ಮೋದಿ OBC ಅಲ್ಲ, ಅವರು ಜಾತಿ ಬಗ್ಗೆ ಸುಳ್ಳು ಹೇಳಿದ್ದಾರೆ: ರಾಹುಲ್‌ ಗಾಂಧಿ

ಮೋದಿ OBC ಅಲ್ಲ, ಅವರು ಜಾತಿ ಬಗ್ಗೆ ಸುಳ್ಳು ಹೇಳಿದ್ದಾರೆ: ರಾಹುಲ್‌ ಗಾಂಧಿ

ಭುವನೇಶ್ವರ, ಫೆ. 7: ಭಾರತ್‌ ಜೋಡೋ ನ್ಯಾಯ ಯಾತ್ರೆ ಒಡಿಶಾದಲ್ಲಿ ಮುಂದುವರಿದಿದೆ. ಗುರುವಾರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಜಾತಿಯ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಸಾಮಾನ್ಯ ವರ್ಗಕ್ಕೆ ಸೇರಿದ್ದು, ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ ಸಮುದಾಯಕ್ಕೆ) ಸೇರಿಲ್ಲ ಎಂದು ಹೇಳಿದ್ದಾರೆ.

ಒಡಿಶಾದ ಝಾರ್ಸುಗುಡಾದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಒಬಿಸಿ ಸಮುದಾಯದಲ್ಲಿ ಹುಟ್ಟಿಲ್ಲ. ಅವರು ಗುಜರಾತ್‌ನ ತೇಲಿ ಜಾತಿಯಲ್ಲಿ ಜನಿಸಿದ್ದಾರೆ. 2000ನೇ ಇಸವಿಯಲ್ಲಿ ಬಿಜೆಪಿಯಿಂದ ಆ ಸಮುದಾಯಕ್ಕೆ ಒಬಿಸಿ ಎಂಬ ಟ್ಯಾಗ್ ನೀಡಲಾಗಿದೆ. ಅವರು ಸಾಮಾನ್ಯ ವರ್ಗದಲ್ಲಿ ಜನಿಸಿದ್ದಾರೆ ಎಂದು ಹೇಳಿದ್ದಾರೆ. ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ, ಏಕೆಂದರೆ ಅವರು ಒಬಿಸಿ ಸಮುದಾಯದಲ್ಲಿ ಹುಟ್ಟಿಲ್ಲ, ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದ್ದಾರೆ ಎಂದು ರಾಹುಲ್ ಗಾಂಧಿ ಯಾತ್ರೆಯ ವೇಳೆ ಹೇಳಿದ್ದಾರೆ.

ಒಡಿಶಾದಲ್ಲಿ ನಿನ್ನೆ ಭಾರತ್‌ ಜೊಡೋ ನ್ಯಾಯ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಬಿಜೆಪಿ ಮತ್ತು ಬಿಜೆಡಿ ಪಾಲುದಾರಿಕೆಯನ್ನು ಹೊಂದಿದೆ, ರಾಜ್ಯದ ಜನರ ಹಿತಾಸಕ್ತಿ ಕಾಪಾಡಲು ನಾವು ಬಿಜೆಪಿ ಮತ್ತು ಬಿಜೆಡಿಯನ್ನು ವಿರೋಧಿಸುತ್ತಿದ್ದೇವೆ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಮತ್ತು ನರೇಂದ್ರ ಮೋದಿ ಪಾಲುದಾರಿ ಸರಕಾರವನ್ನು ಹೊಂದಿದ್ದಾರೆ. ಅವರಿಬ್ಬರೂ ಕೈ ಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಬಿಜೆಡಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ನಾನು ಸಂಸತ್ತಿನಲ್ಲಿ ಕಂಡುಕೊಂಡಿದ್ದೇನೆ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾನು ಒಡಿಶಾಗೆ ಬಂದಿದ್ದೇನೆ. ರಾಜ್ಯದಿಂದ 30 ಲಕ್ಷ ಜನರು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ಕಾರ್ಮಿಕರಾಗಿ ವಲಸೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಒಡಿಶಾದಲ್ಲಿ ಬುಡಕಟ್ಟು ಜನಾಂಗದ ಹೆಚ್ಚಿನ ಜನಸಂಖ್ಯೆ ಇದೆ. ದಲಿತರ ಜೊತೆಗೆ ಬುಡಕಟ್ಟು ಜನರನ್ನು ಕೂಡ ಸರ್ಕಾರವು ರಾಜ್ಯದಲ್ಲಿ ನಿರ್ಲಕ್ಷಿಸಿದೆ. ನಾನು 6-7 ಗಂಟೆಗಳ ಕಾಲ ನಿಮ್ಮ ‘ಮಾನ್ ಕಿ ಬಾತ್’ ಕೇಳಲು ಮತ್ತು 15 ನಿಮಿಷಗಳ ಕಾಲ ಸ್ವಲ್ಪ ಮಾತನಾಡಲು ಇಲ್ಲಿಗೆ ಬಂದಿದ್ದೇನೆ. ಕೈಗಾರಿಕೆಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಒಡಿಶಾದ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಭಾರತ್ ಜೋಡೋ ನ್ಯಾಯ ಯಾತ್ರೆಯು ನೆರೆಯ ಒಡಿಶಾದಿಂದ ಇಂದು ಛತ್ತೀಸ್‌ಗಢವನ್ನು ಪ್ರವೇಶಿಸಲಿದೆ. ಇದು ನವೆಂಬರ್ 2023ರ ವಿಧಾನಸಭೆ ಚುನಾವಣೆಯ ನಂತರ ಛತ್ತೀಸ್‌ಗಢಕ್ಕೆ ರಾಹುಲ್‌ ಗಾಂಧಿಯವರ ಮೊದಲ ಭೇಟಿಯಾಗಿದೆ. ಜನವರಿ 14ರಂದು ಮಣಿಪುರದಿಂದ ಆರಂಭವಾದ ಯಾತ್ರೆ ಎರಡು ದಿನಗಳ ವಿರಾಮದ ಬಳಿಕ ಫೆ.11ರಂದು ರಾಯ್‌ಗಢ, ಶಕ್ತಿ ಮತ್ತು ಕೊರ್ಬಾ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 14ರಂದು ಯಾತ್ರೆಯು ಬಲರಾಂಪುರದಿಂದ ಜಾರ್ಖಂಡ್‌ಗೆ ತೆರಳಲಿದೆ.

Previous Post
ರೈತರಿಗೆ ಆತ್ಮಹತ್ಯೆ ಭಾಗ್ಯ, ಶಾಸಕರಿಗೆ ನಾಳೆ ಬಾ ಫಲಕ: ಆರ್‌ ಅಶೋಕ್‌ ವಾಗ್ದಾಳಿ
Next Post
ಕೇಂದ್ರದ ಶ್ವೇತಪತ್ರಕ್ಕೆ ಕಾಂಗ್ರೆಸಿನ‌ ಕಪ್ಪುಪತ್ರದ ಕೌಂಟರ್

Recent News