ಮಕರಜ್ಯೋತಿ ನಂತರವೂ ಶಬರಿಮಲೆಯಲ್ಲಿ ಜನಜಂಗುಳಿ

ಮಕರಜ್ಯೋತಿ ನಂತರವೂ ಶಬರಿಮಲೆಯಲ್ಲಿ ಜನಜಂಗುಳಿ

ಶಬರಿಮಲೈ ಜನವರಿ 17: ಮಕರ ಸಂಕ್ರಾಂತಿ ಹಬ್ಬ ಮುಗಿಯಿತು. ಶಬರಿಮಲೆಯದಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಮಕರಜ್ಯೋತಿ ಮೂಲಕ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದು ಭಕ್ತರು ಪುನೀತರಾದರು. ಆದರೆ ಮಕರ ಜ್ಯೋತಿ ದರ್ಶನದ ಬಳಿಕವೂ ಶಬರಿಮಲೆಯದಲ್ಲಿ ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಜನ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಇದು ವಿಶ್ವದ ಅತಿದೊಡ್ಡ ವಾರ್ಷಿಕ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 10 ರಿಂದ 15 ಮಿಲಿಯನ್ ಭಕ್ತರು ಭೇಟಿ ನೀಡುತ್ತಾರೆ. ಶಬರಿಮಲೆಯದಲ್ಲಿ ಭಕ್ತರು ಜನವರಿ 20ರವರೆಗೆ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬಹುದು. ಶಬರಿಮಲೆಯಲ್ಲಿ ಜನವರಿ 15ರಂದು ಮಕರಜ್ಯೋತಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮಕರಜ್ಯೋತಿ ಮೂಲಕ ಅಯ್ಯಪ್ಪನ ದರ್ಶನ ಪಡೆದರು.

ಸೋಮವಾರ ಸಂಜೆಯ ವೇಳೆಗೆ ಪೊನ್ನಂಬಲಂ ಬೆಟ್ಟದಲ್ಲಿರುವ ಪ್ರಸಿದ್ಧ ಮಕರಜ್ಯೋತಿ ಕಾಣಿಸಿಕೊಂಡಿತು. ಇದರ ದರ್ಶನಕ್ಕೆಂದು ಲಕ್ಷಾಂತರ ಭಕ್ತರು ನೆರೆದಿದ್ದರು. ಇದಾದ ಬಳಿಕವೂ ಬೆಳಗ್ಗೆ 18 ಮೆಟ್ಟಿಲು ಹತ್ತಲು ಸರತಿ ಸಾಲು ಎಂದಿನಂತೆ ಕಾಣಿಸಿಕೊಂಡಿದೆ. ಮಧ್ಯಾಹ್ನದ ನಂತರ ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗತೊಡಗಿತು.

ಜನವರಿ 19ರಂದು ಮಕರಜ್ಯೋತಿ ಕಲಾ ನೆಯಾಭಿಷೇಕ ಪೂರ್ಣಗೊಳ್ಳಲಿದೆ. ಆ ನಂತರ ಬರುವ ಭಕ್ತರು ನೆಯಾಭಿಷೇಕ ಮಾಡುವಂತಿಲ್ಲ. ಜನವರಿ 20 ರಂದು ರಾತ್ರಿ 10:00 ಗಂಟೆಯವರೆಗೆ ಭಕ್ತರು ದರ್ಶನ ಪಡೆಯಬಹುದು. ಅಂದು ರಾತ್ರಿ ದೇವಸ್ಥಾನದಲ್ಲಿ ಕುರುಡಿ ಪೂಜೆ ನಡೆಯಲಿದೆ. ಜನವರಿ 21 ರಂದು ಬೆಳಿಗ್ಗೆ 7:00 ಗಂಟೆಗೆ ಈ ವರ್ಷದ ಶಬರಿಮಲೆಯ ಋತು ಮುಕ್ತಾಯಗೊಳ್ಳುತ್ತದೆ.

ಈ ವರ್ಷ ಅಯ್ಯಪ್ಪನ ಭಕ್ತರಿಗೆ ಬೇಸರ ಶಬರಿಮಲೆಯದಲ್ಲಿ ಭಕ್ತರ ನಿರ್ವಹಣೆ ಸಾಧ್ಯವಾಗದೆ ಅಯ್ಯಪ್ಪನ ಸುಲಭ ದರ್ಶನವಾಗದೆ ಹಲವಾರು ಭಕ್ತರು ಈ ಬಾರಿ ಬೇಸರಗೊಂಡಿದ್ದಾರೆ. ಕೇರಳ ಸರ್ಕಾರ ಹಾಗೂ ಶಬರಿಮಲೆಯ ಆಡಳಿತ ಮಂಡಳಿ ಭಕ್ತರ ನಿರ್ವಹಣೆ ವಿಚಾರದಲ್ಲಿ ಈ ವರ್ಷ ವಿಫಲವಾಗಿದೆ. ಈ ವರ್ಷ ಶಬರಿಮಲೆಯದಲ್ಲಿ ಭಕ್ತರಿಗೆ ಅಯ್ಯಪ್ಪನ ಸುಲಭ ದರ್ಶನ ಮಾಡಲು ಸಾಧ್ಯವಾಗಿಲ್ಲ. ಗಂಟೆಗಟ್ಟಲೆ ಕಾದರೂ ದೇವರ ದರ್ಶನವಾಗದೆ ಕೆಲ ಭಕ್ತರು ಹಿದಿರುಗಿರುವುದು ಇದೆ. ಈ ನಡುವೆ ಕೇರಳ ಪೊಲೀಸರು ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ. ಶಬರಿಮಲೆಯಲ್ಲಿ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಶಬರಿಮಲೆಯ ಋತು ಆರಂಭವಾದಾಗಿನಿಂದಲೂ ಇತ್ತು. ಈಗಲೂ ಯಾತ್ರಾರ್ಥಿಗಳ ನೂಕುನುಗ್ಗಲು ಮುಂದುವರಿದಿದೆ. ಭಾರೀ ಜನದಟ್ಟಣೆಯನ್ನು ಪರಿಗಣಿಸಿ ಅಧಿಕಾರಿಗಳು ಹಂತ-ಹಂತವಾಗಿ ಮತ್ತು ನಿರ್ಬಂಧಿತ ರೀತಿಯಲ್ಲಿ ಮಾತ್ರ ಬೆಟ್ಟದ ದೇಗುಲಕ್ಕೆ ಭಕ್ತರಿಗೆ ಪ್ರವೇಶವನ್ನು ಅನುಮತಿಸುತ್ತಿದ್ದಾರೆ. ಹೀಗಾಗಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ 10ರಿಂದ 12 ಗಂಟೆಗಳ ಕಾಲ ಕಾಯಬೇಕಾಗಿದೆ ಎಂದು ಯಾತ್ರಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ರಜಾ ದಿನಗಳಲ್ಲಿ ಉದ್ದವಾದ ಸರತಿ ಸಾಲುಗಳು ಕಂಡುಬರುತ್ತವೆ. ಸನ್ನಿಧಾನಂನಲ್ಲಿ ಜನದಟ್ಟಣೆ ಕಡಿಮೆಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಪ್ರತಿ ಬ್ಯಾಚ್ ಯಾತ್ರಿಕರು ಶಬರಿಪೀಠಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಮಯ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಹಣ ಕೊಟ್ಟವರಿಗೆ ಮಾತ್ರ ಬೇಗ ದರ್ಶನಕ್ಕೆ ಕಳುಹಿಸುವುದು. ಹೆಚ್ಚಿನ ಸಮಯದವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಆರೋಪಗಳು ಈ ವರ್ಷ ಕೇಳಿ ಬಂದಿವೆ.

Previous Post
ಈ ತಿಂಗಳ ೧೯ ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬೆಂಗಳೂರು ಹಾಗೂ ಕಲಬುರಗಿಗೆ ಅವರು ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.
Next Post
ಸಮುದ್ರದಲ್ಲಿ ಮುಳುಗಿದ 4000 ಕೋಟಿ ಮೌಲ್ಯದ ಐಷಾರಾಮಿ ಕಾರುಗಳಿದ್ದ ಹಡಗು..

Recent News