ಮೋಹಲ್ಲಾಗಳಿಗೆ ರೂ.1,000 ಕೋಟಿ: ಈ ವಿಚಾರದಲ್ಲಿ ಸಿಎಂ-ಡಿಸಿಎಂ ಮಧ್ಯೆ ಪೈಪೋಟಿ?

ಮೋಹಲ್ಲಾಗಳಿಗೆ ರೂ.1,000 ಕೋಟಿ: ಈ ವಿಚಾರದಲ್ಲಿ ಸಿಎಂ-ಡಿಸಿಎಂ ಮಧ್ಯೆ ಪೈಪೋಟಿ?

ಬೆಂಗಳೂರು, ಜನವರಿ 29: ರಾಜ್ಯದ ರೈತರಿಗೆ ಪರಿಹಾರ ನೀಡಲು ಹಣವಿಲ್ಲದ ರಾಜ್ಯ ಸರ್ಕಾರವು ಮೊಹಲ್ಲಾಗಳಿಗೆ ಕೋಟಿಗಟ್ಟಲೇ ಅನುದಾನ ನೀಡಲು ಮುಂದಾಗಿರುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಧೋರಣೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸಿಎಂ ಹಾಗೂ ಡಿಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಮುಸ್ಲಿಮರ ಓಲೈಕೆಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾರಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸೋಮವಾರ ಟ್ವೀಟ್ ಮೂಲಕ ಹರಿಹಾಯ್ದರು.

ಮೊನ್ನೆಯಷ್ಟೇ ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಮುಸ್ಲಿಮರ ದಯೆಯಿಂದ ಎಂದು ಹಿಂದೂ ಮತದಾರರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಪಮಾನ ಮಾಡಿದ್ದರು. ಅವರ ಮೇಲೆ ಪೈಪೋಟಿಗೆ ಬಿದ್ದವರಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋಹಲ್ಲಾ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಮೋಹಲ್ಲಾಗಳಿಗೆ ಕೊಡಲು ಹಣವಿದೆ ಮೋಹಲ್ಲಾಗಳಿಗೆ 1000 ಕೋಟಿ ರೂಪಾಯಿ ನೀಡಲು ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಳಿ ಹಣ ಇದೆ. ಆದರೆ ಬರ ಬಂದು ಎಂಟು ತಿಂಗಳಾದರೂ ರೈತರಿಗೆ 2,000 ರೂಪಾಯಿ ಪರಿಹಾರ ನೀಡಲು ಹಣವಿಲ್ಲ ಎಂದು ಆಡಳಿತವನ್ನು ಅವರು ದೂರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಸ್ಲಿಮರ ತುಷ್ಟೀಕರಣ ಮಾಡಲು ನಿಮ್ಮ ಭಾರತೀಯ ಕಾಂಗ್ರೆಸ್‌ ಪಕ್ಷ ಯಾವ ಮಟ್ಟಕ್ಕಾದರೂ ಹೋಗುತ್ತದೆ ಎಂದು ಪದೇ ಪದೇ ನಿರೂಪಿಸುತ್ತಲೇ ಇದ್ದೀರಿ. ಆದರೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಅನ್ನ ನೀಡುವ ರೈತರನ್ನೂ ನಿಮ್ಮ ಓಲೈಕೆ ರಾಜಕಾರಣದಲ್ಲಿ ಬಲಿಪಶು ಮಾಡಬೇಡಿ ಎಂದು ಸಲಹೆ ನೀಡಿದರು.

ನಿಮ್ಮ ಹೃದಯ ಕರಗಲು ಇನ್ನೆಷ್ಟು ರೈತರ ಬಲಿಯಾಗಬೇಕು? ಬರದಿಂದ ಹೈರಾಣಾಗಿ ಕರ್ನಾಟಕದಲ್ಲಿ 800ಕ್ಕೂ ಹೆಚ್ಚು ರೈತರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ಕೃಷಿ ಕಾರ್ಮಿಕರು ಮನೆ-ಮಠ ಬಿಟ್ಟು ಗುಳೆ ಹೋಗಿದ್ದಾರೆ. ತಮ್ಮ ಕಲ್ಲು ಹೃದಯ ಕರಗಲು ಇನ್ನೆಷ್ಟು ರೈತರ ಬಲಿಯಾಗಬೇಕು? ಈ ಕೂಡಲೇ ರೈತರ ಖಾತೆಗೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಿ. ನಿಮ್ಮ ಕೈಲಾಗಾದಿದ್ದರೆ ರಾಜೀನಾಮೆ ಕೊಟ್ಟು ಮನಗೆ ನಡೆಯಿರಿ ಎಂದು ಅವರು ಕಿಡಿ ಕಾರಿದ್ದಾರೆ. ಬರಪರಿಹಾರಕ್ಕಾಗಿ ಪರಸ್ಪರ ವಾಗ್ದಾಳಿ ರಾಜ್ಯದಲ್ಲಿ 190ಕ್ಕೂ ಅಧಿಕ ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಇದರ ಬೆನ್ನಲ್ಲಿ ರೈತರಿಗೆ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಬಿಜೆಪಿ ದೂರಿದೆ. ಇತ್ತ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡುತ್ತಿದೆ. ಪರಿಹಾರ ನಿಯಮಗಳಿಗೆ ತಿದ್ದುಪಡಿ ತರಬೇಕು ಅಂತಲೂ ಸಿಎಂ ಹೇಳಿದ್ದರು. ಇದಾದ ಬಳಿಕ ಹಲವು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಪರಿಹಾರ, ಕೇಂದ್ರದ ಅನುದಾನ ಬಿಡುಗಡೆ ಲೆಕ್ಕಚಾರವನ್ನು ಜನರ ಮುಂದಿಟ್ಟಿದ್ದರು.

Previous Post
ಮುಂದಿನ 7 ದಿನದಲ್ಲಿ ‘ಸಿಎಎ’ ಜಾರಿ: ಕೇಂದ್ರ ಸರ್ಕಾರ
Next Post
ಕಾಡಿನ ಬೆಂಕಿ ಪತ್ತೆಗೆ ದೂರಸಂವೇದಿ ತಂತ್ರಜ್ಞಾನದ ಬಳಕೆ ಕಾಡ್ಗಿಚ್ಚು ನಿಗ್ರಹಕ್ಕೆ ಕಟ್ಟೆಚ್ಚರ ವಹಿಸಲು ಈಶ್ವರ ಖಂಡ್ರೆ ಸೂಚನೆ

Recent News