ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಅಸ್ಸಾಂನಲ್ಲಿ ಭದ್ರತಾ ಸಮಸ್ಯೆ: ಅಮಿತ್‌ ಶಾಗೆ ಖರ್ಗೆ ಪತ್ರ

ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ಅಸ್ಸಾಂನಲ್ಲಿ ಭದ್ರತಾ ಸಮಸ್ಯೆ: ಅಮಿತ್‌ ಶಾಗೆ ಖರ್ಗೆ ಪತ್ರ

ಗೌಹಾಟಿ, ಜ. 24: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎದುರಿಸುತ್ತಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಖರ್ಗೆ ಅವರು ಅಮಿತ್‌ ಶಾಗೆ ಬರೆದ ಪತ್ರದ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅಸ್ಸಾಂ ಸರ್ಕಾರವು ಸೃಷ್ಟಿಸಿದೆ ಎಂದು ಹೇಳಲಾದ ಭಯ ಮತ್ತು ಬೆದರಿಕೆಯ ವಾತಾವರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಅಶಾಂತಿ ಸೃಷ್ಟಿಸಲು ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರದಲ್ಲಿ ಅಮಿತ್‌ ಶಾ ಮಧ್ಯಪ್ರವೇಶಕ್ಕೆ ಮತ್ತು ಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಒತ್ತಾಯಿಸಲಾಗಿದೆ. ದೈಹಿಕ ಹಾನಿಗೆ ಕಾರಣವಾಗುವ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸುವಂತೆ ಆಗ್ರಹಿಸಲಾಗಿದೆ.

ಮಂಗಳವಾರದಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಸ್ಸಾಂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿತ್ತು. ಭದ್ರತಾ ಸಿಬ್ಬಂದಿ ರ್ಯಾಲಿಯನ್ನು ಗುವಾಹಟಿ ರಸ್ತೆಗಳಲ್ಲಿ ತೆರಳುವುದನ್ನು ತಡೆಯಲು ಪ್ರಯತ್ನಿಸಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರು ಬೆರೆದು ಪತ್ರದಲ್ಲಿ ರಾಹುಲ್‌ ಗಾಂಧಿಯ ಭದ್ರತೆಯ ಬಗ್ಗೆ ಆತಂಕವನ್ನು ಹೆಚ್ಚಿಸುವ ನಿರ್ದಿಷ್ಟ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

Z+ ರಕ್ಷಣೆ ಹೊಂದಿರುವ ರಾಹುಲ್‌ ಗಾಂಧಿಗೆ ಸಮರ್ಪಕ ಭದ್ರತೆ ಒದಗಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪೋಸ್ಟರ್‌ಗಳನ್ನು ವಿರೂಪಗೊಳಿಸುವುದು ಮತ್ತು ಬಿಜೆಪಿ ಕಾರ್ಯಕರ್ತರು ಜನವರಿ 21ರಂದು ಕಾಂಗ್ರೆಸ್‌ನ ಯಾತ್ರೆಯನ್ನು ಹೇಗೆ ತಡೆದರು ಎಂದು ಪ್ರಸ್ತಾಪಿಸಿದರು. ಕಾಂಗ್ರೆಸ್‌ ರಾಜ್ಯ ಮುಖ್ಯಸ್ಥ ಭೂಪೇನ್ ಬೋರಾ ಮೇಲೆ ಹಲ್ಲೆ ಬಗ್ಗೆ ಕೂಡ ಖರ್ಗೆ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಅಸ್ಸಾಂ ಪೊಲೀಸರು ರಾಹುಲ್‌ ಗಾಂಧಿ ಅವರ ಬೆಂಗಾವಲು ಪಡೆಗೆ ಹತ್ತಿರವಾಗಲು ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ರಾಹುಲ್‌ ಅವರ ಭದ್ರತೆಗೆ ತೊಂದರೆ ಉಂಟಾಗಿದೆ. ಪೊಲೀಸರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಪುರಾವೆಗಳು ಇದ್ದರೂ ಪೊಲೀಸರು ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ. ಅಪಾಯ ಹೆಚ್ಚಾಗುತ್ತಿದೆ ಮತ್ತು ಯಾತ್ರೆಯು ಮುಂದುವರಿಯುತ್ತಿದೆ, ಅಸ್ಸಾಂನ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರು, ರಾಹುಲ್ ಗಾಂಧಿ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಯ ಸದಸ್ಯರಿಗೆ ಗಂಭೀರವಾದ ವೈಯಕ್ತಿಕ ಗಾಯಕ್ಕೆ ಕಾರಣವಾಗುವ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ನಿಮ್ಮ ಮಧ್ಯಸ್ಥಿಕೆಯನ್ನು ನಾವು ಕೋರುತ್ತೇವೆ ಎಂದು ಅಮಿತ್‌ ಶಾ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಾಗುತ್ತಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಹಿಂಸಾಚಾರ, ಪ್ರಚೋದನೆ, ಹಲ್ಲೆ ಕುರಿತು ಅಸ್ಸಾಂ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 14ರಂದು ಮಣಿಪುರದ ಇಂಫಾಲ್‌ನಿಂದ ಪ್ರಾರಂಭವಾಯಿತು, ಯಾತ್ರೆ 6,700 ಕಿಲೋಮೀಟರ್‌ಗಳ ಪ್ರಯಾಣದ ಬಳಿಕ ಮುಂಬೈನಲ್ಲಿ ಸಮಾಪ್ತಿಯಾಗಲಿದೆ. ಯಾತ್ರೆ ಮಣಿಪುರ, ನಾಗಾಲ್ಯಾಂಡ್‌ ಮೂಲಕ ಇದೀಗ ಅಸ್ಸಾಂನಲ್ಲಿ ಸಾಗುತ್ತಿದೆ. ಅಸ್ಸಾಂನಲ್ಲಿ ಯಾತ್ರೆಗೆ ಅಲ್ಲಿನ ಬಿಜೆಪಿ ಸರಕಾರ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದೆ.

Previous Post
ಪಿಎಸ್ಐ ಮರು ಪರೀಕ್ಷೆ ಸುಗಮವಾಗಿ ನಡೆದಿದ್ದು, ಆದಷ್ಟು ಬೇಗ ಮೌಲ್ಯಮಾಪನ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್
Next Post
ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಜೈ ಶ್ರೀರಾಮ್ ಘೋಷಣೆ ಕೂಗಿದ ಗುಂಪು

Recent News