ಮಂಡ್ಯದಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಂಡ್ಯದಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು ಜ.29 ಮಂಡ್ಯದಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಇನ್ನೂ ಹಿಂದೂ ಪರ ಸಂಘಟನೆಗಳು ಫೆಬ್ರವರಿ 9 ರಂದು ಮಂಡ್ಯ ಬಂದ್‍ಗೆ ಕರೆಕೊಟ್ಟಿದ್ದು, ಬಿಜೆಪಿ ಹಾಗೂ ಜೆಡಿಎಸ್ ಬಂದ್‍ಗೆ ಬೆಂಬಲ ಸೂಚಿಸಿವೆ.

ಘಟನೆ ಖಂಡಿಸಿ ಈಗಾಗಲೇ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿ ಜಿಲ್ಲೆಗಳಲ್ಲೂ ಹನುಮ ಧ್ವಜ ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಿಟ್ಟು ಹನುಮ ಧ್ವಜ ತೆಗಿಸಿದ್ದಾರೆ. ರಾಜ್ಯದ ಶಾಂತಿ ಸುವ್ಯವಸ್ಥೆ ಕದಡಲು ಕಾಂಗ್ರೆಸ್ ಮುಂದಾಗಿದೆ. ಅಲ್ಪ ಸಂಖ್ಯಾತರನ್ನು ಒಲೈಸಲು ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ ಹನುಮಧ್ವಜ ತೆರವುಗೊಳಿಸಿರುವುದು ಖಂಡಿಸಿ ಮಂಡ್ಯದ ಕೆರೆಗೋಡುವಿನಲ್ಲಿ ಗ್ರಾಮಸ್ಥರು ಕಂಬಕ್ಕೆ ಶ್ರೀರಾಮನ ಫೋಟೋ ಹಾಕಿ ಪ್ರತಿಭಟನೆ ನಡೆಸಿದರು.

ಕೆರಗೋಡು ಗ್ರಾಮದಲ್ಲಿ ತೆರವು ಮಾಡಲಾದ ಹನುಮ ಧ್ವಜವನ್ನು ಮತ್ತೆ ಅದೇ ಜಾಗದಲ್ಲಿ ಮರುಸ್ಥಾಪನೆ ಮಾಡುವ ಶಪಥದೊಂದಿಗೆ ಬೃಹತ್ ಪಾದಯಾತ್ರೆ ನಡೆಸಿದ ಮುಖಂಡರು, ಸಾವಿರಾರು ಹಿಂದೂ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸರು ಪಾದಯಾತ್ರೆ ತಡೆದ ವೇಳೆ ತಳ್ಳಾಟ ನೂಕಾಟ ಉಂಟಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪಾದಯಾತ್ರೆ ನಿರತರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಹತ್ತಿಸಿಕೊಂಡು ಹೊರಟರು. ಈ ವೇಳೆ ಖಾಕಿ ಪಡೆ ಮತ್ತು ಪ್ರತಿಭಟನಾಕಾರರ ವಾಗ್ವಾದ ನಡೆಯಿತು. ಹನುಮಧ್ವಜ ಮರುಸ್ಥಾಪನೆ ಮಾಡುವ ಶಪಥದೊಂದಿಗೆ ಬೃಹತ್ ಪಾದಯಾತ್ರೆಯು ಇಂದು ಬೆಳಗ್ಗೆ ಕೋದಂಡರಾಮ ದೇವಾಲಯದಿಂದ ಸುಮಾರು ೧೫ ಕಿ.ಮೀ. ದೂರದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಹೊರಟಿತ್ತು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದು ಈಗಾಗಲೇ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬಿಜೆಪಿ ನಾಯಕ ಸಿ.ಟಿ. ರವಿ, ಮಳವಳ್ಳಿ ಮಾಜಿ ಶಾಸಕ ಅನ್ನದಾನಿ ಹಾಗೂ ಕೆಆರ್‌ಆರ್‌ಪಿ ಪಕ್ಷ ನಾಯಕ ಜನಾರ್ದನ ರೆಡ್ಡಿ ಭಾಗಿಯಾಗಿದ್ದು ಅವರೆಲ್ಲರನ್ನು ಮಾರ್ಗ ಮಧ್ಯದಲ್ಲಿ ಪೊಲೀಸರು ವಶಕ್ಕೆ ಪಡೆದರು. ಪೊಲೀಸರ ಕ್ರಮಕ್ಕೆ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಲಿಂಗನದೊಡ್ಡಿ ಗ್ರಾಮದ ಮಹಿಳೆಯರು ಆರತಿ ಬೆಳಗಿ, ಈಡುಗಾಯಿ ಹೊಡೆದು ಪಾದಯಾತ್ರೆಗೆ ಶುಭ ಕೋರಿದ್ದು, ಸಾವಿರಾರು ಗ್ರಾಮಸ್ಥರು ಹನುಮ ಧ್ವಜವನ್ನು ಹಿಡಿದು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಬಿಗಿ ಬಂದೋಬಸ್ತ್:
ಹಿಂದೂಪರ ಸಂಘಟನೆ ಕಾರ್ಯಕರ್ತರು ಪಾದಯಾತ್ರೆ ನಡೆಸುವ ಹಿನ್ನೆಲೆಯಲ್ಲಿ ಮಂಡ್ಯ ಎಸ್ಪಿ ಯತೀಶ್ ಎನ್. ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪಾದಯಾತ್ರೆಗೆ ಬ್ರೇಕ್ ಹಾಕಲು ಮಂಡ್ಯ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಅಕ್ಕಪಕ್ಕದ ತಾಲೂಕುಗಳಿಂದ ಹೆಚ್ಚುವರಿ ಪೊಲೀಸ್ ತರಿಸಿ ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿಆರ್, ವಾಟರ್ ಜೆಟ್ ನಿಯೋಜನೆ ಮಾಡಲಾಗಿತ್ತು.

ಹನುಮಧ್ವಜ ಗಲಾಟೆ:
ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ ೧೦೮ ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜ. ೨೨ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ ೧೦೮ ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.

೨೦ ಸದಸ್ಯರ ಬೆಂಬಲ:
ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ ೨೨ ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ ೨೦ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು. ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಜ.೨೭ ರಾತ್ರಿ ಪುನಃ ಬಂದು ಹನುಮ ತೆರವಿಗೆ ಮುಂದಾದರು.

ಮುಂಜಾನೆ ೩ ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಸಹ ಸ್ಥಳದಲ್ಲಿದ್ದರು. ಪ್ರತಿಭಟನೆಯನ್ನೂ ಮಾಡಲಾಯಿತು. ಇದೀಗ ಧ್ವಜ ಮರು ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆ ನಡೆದಿದೆ.

Previous Post
“ಜಿಎಎಫ್ಎಕ್ಸ್ ತಂತ್ರಜ್ಞಾನಗಳಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಡಿ.ಕೆ. ಶಿವಕುಮಾರ್
Next Post
ಭಾರತ ಚುನಾವಣಾ ಆಯೋಗ ರಾಜ್ಯಸಭೆಯ 56 ಸ್ಥಾನಗಳಿಗೆ ಇಂದು ಚುನಾವಣೆಯನ್ನು ಘೋಷಿಸಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಸ್ಥಾನಗಳು ಸಹ ಒಳಗೊಂಡಿವೆ.

Recent News