ಕರೆದು ಬುದ್ದಿ ಹೇಳಲಿ ಎಂದು ಹೇಳಿದರು. ಈ ಕುರಿತು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದು ಎಂದೋ ಮುಗಿದು ಹೋಗಿರುವ ವಿಷಯ. ಅದನ್ನು ಮತ್ತೆ ಮತ್ತೆ ಕೆಣಕುವ ಅಗತ್ಯ ಏನಿದೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಿಲ್ಲ, ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿ ಅಂತ ಕಾಣುತ್ತದೆ ಎಂದು ಕಿಡಿಕಾರಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವರೇ ಇಂತಹ ಅನಗತ್ಯ, ವಿವಾದಾಸ್ಪದ ವಿಷಯಗಳನ್ನು ಮಾತಾಡಿದರೆ ನೀವೇ ನೀರು ಎರೆದ ಹಾಗೆ ಅಲ್ಲವಾ? ಸಿಎಂ ಸಿದ್ದರಾಮಯ್ಯ ಅವರಿಗೆ ಮಂತ್ರಿಗಳ ಮೇಲೆ ಹಿಡಿತ ಇದ್ದರೆ ಅವರನ್ನು ಕರೆದು ಸರಿಯಾಗಿ ಬುದ್ದಿ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಒತ್ತಾಯ ಮಾಡಿದರು.

ಈ ಮಂತ್ರಿಗಳಿಗೆ ಗ್ಯಾರಂಟಿ ಹೆಸರಲ್ಲಿ ಸರಕಾರ ರಚನೆ ಮಾಡಿರುವುದರಿಂದ ಯಾವುದೇ ಅಭಿವೃದ್ಧಿ ರಾಜ್ಯದಲ್ಲಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

8 ತಿಂಗಳು ಆಗಿದೆ ಸರಕಾರ ಬಂದು. ಬರ ಪರಿಹಾರ ವಿಚಾರದಲ್ಲಿ ಸರಕಾರ ಹೇಗೆ ನಡೆದುಕೊಳ್ಳುತಿದೆ ಎನ್ನುವುದನ್ನು ಜನ ನೋಡುತ್ತಿದ್ದಾರೆ. 2 ಸಾವಿರ ಹಣ ಕೊಡಲು 105 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಅದು ಎಷ್ಟು ಜನರಿಗೆ ಹೋಗುತ್ತದೆ. ಬರದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಅಂತ ಹೇಳಿ 105 ಕೋಟಿ ಬಿಡುಗಡೆ ಮಾಡಿದರೆ ಸಾಕಾ? ಇಷ್ಟು ಹಣದಿಂದ ಯಾವ ಪುರುಷಾರ್ಥ ಸಾಧಿಸುತ್ತಾರೆ? ರೈತರನ್ನ ಬದುಕಿಸೋಕೆ ಸಾಧ್ಯನಾ? ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌ ಡಿ ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಅರಣ್ಯ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ, ದಾಖಲೆಗಳನ್ನು ಕೊಡುತ್ತೇನೆ. ತನಿಖೆ ಮಾಡುವ ದಮ್ಮು ತಾಕತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು. ತರೀಕೆರೆಯಲ್ಲಿ ಅರಣ್ಯದಲ್ಲಿ ಮರಗಳನ್ನು ಕಡಿದ ಪ್ರಕರಣದಲ್ಲಿ ನಿಮ್ಮ ಸರಕಾರದ ಅಧಿಕಾರಿಗಳೇ ಎಷ್ಟು ಜನ ಶಾಮೀಲಾಗಿದ್ದಾರೆ? ಕಡಿದ ಆ ಮರಗಳಲ್ಲಿ ಅರ್ಧ ಭಾಗದಷ್ಟು ಮರಗಳು ಯಾವ ಶಾಸಕನ ಮನೆಗೆ ಹೋಯಿತು? ಮನೆ ಕಟ್ಟುತ್ತಿದ್ದ ಶಾಸಕನ ಮನೆಗೆ ಮರಗಳು ಹೋಗಿವೆ. ಈ ಬಗ್ಗೆ ನಿಮಗೆ ಗೊತ್ತಿಲ್ಲವಾ ಖಂಡ್ರೆ ಅವರೇ..? ಎಂದು ಪ್ರಶ್ನಿಸಿದರು.

ಆ ಮರಗಳು ತರೀಕೆರೆಯಲ್ಲಿ ಯಾವ ಶಾಸಕನ ಮನೆಗೆ ಹೋದವು? ನೀವು ಕ್ರಮ ತೆಗೆದುಕೊಂಡಿದ್ದೀರಾ? ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಮರ ಕಡಿಯುವವರಿಗೆ ಕುಮಾರಸ್ವಾಮಿ ಬೆಂಬಲ ಕೊಡ್ತಿದ್ದಾರೆ ಎಂಬ ಸಚಿವರು ಹೇಳಿದ್ದಾರೆ. ನಾನು ಮರ ಕಡಿಯುವವರಿಗಾಗಲಿ, ಅಕ್ರಮ ಚಟುವಟಿಕೆ ಮಾಡುವವರಿಗಾಗಲಿ ಬೆಂಬಲ ಕೊಡುವವನಲ್ಲ. ಬಹುಶಃ ಈಶ್ವರ್ ಖಂಡ್ರೆಗೆ ಅವರಿಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

Previous Post
Guinness World: 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ!
Next Post
ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

Recent News