ಮಸೀದಿ ಧ್ವಂಸಗೊಳಿಸಿ ಮಂದಿರ ಕಟ್ಟುವುದನ್ನು ಒಪ್ಪಲ್ಲ: ಉದಯನಿಧಿ

ಮಸೀದಿ ಧ್ವಂಸಗೊಳಿಸಿ ಮಂದಿರ ಕಟ್ಟುವುದನ್ನು ಒಪ್ಪಲ್ಲ: ಉದಯನಿಧಿ

ಚೆನ್ನೈ, ಜ. 19: ‘ಡಿಎಂಕೆ ಧರ್ಮದ ವಿರುದ್ಧವಿಲ್ಲ; ಆದರೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬಾಬರಿ ಮಸೀದಿ ಧ್ವಂಸ ಮಾಡಿದ್ದನ್ನು ಪಕ್ಷವು ಕ್ಷಮಿಸಿಲ್ಲ’ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಗುರುವಾರ ಹೇಳಿದ್ದಾರೆ. ’ಇದು ನನ್ನ ಅಜ್ಜ ಮತ್ತು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ ಕರುಣಾನಿಧಿ ಅವರ ನಿಲುವು’ ಎಂದು ಅವರು ಹೇಳಿದರು.

‘ನಾವು ಯಾವುದೇ ನಂಬಿಕೆಗೆ ವಿರುದ್ಧವಾಗಿಲ್ಲ; ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಾಣದಿಂದ ನಮಗೆ ಸಮಸ್ಯೆ ಇಲ್ಲ. ಆದರೆ, ಮಸೀದಿ ಕೆಡವಿ ಮಂದಿರ ನಿರ್ಮಾಣಕ್ಕೆ ನಮ್ಮ ಸಹಮತವಿಲ್ಲ. ರಾಜಕೀಯದಲ್ಲಿ ಧರ್ಮ ಬೆರೆಸಬಾರದು’ ಎಂದು ಹೇಳಿದ್ದಾರೆ. ಜನವರಿ 22ರ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂದು ಡಿಎಂಕೆ ಖಜಾಂಚಿ ಮತ್ತು ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು ಎರಡು ದಿನಗಳ ಹಿಂದೆ ಆರೋಪಿಸಿದ್ದರು. “ಆಧ್ಯಾತ್ಮಿಕ ಘಟನೆಯನ್ನು ರಾಜಕೀಯವಾಗಿ ಪರಿವರ್ತಿಸುವ ಬಿಜೆಪಿಯ ಅಬ್ಬರದ ಪ್ರಯತ್ನವನ್ನು ಭಾರತದ ಜನರು ತಿರಸ್ಕರಿಸುತ್ತಾರೆ” ಎಂದು ಬಾಲು ಭಾನುವಾರ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ, ಹಲವಾರು ರಾಜಕಾರಣಿಗಳು, ನಟರು ಮತ್ತು ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕಾಂಗ್ರೆಸ್, ಸಿಪಿಐ(ಎಂ) ಮತ್ತು ಟಿಎಂಸಿಯಂತಹ ವಿರೋಧ ಪಕ್ಷಗಳು ಬಿಜೆಪಿಯು ಧಾರ್ಮಿಕ ಸಮಾರಂಭದಿಂದ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳುವ ಮೂಲಕ ಆಹ್ವಾನವನ್ನು ತಿರಸ್ಕರಿಸಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕರು ಜನವರಿ 13 ರಂದು ಉದಯನಿಧಿ ಅವರ ತಾಯಿ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ದೇವಸ್ಥಾನಕ್ಕೆ ಆಹ್ವಾನಿಸಿದ್ದರು.

Previous Post
ಬಿಲ್ಕಿಸ್ ಬಾನು ಪ್ರಕರಣ: ಶರಣಾಗತಿಗೆ ಕಾಲಾವಕಾಶ ನೀಡಲು ಸುಪ್ರೀಂ ನಕಾರ
Next Post
ಕೃಷಿ‌ ಮೂಲಭೂತ ಸೌಕರ್ಯ ನಿಧಿ ಸದ್ಬಳಕೆಗೆ ಎನ್.ಚಲುವರಾಯಸ್ವಾಮಿ ಕರೆ

Recent News