ಮಂಡ್ಯ ಜಿಲ್ಲೆಯ 24,489 ರೈತರ ಬ್ಯಾಂಕ್‌ ಖಾತೆಗೆ ₹ 28.89 ಕೋಟಿ ಬರಪರಿಹಾರ : ಕೃಷಿ ಸಚಿವ

ಮಂಡ್ಯ ಜಿಲ್ಲೆಯ 24,489 ರೈತರ ಬ್ಯಾಂಕ್‌ ಖಾತೆಗೆ ₹ 28.89 ಕೋಟಿ ಬರಪರಿಹಾರ : ಕೃಷಿ ಸಚಿವ

ಮಂಡ್ಯ: ಮಳೆ ಕೊರತೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ 2 ಸಾವಿರ ರೂ.ವರೆಗೆ ಪರಿಹಾರ ವಿತರಿಸಲಾಗುತ್ತಿದ್ದು, ಈವರೆಗೆ ಜಿಲ್ಲೆಯ 24,489 ರೈತರಿಗೆ 28.89 ಕೋಟಿ ರೂ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬರ ಪರಿಸ್ಥಿತಿಯ ತುರ್ತು ಕ್ರಮಗಳನ್ನು ನಿರ್ವಹಿಸಲು ನಮ್ಮ ಸರ್ಕಾರದಿಂದ ಈಗಾಗಲೇ ಜಿಲ್ಲೆಗೆ 10.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಗ್ಯಾರಂಟಿಗಳ ಅನುಷ್ಠಾನ ಶಕ್ತಿ ಯೋಜನೆಯಡಿ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 3.58 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ಬದಲಾಗಿ 4,36,510 ಫಲಾನುಭವಿಗಳಿಗೆ ₹137.50 ಕೋಟಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 4,64,303 ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದು, 8.90 ಕೋಟಿ ಯೂನಿಟ್ಸ್‌ ವಿದ್ಯುತ್‌ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ 76.22 ಕೋಟಿ ರೂ. ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ 4,35,820 ಮಹಿಳೆಯರಿಗೆ ತಲಾ ₹2,000 ಗಳಂತೆ 89.17 ಕೋಟಿ ರೂ. ಪಾವತಿಸಲಾಗಿದೆ. ಯುವನಿಧಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 180 ದಿನಗಳು ಕಳೆದರೂ ಉದ್ಯೋಗ ಸಿಗದ ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 1500 ಹಾಗೂ 3 ಸಾವಿರ ರೂ.ಗಳನ್ನು ನಿರುದ್ಯೋಗ ಭತ್ಯೆ ಗರಿಷ್ಠ 2 ವರ್ಷಗಳ ಅವಧಿಯವರಿಗೆ ನೀಡಲಾಗುವುದು. ಈವರೆಗೆ ಜಿಲ್ಲೆಯಲ್ಲಿ 2,053 ಅರ್ಜಿಗಳು ಬಂದಿವೆ ಎಂದು ಹೇಳಿದರು. ವಿವಿಧ ಜನಪರ ಕೆಲಸಗಳು ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 4,600 ಕ್ಕೂ ಹೆಚ್ಚು ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಕಳೆದ 6 ತಿಂಗಳುಗಳಲ್ಲಿ ವಿಲೇವಾರಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.

ಮೃತ ಪಟ್ಟ ವ್ಯಕ್ತಿಯ ವಾರಸುದಾರರು, ವಾರಸು ನೆಲೆಯಲ್ಲಿ ಹಕ್ಕು ಬದಲಾವಣೆಗಾಗಿ ತಾಲ್ಲೂಕು ಕಛೇರಿಗೆ ಅಲೆಯುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ಪೌತಿ ಖಾತಾ ಆಂದೋಲನವನ್ನು ಹಮ್ಮಿಕೊಂಡು ಕಳೆದ 6 ತಿಂಗಳಲ್ಲಿ ಒಟ್ಟು 150 ಕ್ಕೂ ಹೆಚ್ಚು ಪೌತಿ ಖಾತೆ ಆಂದೋಲನಗಳನ್ನು ನಡೆಸುವ ಮೂಲಕ 7 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಲಾಗಿದೆ. ಕಳೆದ 6 ತಿಂಗಳುಗಳಿಂದ 12 ಸಾವಿರಕ್ಕೂ ಹೆಚ್ಚು ಆರ್.ಟಿ.ಸಿ ತಿದ್ದುಪಡಿಗಳನ್ನು ಮಾಡಲಾಗಿದೆ. ಕಂದಾಯ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಕಂದಾಯ ಭೂ ದಾಖಲೆಗಳ ಆಧುನೀಕರಣಕ್ಕಾಗಿ ಪೈಲಟ್ ಆಧಾರದಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ರೂ 35 ಲಕ್ಷಗಳ ವೆಚ್ಚದಲ್ಲಿ ಭೂ ಕಂಪ್ಯೂಟರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಮನೆ ಮತ್ತು ನಿವೇಶನದ ಮಾಲೀಕರಿಗೆ ಇ-ಸ್ವತ್ತು ತಂತ್ರಾಂಶದಲ್ಲಿ 8,663 ಇ-ಸ್ವತ್ತು ದಾಖಲೆಗಳನ್ನು ವಿಶೇಷ ಆಂದೋಲನದ ಮೂಲಕ ನೀಡಲಾಗಿದೆ ಎಂದರು. ನಮ್ಮ ನಡಿಗೆ ಪರಂಪರೆಯ ಕಡೆಗೆ ಎಂಬ ಅಭಿಯಾನ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು 151 ಸ್ಮಾರಕಗಳನ್ನು ಸಂರಕ್ಷಿಸಲಾಗಿರುತ್ತದೆ. ವಿ.ಸಿ ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿಯನ್ನು ಅಂದಾಜು ಮೊತ್ತ ರೂ. 360 ಕೋಟಿಗಳಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯ ನಾಲೆಯ ಸರಪಳಿಯಿಂದ 46.25 ಕಿ.ಮೀ.ವರೆಗೆ ಆಧುನೀಕರಣಗೊಳಿಸಲಾಗುವುದು ಎಂದರು. ಪೂರಿಗಾಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ರೂ. 593 ಕೋಟಿಗಳಲ್ಲಿ ಮಳವಳ್ಳಿ ತಾಲ್ಲೂಕಿನ 51 ಗ್ರಾಮಗಳ 25000 ಎಕರೆ ಪ್ರದೇಶಕ್ಕೆ ಹನಿ ನೀರನ್ನು ಒದಗಿಸಲು ಹಾಗೂ 16 ಕೆರೆಗಳನ್ನು ತುಂಬಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೆಮ್ಮಣ್ಣುನಾಲೆ, ತುರಗನೂರು ನಾಲೆ, ಹೆಬ್ಬಕವಾಡಿ ಮತ್ತು ಸಂಪರ್ಕ ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ರೂ.375 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಉದ್ದೇಶಿಸಲಾಗಿರುತ್ತದೆ ಎಂದು ಹೇಳಿದರು. ಮಳೆಯ ಅನಿಶ್ಚಿತತೆಯಿಂದ ಮಳೆ ಆಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ರಾಜ್ಯಾದ್ಯಂತ ಕೃಷಿ ಭಾಗ್ಯ ಯೋಜನೆಯನ್ನು 200 ಕೋಟಿ ರೂ ವೆಚ್ಚದಲ್ಲಿ ಮರುಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಟಾನಗೊಳಿಸಲು ರೂ 653.8 ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ ಎಂದರು. ಮಂಡ್ಯ ಜಿಲ್ಲೆಗೆ ಮುಕುಟದಂತಿರುವ ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದ್ದು, ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ 50 ಕೋಟಿ ರೂ. ಅನುದಾನ ನೀಡಿದೆ. ಜಿಲ್ಲೆಯ ರೈತರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ 2.41 ಲಕ್ಷ ಮೆಟ್ರಿಕ್‌ಟನ್ ಕಬ್ಬನ್ನು ನುರಿಸಿ ಈಗಾಗಲೇ 1.68 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದೆ ಎಂದರು.

Previous Post
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಮಹಿಳಾ ಆನೆ ಮಾವುತ
Next Post
ಭಾರತಕ್ಕೆ 75ನೇ ಗಣರಾಜ್ಯೋತ್ಸವ ಶುಭಾಶಯ ತಿಳಿಸಿದ ಕೆನಡಾ!

Recent News