ಮರಾಠ ಮೀಸಲಾತಿ: ತಮ್ಮದೇ ಸರಕಾರದ ವಿರುದ್ಧ ಸಿಡಿದೆದ್ದ ಸಚಿವ

ಮರಾಠ ಮೀಸಲಾತಿ: ತಮ್ಮದೇ ಸರಕಾರದ ವಿರುದ್ಧ ಸಿಡಿದೆದ್ದ ಸಚಿವ

ಮುಂಬೈ, ಜ. 27: ಮರಾಠ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಮಹರಾಷ್ಟ್ರದ ಬಿಜೆಪಿ-ಶಿವಸೇನೆ(ಶಿಂಧೆ) ಸರಕಾರ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ತಮ್ಮದೇ ಸರಕಾರದ ವಿರುದ್ಧ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಅವರು ವಾಗ್ಧಾಳಿಯನ್ನು ನಡೆಸಿದ್ದಾರೆ.

ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಮರಾಠರ ಹಿಂಬಾಗಿಲ ಪ್ರವೇಶವನ್ನು ಪ್ರಶ್ನಿಸಿರುವ ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಾರೆ. ಎಲ್ಲಾ ಮರಾಠಿಗರಿಗೆ ಕುಂಬಿ ಪ್ರಮಾಣ ಪತ್ರ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಕೇವಲ ಕಣ್ಣೊರೆಸುವ ಪ್ರಯತ್ನ ಎಂದು ಹೇಳಿದ್ದು, ಜಾತಿಯನ್ನು ಹುಟ್ಟಿನಿಂದ ನಿರ್ಧರಿಸಲಾಗುತ್ತದೆಯೇ ಹೊರತು ಅಫಿಡವಿತ್‌ಗಳಿಂದಲ್ಲ ಎಂದು ಹೇಳಿದ್ದಾರೆ.

ಮರಾಠ ಕೋಟಾಕ್ಕೆ ಹೋರಾಟ ನಡೆಸುತ್ತಿದ್ದ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರು ಇಂದು ಬೆಳಿಗ್ಗೆ ಅನಿರ್ದಿಷ್ಟಾವಧಿ ಉಪವಾಸವನ್ನು ಹಿಂತೆಗೆದುಕೊಂಡಿದ್ದರು. ಮರಾಠ ಮೀಸಲಾತಿ ಕುರಿತು ಕರಡು ಅಧಿಸೂಚನೆಯನ್ನು ಕೂಡ ಸರಕಾರ ಹೊರಡಿಸಿತ್ತು. ಮಹರಾಷ್ಟ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಭುಜಬಲ್ ಈ ಬಗ್ಗೆ ಮಾತನಾಡಿದ್ದು, ರಾಜ್ಯ ಸರ್ಕಾರವು ಎಲ್ಲಾ ಮರಾಠಿಗರಿಗೆ ಕುಂಬಿ ಪ್ರಮಾಣ ಪತ್ರ ನೀಡುವಂತೆ ಹೊರಡಿಸಿರುವ ಕರಡು ಅಧಿಸೂಚನೆ ಕಣ್ಣಿಗೆ ಮಣ್ಣೆರಚುವಂತಿದೆ. ಒಬಿಸಿಗಳಿಗೆ ಅನ್ಯಾಯವಾಗುತ್ತಿದೆಯೇ ಎಂಬುವುದು ಅಧ್ಯಯನ ನಡೆಸಬೇಕಿದೆ. ಮರಾಠ ಸಮುದಾಯದ ಬುದ್ಧಿಜೀವಿಗಳೂ ಈ ಬಗ್ಗೆ ಯೋಚಿಸಬೇಕು ಎಂದ ಅವರು, ಒಬಿಸಿ ಮೀಸಲಾತಿಗೆ ಸಮುದಾಯ ಹಿಂಬಾಗಿಲ ಪ್ರವೇಶ ಮಾಡುತ್ತಿದೆ. ಜಾತಿಯನ್ನು ಹುಟ್ಟಿನಿಂದ ನಿರ್ಧರಿಸಲಾಗುತ್ತದೆ ಮತ್ತು ಅಫಿಡವಿತ್‌ಗಳಿಂದ ಅಲ್ಲ. ಈ ವಿಷಯವನ್ನು ಚರ್ಚಿಸಲು ಭಾನುವಾರ ಎಲ್ಲಾ ಒಬಿಸಿ ನಾಯಕರನ್ನು ಮಾತುಕತೆಗೆ ಆಹ್ವಾನಿಸಿರುವುದಾಗಿ ಭುಜಬಲ್ ಹೇಳಿದ್ದಾರೆ.

ದಲಿತರು ಮತ್ತು ಆದಿವಾಸಿಗಳು ಸಹ ಎಲ್ಲಾ ರಕ್ತ ಸಂಬಂಧಿಗಳಿಗೆ ಇದೇ ರೀತಿಯ ಬೇಡಿಕೆಯನ್ನು ಮಾಡಿದರೆ ಹೇಗೆ? ಮರಾಠರಿಗೆ ಉದ್ಯೋಗ ನೇಮಕಾತಿಯಲ್ಲಿ ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ಮತ್ತು ಸಮುದಾಯದ ಸದಸ್ಯರಿಗೆ ಶೇಕಡಾ 100ರಷ್ಟು ಉಚಿತ ಶಿಕ್ಷಣವನ್ನು ನೀಡಬೇಕೆಂಬ ಜಾರಂಗೆಯ ಬೇಡಿಕೆಯ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಮರಾಠಿಗರೇ ಏಕೆ? ಬ್ರಾಹ್ಮಣರು ಸೇರಿದಂತೆ ಎಲ್ಲ ಜಾತಿಯವರಿಗೆ ಉಚಿತ ಶಿಕ್ಷಣ ನೀಡಲಿ ಎಂದು ಹೇಳಿದ್ದಾರೆ.

ಒಬಿಸಿ ವರ್ಗದಡಿ ಮರಾಠರಿಗೆ ಮೀಸಲಾತಿ ನೀಡುವುದಕ್ಕೆ ಒಬಿಸಿ ಮುಖಂಡರು ವಿರೋಧಿಸುತ್ತಲೇ ಬಂದಿದ್ದಾರೆ. ಈ ಮೊದಲು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರಗಳನ್ನು ನೀಡುವ ಸರ್ಕಾರದ ಉದ್ದೇಶಿತ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೂಡ ಹೇಳಿದ್ದರು.

ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ಅಡಿಯಲ್ಲಿ ಮರಾಠರಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಮರಾಠರಿಗೆ ಕುಂಬಿ ಪ್ರಮಾಣಪತ್ರಗಳನ್ನು ನೀಡುವುದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಮತ್ತು ಅಗತ್ಯವಿದ್ದರೆ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಒಬಿಸಿ ನಾಯಕ ಪ್ರಕಾಶ್ ಶೆಂಡ್ಗೆ ಹೇಳಿದ್ದರು.

ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಶಿಂಧೆ ಆಯೋಗಕ್ಕೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ ಎಂದು ಪ್ರಕಾಶ್ ಶೆಂಡ್ಗೆ ಹೇಳಿದ್ದರು. ಸಮಿತಿಯು ಯಾರಿಗೂ ಕುಂಬಿ ಪ್ರಮಾಣಪತ್ರಗಳನ್ನು ನೀಡುವ ಸಾಂವಿಧಾನಿಕ ಹಕ್ಕು ಹೊಂದಿಲ್ಲ. ಆ ಸ್ಥಾನಮಾನ ನೀಡಲು ಅದು ಹಿಂದುಳಿದ ವರ್ಗಗಳ ಆಯೋಗವಲ್ಲ. ಮರಾಠರು ಎಂದಿಗೂ ಹಿಂದುಳಿದಿಲ್ಲ ಮತ್ತು ಇದು ಹಲವಾರು ಬಾರಿ ಸಾಬೀತಾಗಿದೆ ಎಂದು ಹೇಳಿದ್ದರು.

Previous Post
ನಮ್ಮ ಅಪ್ಪ ಸಂಘಿ ಅಲ್ಲ: ರಜನಿಕಾಂತ್‌ ಪುತ್ರಿ ಐಶ್ವರ್ಯಾ ಹೇಳಿಕೆ
Next Post
ಮುಂಬರುವ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿದೆ.

Recent News