ಬೆಹುಗಾರಿಗೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಒಳಪಟ್ಟಿದ್ದ ನೌಕಾಪಡೆಯ ಮಾಜಿ ಅಧಿಕಾರಿಗಳು ಭಾರತಕ್ಕೆ ವಾಪಸ್

ಬೆಹುಗಾರಿಗೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಒಳಪಟ್ಟಿದ್ದ ನೌಕಾಪಡೆಯ ಮಾಜಿ ಅಧಿಕಾರಿಗಳು ಭಾರತಕ್ಕೆ ವಾಪಸ್

ನವದೆಹಲಿ : ಗೂಢಚರ್ಯೆ ಆರೋಪದಲ್ಲಿ ಕತಾರ್‌ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ ಎಂಟು ಮಾಜಿ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದ ವಿದೇಶಾಂಗ ಇಲಾಖೆ ಈ ಮಾಹಿತಿ ಹಂಚಿಕೊಂಡಿದ್ದು ಎಂಟು ಮಂದಿಯ ಪೈಕಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ‌.

ಖಾಸಗಿ ಸಂಸ್ಥೆಯಾದ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗಳನ್ನು ಬೇಹುಗಾರಿಕೆ ಆರೋಪದಲ್ಲಿ ಈ ಮೊದಲು ಮರಣದಂಡನೆಗೆ ಗುರಿಪಡಿಸಲಾಗಿತ್ತು. ಭಾರತದ ರಾಜತಾಂತ್ರಿಕ ಮಾತುಕತೆ ಬಳಿಕ ಅದನ್ನು ಜೈಲು ಶಿಕ್ಷೆಗೆ ಇಳಿಸಲಾಗಿತ್ತು. ಅಂತಿಮವಾಗಿ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವಲ್ಲಿ ವಿದೇಶಾಂಗ ಇಲಾಖೆ ಯಶಸ್ವಿಯಾಗಿದೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಗೇಶ್ ಶಿಕ್ಷೆಗೆ ಒಳಪಟ್ಟಿದ್ದರು‌. ದುಬೈನಲ್ಲಿ ನಡೆದ COP28 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಭೇಟಿಯಾದ ವಾರಗಳ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.

ದೆಹಲಿಗೆ ಆಗಮಿಸಿದ ಮಾಜಿ ಅಧಿಕಾರಿಗಳು ಭಾರತ್ ಮಾತಾ ಕೀ ಜೈ ಎಂದು ಜಯಘೋಷಗಳನ್ನು ಕೂಗಿದರು‌. ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲದೆ ನಾವು ಇಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದರು‌. ನಾವು ಭಾರತಕ್ಕೆ ಹಿಂತಿರುಗಲು ಸುಮಾರು 18 ತಿಂಗಳುಗಳ ಕಾಲದಿಂದ ಕಾಯುತ್ತಿದ್ದೆವು. ನಾವು ಪ್ರಧಾನ ಮಂತ್ರಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಸಮೀಕರಣವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಮತ್ತೊಬ್ಬರು ತಿಳಿಸಿದರು‌.

ಏನಿದು ಪ್ರಕರಣ

ದಹ್ರಾ ಗ್ಲೋಬಲ್‌ನೊಂದಿಗೆ ಕೆಲಸ ಮಾಡುತ್ತಿದ್ದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿಗಳನ್ನು 2022 ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಬಂಧಿಸಲಾಯಿತು. ಅಕ್ಟೋಬರ್ 26, 2023 ರಂದು ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ನೌಕಾಪಡೆಯ ಯೋಧರಿಗೆ ಮರಣದಂಡನೆ ವಿಧಿಸಿತು.

ಭಾರತವು ತೀರ್ಪನ್ನು “ಆಳವಾಗಿ” ಆಘಾತಕಾರಿ ಎಂದು ತಿಳಿಸಿತು‌. ಕತಾರ್ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯ ಪ್ರಕರಣದ “ಹೆಚ್ಚಿನ ಪ್ರಾಮುಖ್ಯತೆಯನ್ನು” ಲಗತ್ತಿಸುತ್ತಿದೆ ಮತ್ತು ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂದು ತಿಳಿಸಿತ್ತು.
ಮಾರ್ಚ್ 25, 2023 ರಂದು ಭಾರತೀಯ ಪ್ರಜೆಗಳ ವಿರುದ್ಧ ಆರೋಪಗಳನ್ನು ದಾಖಲಿಸಲಾಯಿತು ಮತ್ತು ಕತಾರ್ ಕಾನೂನಿನ ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿ ಈಗ ಅವರನ್ನು ಬಿಡುಗಡೆಗೊಳಿಸಲಾಯಿತು‌.

Previous Post
ಮಾತೃ ಭಾಷೆಯಲ್ಲಿ ಸಿಎಪಿಎಫ್ ಪರೀಕ್ಷೆ ಬರೆಯಲು ಅನುಮತಿ
Next Post
ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ತಲಾ 2.5 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಕರ್ನಾಟಕ ರಾಜ್ಯ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಶಿಫಾರಸು ಮಾಡಿದೆ.

Recent News