ಮತದಾನದ ಅಂಕಿ-ಅಂಶ ಒದಗಿಸಬೇಕೆಂಬ ಕಾನೂನಿಲ್ಲ: ಆಯೋಗ

ಮತದಾನದ ಅಂಕಿ-ಅಂಶ ಒದಗಿಸಬೇಕೆಂಬ ಕಾನೂನಿಲ್ಲ: ಆಯೋಗ

ನವದೆಹಲಿ, ಮೇ 23: ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ದಾಖಲಾದ ಮತಗಳ ದಾಖಲೆಯನ್ನು ಒಳಗೊಂಡಿರುವ ನಮೂನೆ 17ಸಿ ಯನ್ನು ಅಭ್ಯರ್ಥಿಗಳು ಅಥವಾ ಅವರ ಏಜೆಂಟರಿಗೆ ಮಾತ್ರ ನೀಡಬಹುದು ಹೊರತು ಅದನ್ನು ಸಾರ್ವಜನಿಕಗೊಳಿಸಲು ಯಾವುದೇ ಕಾನೂನು ನಿರ್ದೇಶನವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ಗೆ ಹೇಳಿದೆ.

ಸಂಪೂರ್ಣ ಮತದಾರರ ಸಂಖ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸುತ್ತಿದೆ. ಮೊದಲ ಎರಡು ಹಂತದ ಮತದಾನದ ಡೇಟಾವನ್ನು ಪ್ರಕಟಿಸಲು ವಿಳಂಬವಾದ ನಂತರ ಈ ಅರ್ಜಿ ಸಲ್ಲಿಸಲಾಗಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 2024ರ ಸಾರ್ವತ್ರಿಕ ಚುನಾವಣೆಯ ಪ್ರತಿ ಹಂತದ ಮತದಾನದ ನಂತರ ಎಲ್ಲಾ ಮತಗಟ್ಟೆಗಳ ಫಾರ್ಮ್ 17Cಯ ಸ್ಕ್ಯಾನ್ ಮಾಡಿದ ಸ್ಪಷ್ಟವಾದ ಪ್ರತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ ಚುನಾವಣಾ ಆಯೋಗ ಮತದಾನದ ಪ್ರಮಾಣೀಕೃತ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು. ಆದರೆ ಚುನಾವಣಾ ಆಯೋಗ, ಅಭ್ಯರ್ಥಿ ಅಥವಾ ಏಜೆಂಟ್‌ಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಗೆ ನಮೂನೆ 17Cನ್ನು ಒದಗಿಸಲು ಯಾವುದೇ ಕಾನೂನು ನಿರ್ದೇಶನವಿಲ್ಲ ಎಂದು ಹೇಳಿದೆ.

ಉತ್ತರಪ್ರದೇಶದ ರಾಂಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಕೀಲ ಮೆಹಮೂದ್ ಪ್ರಾಚಾ ಚುನಾವಣಾಧಿಕಾರಿ ತಮ್ಮ ಕ್ಷೇತ್ರದ ಫಾರ್ಮ್ 17ಸಿ ನೀಡಲು ನಿರಾಕರಿಸಿದ ನಂತರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಏಪ್ರಿಲ್ 19ರಂದು ರಾಂಪುರದಲ್ಲಿ ಮತದಾನ ನಡೆದಿತ್ತು.

ಚುನಾವಣಾ ಆಯೋಗವು ತನ್ನ ಪ್ರತಿಕ್ರಿಯೆಯಲ್ಲಿ ನಮೂನೆ 17Cನ್ನು ಬಹಿರಂಗಪಡಿಸುವುದರಿಂದ ಮತದಾರರಲ್ಲಿ ಒಟ್ಟು ಮತಗಳ ಬಗ್ಗೆ ಗೊಂದಲ ಉಂಟಾಗಬಹುದು ಎಂದು ಹೇಳಿದೆ. ಒಟ್ಟು ಅಂಕಿ-ಅಂಶವನ್ನು ಲೆಕ್ಕಹಾಕಲು ಮತಗಳನ್ನು ಎಣಿಸಲಾಗುತ್ತದೆಯಾದರೂ, ಅಂಚೆ ಮತಪತ್ರಗಳ ಮೂಲಕ ಚಲಾಯಿಸಲಾದ ಮತಗಳನ್ನು ಫಾರ್ಮ್ ಒಳಗೊಂಡಿರುವುದಿಲ್ಲ ಎಂದು ಅದು ವಾದಿಸಿದೆ. ಆದರೆ ಅಂತಹ ವ್ಯತ್ಯಾಸವನ್ನು ಮತದಾರರು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲು ಪ್ರೇರೇಪಿತ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ಇದನ್ನು ಬಳಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗವು ಹೇಳಿದೆ.

ಚುನಾವಣಾ ಆಯೋಗ ಮತ್ತು ಅದರ ಸಿಬ್ಬಂದಿ ಚುನಾವಣೆಗೆ ಸಂಬಂಧಿಸಿದ ಭೌತಿಕ ವಸ್ತುಗಳಾದ ಫಾರ್ಮ್‌ಗಳು ಎನ್ವಲಪ್‌ಗಳು, ಸೀಲ್‌ಗಳು, ಇವಿಎಂಗಳು ಮುಂತಾದ ವಿಚಾರಗಳಿಗೆ ಸಂಬಂಧಿಸಿ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಯಾವುದೇ ಫಾರ್ಮ್‌ ಸ್ಕ್ಯಾನ್‌ ಮಾಡಿ ಒದಗಿಸುವ ಹೆಚ್ಚುವರಿ ಜವಾಬ್ದಾರಿ ನೀಡಿದಲ್ಲಿ ಮತ ಎಣಿಕೆಗಿಂತ ನಮ್ಮ ಇತರ ಆದ್ಯತೆಯ ವಿಷಯಗಳು ಅಪಾಯದಲ್ಲಿರಬಹುದು. ಆ್ಯಪ್‌ನಲ್ಲಿನ ಮತದಾರರ ಮತದಾನದ ಅಂಕಿ-ಅಂಶಗಳನ್ನು ಪೂರಕ ಮಾಹಿತಿ ಎಂದು ಅರ್ಜಿದಾರರು ಪ್ರಶಂಸಿಸಲು ವಿಫಲರಾಗಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಮನವಿಯು, ಚುನಾವಣಾ ಆಯೋಗದ ವಿರುದ್ಧ ಎಲ್ಲಾ ಸಂಭವನೀಯ ತಪ್ಪುದಾರಿಗೆಳೆಯುವ ಆರೋಪಗಳ ಮೂಲಕ ಅನುಮಾನಗಳನ್ನು ಹುಟ್ಟುಹಾಕಲು ಮಾಡಿದ ದುರುದ್ದೇಶಪೂರಿತ ಅಭಿಯಾನದ ಭಾಗವಾಗಿದೆ ಎಂದು ಚುನಾವಣಾ ಆಯೋಗವು ಆರೋಪಿಸಿದೆ.

Previous Post
ಅಸ್ಸಾಂನಲ್ಲಿ ಲಾಕಪ್ ಡೇತ್: ಪ್ರತಿಭಟನೆ
Next Post
ದೆಹಲಿ ಚಲೋಗೆ 100 ದಿನ: ಗಡಿಯಲ್ಲಿ ಜಮಾಯಿಸಿದ ಸಾವಿರಾರು ರೈತರು

Recent News