ಮತ್ತೆ ಬಂತು ‘CAA’ ಅಬ್ಬರ

ಮತ್ತೆ ಬಂತು ‘CAA’ ಅಬ್ಬರ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶದಲ್ಲಿ ಸಿಎಎ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಈ ಚುನಾವಣೆವರೆಗೂ ಸಿಎಎ ಅಬ್ಬರವನ್ನು ಜೋರಾಗಿರಿಸಿ, ಆ ಮೇಲೆ ಮತ್ತೊಮ್ಮೆ ಮರೆಯುವ ತಂತ್ರ ಹೂಡಿದೆಯೆ? ಅಥವಾ ಹಿಂದುತ್ವದ ರಾಜಕಾರಣ ಮಾಡುತ್ತಿರುವ ಬಿಜೆಪಿ ಈ ಅಸಂವಿಧಾನಿಕ ಕಾಯ್ದೆಯನ್ನು ತಂದೇ ಬಿಡುತ್ತಾ ಎನ್ನುವುದು ಅಸ್ಪಷ್ಟ, ಆದರೆ ಇದೀಗ ಕಾಯ್ದೆ ಭಾರೀ ಸದ್ದು ಮಾಡುತ್ತಿದೆ.

ಡಿಸೆಂಬರ್ 2019ರಲ್ಲಿ ಸಂಸತ್ತು ಅಂಗೀಕರಿಸಿದ ಬಳಿಕ ಮೌನವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ 2023ರ ಡಿಸೆಂಬರ್‌ನಲ್ಲಿ ಅಮಿತ್ ಶಾ ಹೇಳಿಕೆ ಮೂಲಕ ಮತ್ತೆ ಮುನ್ನೆಲೆಗೆ ಬಂದಿತ್ತು. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಮಮಂದಿರ, ಜಮ್ಮು-ಕಾಶ್ಮೀರದ 370ನೇ ವಿಧಿ ರದ್ಧತಿ, ಏಕರೂಪ ನಾಗರಿಕ ಸಂಹಿತೆ ಮುನ್ನೆಲೆಯಲ್ಲಿದೆ. ಈ ಎಲ್ಲಾ ಕಾಯ್ದೆಗಳು ಮತ್ತು ಕ್ರಮಗಳು ಅಲ್ಪಸಂಖ್ಯಾತ ವಿರೋಧಿ, ಅದರಲ್ಲೂ ಮುಸ್ಲಿಂ ವಿರೋಧಿ ಎಂದು ಬಣ್ಣಿಸಲಾಗಿದೆ. ಈ ಭಾವನಾತ್ಮಕ, ಅಸಂವಿಧಾನಿಕ ಮತ್ತು ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಮಾಡುತ್ತಿರುವ ತುಷ್ಟೀಕರಣ ರಾಜಕೀಯ ಅದು ಎಷ್ಟರ ಮಟ್ಟಿಗೆ ಫಲ ಪ್ರದವಾಗಲಿದೆ ಎಂದು ಕಾದು ನೋಡಬೇಕಿದೆ.

370ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ. ಹಾಗಾಗಿ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂದು ನಾವು ನಂಬುತ್ತೇವೆ ಎಂದು ಖುದ್ದು ಅಮಿತ್‌ ಶಾ ಅವರು ಹೇಳಿದ್ದಾರೆ. ವಿವಾದಾತ್ಮಕ ಸಿಎಎ ಜಾರಿಗೊಳಿಸುವ ಭರವಸೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ.ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಿತ್ತು. ಕೇಸರಿ ಪಕ್ಷದ ನಾಯಕರು ಬಂಗಾಳದಲ್ಲಿ ಬಿಜೆಪಿಯ ಉದಯಕ್ಕೆ ಕಾರಣವಾದ ಅಂಶವೆಂದು ಇದನ್ನು ಪರಿಗಣಿಸುತ್ತಾರೆ. ಆದ್ದರಿಂದ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಇದೀಗ ಸಿಎಎಯನ್ನು ಮುನ್ನಲೆಗೆ ತಂದಿದೆ ಎನ್ನಲಾಗಿದೆ.

ಡಿಸೆಂಬರ್ 2019ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಹೇಳಿದ್ದಾರೆ. ಸಿಎಎ ಜಾರಿಗೊಳಿಸುವ ಭರವಸೆಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಇಟಿ ನೌ ಗ್ಲೋಬಲ್ ಶೃಂಗಸಭೆ 2024ರಲ್ಲಿ ಅಮಿತ್‌ ಶಾ ಹೇಳಿದ್ದಾರೆ. ಪೌರತ್ವವನ್ನು ಒದಗಿಸಲು ಸಿಎಎಯನ್ನು ತರಲಾಗಿದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯಿದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ CAA ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಕಾಯಿದೆಯಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕೋಲ್ಕತ್ತಾದಲ್ಲಿ ಲೋಕಸಭೆಯ ಚುನಾವಣಾ ಪ್ರಚಾರದ ಭಾಗವಾಗಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ಸಿಎಎಯನ್ನು ಮಮತಾ ಬ್ಯಾನರ್ಜಿ ವಿರೋಧಿಸುತ್ತಿದ್ದಾರೆ. ಆದರೆ ಯಾರೊಬ್ಬರೂ ಅದರ ಅನುಷ್ಠಾನವನ್ನು ತಡೆಯಲು ಸಾಧ್ಯವಿಲ್ಲ. ಪ್ರತಿಪಕ್ಷಗಳ ಬಲವಾದ ವಿರೋಧದ ಮಧ್ಯೆ ಕೇಂದ್ರವು ಸಿಎಎ ಕುರಿತು ನಿಯಮವನ್ನು ರೂಪಿಸಲಿದೆ ಎಂದು ಹೇಳಿದ್ದರು. ಇದಲ್ಲದೆ ಪಶ್ಚಿಮ ಬಂಗಾಳದ ಠಾಕೂರ್ ನಗರದಲ್ಲಿ ದಲಿತ ಮಟುವಾ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅಜಯ್ ಮಿಶ್ರಾ, ಪೌರತ್ವದ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎಯ ಅಂತಿಮ ಕರಡು 2024ರ ಮಾ.30ರೊಳಗೆ ಸಿದ್ಧವಾಗಲಿದೆ ಎಂದು ಹೇಳಿದ್ದರು.

ಇತ್ತೀಚೆಗೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯಸಚಿವ ಶಾಂತನು ಠಾಕೂರ್, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ ಮತ್ತು ಮುಂದಿನ 7 ದಿನಗಳಲ್ಲಿ ಸಿಎಎ ದೇಶಾದ್ಯಂತ ಜಾರಿಗೆ ಬರಲಿದೆ. ಇದು ನನ್ನ ಗ್ಯಾರಂಟಿ, ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಎಎಯನ್ನು ಒಂದು ವಾರದೊಳಗೆ ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಆ ಬಳಿಕ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದರು.

ಕೆಂದ್ರ ಸರ್ಕಾರದ ಮೂಲಗಳ ಪ್ರಕಾರ, ಸಿಎಎ ನಿಯಮಾವಳಿಗಳ ಬಗ್ಗೆ ಸರಕಾರ ಅಧಿಸೂಚನೆ ಹೊರಡಿಸಲಿದೆ. ನಿಯಮಗಳನ್ನು ಹೊರಡಿಸಿದ ನಂತರ ಕಾನೂನನ್ನು ಜಾರಿಗೆ ತರಬಹುದು ಮತ್ತು ಅರ್ಹರಿಗೆ ಭಾರತೀಯ ಪೌರತ್ವವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಸಿಎಎ ನಿಯಮಗಳು ಈಗ ಸಿದ್ಧವಾಗಿವೆ ಮತ್ತು ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್ ಪೋರ್ಟಲ್ ಸಹ ಸಿದ್ದವಾಗಿದೆ. ಇದು ಸಂಪೂರ್ಣವಾಗಿ ಆನ್‌ಲೈನ್‌ ಪ್ರಕ್ರಿಯೆಯಾಗಿದೆ ಎಂದು ಹೇಳಿತ್ತು.

ಸಿಎಎ ಕುರಿತು ಎಲ್ಲಾ ವಿಷಯಗಳು ಸಿದ್ದವಾಗಿದೆ ಮತ್ತು ಚುನಾವಣೆಯ ಮೊದಲು ಅವುಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆಯಿದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದಿದ್ದರೂ, ಭಾರತವನ್ನು ಪ್ರವೇಶಿಸಿದ ವರ್ಷವನ್ನು ತಿಳಿಸಬೇಕಾಗುತ್ತದೆ. ಅರ್ಜಿದಾರರಿಂದ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ. 2014ರ ನಂತರ ಅರ್ಜಿ ಸಲ್ಲಿಸಿದ ಅರ್ಜಿದಾರರ ಅರ್ಜಿ ಹೊಸ ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ. ಇದಲ್ಲದೆ ಡಿ.31, 2014ರ ಮೊದಲು ಭಾರತಕ್ಕೆ ಬಂದವರಿಗೆ ಮಾತ್ರ ಸೀಮಿತವಾಗಿದ್ದ ಗಡುವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು.

Previous Post
ಬಿಜೆಪಿಗೆ ದಕ್ಷಿಣ ಭಾರತ ತಂದ ಸಂಕಷ್ಟ
Next Post
ಅಮಿತ್ ಶಾ ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ; ಬಡವರು, ರೈತರ ಬಗ್ಗೆ ಮಾತನಾಡಲು ಅಮಿತ್ ಶಾ ಅವರಿಗೆ ನೈತಿಕತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News