ಮನುಸ್ಮೃತಿ ಉಲ್ಲೇಖಿಸಿ ಜಾರ್ಖಂಡ್ ಹೈಕೋರ್ಟ್ ತೀರ್ಪು

ಮನುಸ್ಮೃತಿ ಉಲ್ಲೇಖಿಸಿ ಜಾರ್ಖಂಡ್ ಹೈಕೋರ್ಟ್ ತೀರ್ಪು

ರಾಂಚಿ, ಜ. 25: ಪತಿಯಿಂದ ಜೀವನಾಂಶ ಕೇಳಿ ಕೋರ್ಟ್‌ ಮೊರೆ ಹೋಗಿದ್ದ ಮಹಿಳೆಯ ಅರ್ಜಿಯನ್ನು ತಳ್ಳಿಹಾಕಿದ ಜಾರ್ಖಂಡ್ ಹೈಕೋರ್ಟ್, ಮನುಸ್ಮೃತಿಯನ್ನು ಉಲ್ಲೇಖಿಸಿ ತೀರ್ಪನ್ನು ನೀಡಿದೆ. ಭಾರತೀಯ ಸಂಸ್ಕೃತಿ ಪ್ರಕಾರ, ಪತ್ನಿಯು ತನ್ನ ಗಂಡನ ಕುಟುಂಬದ ಹಿರಿಯ ಸದಸ್ಯರ ಸೇವೆ ಮಾಡುವುದು ಕಡ್ಡಾಯವಾಗಿದೆ ಮತ್ತು ಆಕೆ ಪ್ರತ್ಯೇಕವಾಗಿ ವಾಸಿಸುವ ಕುರಿತ ಬೇಡಿಕೆಯನ್ನು ಈಡೇರಿಸುವುದಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿ ಅರ್ಜಿದಾರ ಮಹಿಳೆಗೆ ಜೀವನಾಂಶವನ್ನು ನಿರಾಕರಿಸಿದೆ.

ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ್ ಚಂದ್ ಅವರ ಪೀಠದ 25 ಪುಟಗಳ ತೀರ್ಪಿನಲ್ಲಿ, ಸುಪ್ರೀಂಕೋರ್ಟ್‌ ಈ ಮೊದಲು ಮಾಡಿರುವ ಅವಲೋಕನಗಳನ್ನು ಉಲ್ಲೇಖಿಸಲಾಗಿದೆ ಮತ್ತು ಆದರ್ಶ ವಿವಾಹಿತ ಸಂಬಂಧ ಮತ್ತು ದಂಪತಿಗಳ ಜವಾಬ್ಧಾರಿ ಮತ್ತು ಕರ್ತವ್ಯಗಳ ಬಗ್ಗೆ ಮನುಸ್ಮೃತಿ ಸೇರಿದಂತೆ ಪ್ರಾಚೀನ ಪಠ್ಯಗಳನ್ನು ಉಲ್ಲೇಖಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ವಿವಾಹಿತ ಮಗ ತನ್ನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸುತ್ತಾರೆ, ಭಾರತಕ್ಕೆ ಹೋಲಿಕೆ ಮಾಡಿದರೆ ಕುಟುಂಬದ ಸಮೀಕರಣಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಮಹಿಳೆಯು ಮದುವೆಯ ನಂತರ ಗಂಡನ ಕುಟುಂಬದೊಂದಿಗೆ ಇರಬೇಕೆಂದು ನಿರೀಕ್ಷಿಸಲಾಗಿದೆ. ಅವಳು ಕುಟುಂಬದ ಅವಿಭಾಜ್ಯ ಭಾಗವಾಗುತ್ತಾಳೆ. ಸಾಮಾನ್ಯವಾಗಿ ಯಾವುದೇ ಬಲವಾದ ಕಾರಣವಿಲ್ಲದೆ, ತನ್ನ ಪತಿ ಕುಟುಂಬದಿಂದ ಬೇರ್ಪಟ್ಟು ತನ್ನೊಂದಿಗೆ ಮಾತ್ರ ಬದುಕಬೇಕು ಎಂದು ಅವಳು ಎಂದಿಗೂ ಒತ್ತಾಯಿಸುವಂತಿಲ್ಲ ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ.

ಥೆರೇಸಾ ಚಾಕೋ ಅವರ ಇಂಟ್ರೊಡಕ್ಷನ್ ಟೂ ಫ್ಯಾಮಿಲಿ ಲೈಫ್ ಎಜ್ಯುಕೇಶನ್ ಕೃತಿಯ ಅಂಶಗಳನ್ನು ಉಲ್ಲೇಖಿಸಿ ಆದೇಶ ನೀಡಿದ ನ್ಯಾಯಾಧೀಶರು, ಪುರುಷರು ಮತ್ತು ಮಹಿಳೆಯರ ಸೂಕ್ತ ನಡವಳಿಕೆ ಬಗ್ಗೆ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ನಿರೀಕ್ಷೆಗಳು ಇರುತ್ತವೆ. ಪತ್ನಿ ದಾಂಪತ್ಯದ ಸಾಮಾಜಿಕ ಜೀವನದ ಹೊಣೆ ವಹಿಸಿಕೊಳ್ಳಬೇಕು. ಪತಿಯ ಕೆಲಸದಲ್ಲಿ ಆಸಕ್ತಿ ವಹಿಸಬೇಕು. ಪತ್ನಿ-ಪತಿಯ ಚಟುವಟಿಕೆಗಳ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕು. ಪತಿಯ ಜೊತೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಸಂವಿಧಾನವನ್ನು ಉಲ್ಲೇಖಿಸುತ್ತಾ, ಪ್ರತಿಯೊಬ್ಬ ನಾಗರಿಕನು ನಮ್ಮ ಸಂಯೋಜಿತ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಗೌರವಿಸಬೇಕು ಮತ್ತು ಸಂರಕ್ಷಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಆದೇಶದಲ್ಲಿ ಮನುಸ್ಮೃತಿಯನ್ನು ಉಲ್ಲೇಖಿಸಿ, ಒಂದು ಕುಟುಂಬದ ಮಹಿಳೆಯರು ಸರಿಯಾಗಿಲ್ಲದಿದ್ದರೆ, ನೆಮ್ಮದಿಯಿಂದಿರದಿದ್ದರೆ, ಆ ಕುಟುಂಬವು ಶೀಘ್ರದಲ್ಲೇ ನಾಶವಾಗುತ್ತದೆ ಮತ್ತು ಮಹಿಳೆಯರು ತೃಪ್ತರಾಗಿರುವಲ್ಲಿ ಯಾವಾಗಲೂ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಲಾಗಿದೆ.

ದುಮ್ಕಾದಲ್ಲಿನ ಕೌಟುಂಬಿಕ ನ್ಯಾಯಾಲಯವು ತನ್ನ ಪತ್ನಿ ಮತ್ತು ಅಪ್ರಾಪ್ತ ಮಗನಿಗೆ ಜೀವನಾಂಶವನ್ನು ಪಾವತಿಸುವ ಆದೇಶವನ್ನು ಪ್ರಶ್ನಿಸಿ ವಿಚ್ಛೇದಿತ ಪತಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಸುಭಾಷ್ ಚಂದ್ ಅವರು ವಿಚ್ಛೇದಿತ ದಂಪತಿಗಳ ಮಗುವಿನ ಪೋಷಣೆಗಾಗಿ ಪಾವತಿಸಬೇಕಾದ ಮೊತ್ತವನ್ನು ತಿಂಗಳಿಗೆ 15,000 ರೂ.ಗಳಿಂದ 25,000 ರೂ.ಗಳಿಗೆ ಹೆಚ್ಚಿಸಿ ಆದೇಶವನ್ನು ನೀಡಿದೆ. ಆದರೆ ಪತ್ನಿಗೆ ಜೀವನಾಂಶಕ್ಕೆ ನಿರಾಕರಿಸಿದೆ.

Previous Post
ಪ. ಬಂಗಾಳ ತಲುಪಿದ ಭಾರತ್ ಜೋಡೋ ನ್ಯಾಯ ಯಾತ್ರೆ
Next Post
ವಿಧಾನಸಭೆಯಲ್ಲಿ ಕೇರಳ ರಾಜ್ಯಪಾಲರ ಭಾಷಣ 2 ನಿಮಿಷಕ್ಕೆ ಮುಕ್ತಾಯ

Recent News