ರಂಜಿತ್‌ ಹತ್ಯೆ ಪ್ರಕರಣ: 15 ಅಪರಾಧಿಗಳಿಗೆ ಮರಣದಂಡನೆ

ರಂಜಿತ್‌ ಹತ್ಯೆ ಪ್ರಕರಣ: 15 ಅಪರಾಧಿಗಳಿಗೆ ಮರಣದಂಡನೆ

ತಿರುವನಂತಪುರಂ, ಜ. 30: ಆಲಪ್ಪುಝದಲ್ಲಿ ನಡೆದಿದ್ದ ಬಿಜೆಪಿಯ ರಂಜೀತ್ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ 15 ಅಪರಾಧಿಗಳಿಗೆ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಕೇರಳದ ಇತಿಹಾಸದಲ್ಲಿ ಈ ರೀತಿ ಒಂದು ಪ್ರಕರಣದಲ್ಲಿ ಇಷ್ಟು ಮಂದಿ ಅಪರಾಧಿಗಳಿಗೆ ಯಾವುದೇ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿಲ್ಲ.

ಡಿಸೆಂಬರ್ 19, 2021ರಂದು ನಡೆದಿದ್ದ ಬಿಜೆಪಿ ನಾಯಕ ಮತ್ತು ವಕೀಲ ರಂಜೀತ್ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸಫರುದ್ದೀನ್, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಝೀರ್, ಜಾಕೀರ್ ಹುಸೇನ್, ಶಾಜಿ ಪೂವತುಂಗಲ್ ಮತ್ತು ಶೆರ್ನಾಸ್ ಅಶ್ರಫ್ ಅವರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಶ್ರೀದೇವಿ ವಿ ಜಿ ಅವರು ಅಪರಾಧಿಗಳ ಮಾತುಗಳನ್ನು ಆಲಿಸಿದ್ದು, ಶಿಕ್ಷೆಯ ಪ್ರಮಾಣದ ಕುರಿತು ವಾದಗಳ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಗರಿಷ್ಠ ಶಿಕ್ಷೆಯನ್ನು ನೀಡುವಂತೆ ನ್ಯಾಯಾಲಯವನ್ನು ಕೇಳಿಕೊಂಡಿದ್ದರು. ಆದರೆ ಆರೋಪಿಗಳ ಪರ ವಕೀಲರು ಮರಣದಂಡನೆಯನ್ನು ಸಮರ್ಥಿಸುವ ರೀತಿಯಲ್ಲಿನ ಅಪರೂಪದ ವರ್ಗದ ಅಡಿಯಲ್ಲಿ ಈ ಪ್ರಕರಣವು ಸೇರುವುದಿಲ್ಲ ಎಂದು ಹೇಳಿದ್ದರು. ತೀರ್ಪಿನ ವೇಳೆ ನ್ಯಾಯಾಲಯವು ಅಪರಾಧಿಗಳನ್ನು ಅಲಪ್ಪುಝದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಾನಸಿಕ ಸ್ಥಿರತೆ ಪರೀಕ್ಷೆಗೆ ಒಳಪಡಿಸುವಂತೆ ಕೂಡ ಹೇಳಿದೆ.

ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗವಹಿಸಿದ 8 ಆರೋಪಿಗಳು ಸೆಕ್ಷನ್ 302 (ಕೊಲೆ), 149 (ಕಾನೂನುಬಾಹಿರ ಸಭೆ), 449 (ಮರಣದಂಡನೆಗೆ ಒಳಪಡುವ ಅಪರಾಧವನ್ನು ಮಾಡಲು ಮನೆ ಅತಿಕ್ರಮಣ), 506 (ಅಪರಾಧ ಬೆದರಿಕೆ) ಮತ್ತು 341 ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್‌ಗಳಡಿಯಲ್ಲಿ ಅಪರಾಧ ಸಾಬೀತಾಗಿದೆ.

ಕೃತ್ಯದ ವೇಳೆ ಮಾರಕಾಯುಧಗಳೊಂದಿಗೆ ಬಿಜೆಪಿಯ ನಾಯಕನ ಮನೆಯ ಹೊರಗೆ ಕಾಯುತ್ತಿದ್ದ ಆರೋಪಿಗಳನ್ನು ಐಪಿಸಿಯ ಸೆಕ್ಷನ್ 302 ಆರ್/ಡಬ್ಲ್ಯೂ 149 ಮತ್ತು 447 (ಕ್ರಿಮಿನಲ್ ಅತಿಕ್ರಮಣ) ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿದೆ. ಪ್ರಮುಖ ಸಂಚುಕೋರರಾದ ಜಾಕಿರ್ (13 ನೇ ಆರೋಪಿ), ಶಾಜಿ (14 ನೇ ಆರೋಪಿ), ಮತ್ತು ಶೆರ್ನಾಸ್ (15 ನೇ ಆರೋಪಿ) ಕ್ರಮವಾಗಿ ಐಪಿಸಿ ಸೆಕ್ಷನ್ 120 ಬಿ ಮತ್ತು 302ರಡಿಯಲ್ಲಿ ತಪ್ಪಿತಸ್ಥರೆಂದು ಕೋರ್ಟ್‌ ಹೇಳಿದೆ.

ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಮತ್ತು ವಕೀಲ ರಂಜೀತ್ ಅವರನ್ನು ಆಲಪ್ಪುಝದ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ಅವರ ನಿವಾಸದಲ್ಲಿ ಆರೋಪಿಗಳು ಡಿಸೆಂಬರ್ 19, 2021ರಂದು ಬೆಳಿಗ್ಗೆ ಅವರ ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಕ್ಕೂ ಮೊದಲು ಮನ್ನಂಚೇರಿಯ ಕುಪ್ಪೆಝಂ ಜಂಕ್ಷನ್‌ನಲ್ಲಿ ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಅವರನ್ನು ಸಂಘಪರಿವಾರದ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಕೆ ಎಸ್ ಶಾನ್ ಹತ್ಯೆಗೆ ರಂಜೀತ್ ಹತ್ಯೆ ಪ್ರತಿಕಾರವೆಂದು ಹೇಳಾಗಿತ್ತು. ಶಾನ್ ಕೊಲೆ ಪ್ರಕರಣದ ವಿಚಾರಣೆ ಫೆಬ್ರವರಿ 2ರಂದು ಪ್ರಾರಂಭವಾಗಲಿದೆ. ಪೊಲೀಸರು ಮಾರ್ಚ್ 16, 2022 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದರೂ, ವಿಶೇಷ ಅಭಿಯೋಜಕರನ್ನು ನೇಮಿಸುವಲ್ಲಿ ವಿಳಂಬವಾದ ಕಾರಣ ವಿಚಾರಣೆ ವಿಳಂಬವಾಗಿದೆ. ಮೊದಲೆರಡು ವಿಶೇಷ ಅಭಿಯೋಜಕರು ತಮ್ಮ ನೇಮಕಾತಿಯಿಂದ ಹಿಂದೆ ಸರಿದಿದ್ದರು. ಕಳೆದ ವಾರವಷ್ಟೇ ಆ ಹುದ್ದೆಗೆ ಅಡ್ವಕೇಟ್‌ ಪಿ ಪಿ ಹ್ಯಾರಿಸ್ ಅವರನ್ನು ನೇಮಿಸಲಾಗಿತ್ತು.

Previous Post
ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಹೋದಲ್ಲೆಲ್ಲಾ ಮಮತಾ ಪಾದಯಾತ್ರೆ
Next Post
ಜೆ.ಪಿ ನಡ್ಡಾ ಭೇಟಿಯಾದ ಮಾಜಿ ಸಚಿವ ಡಾ.ಕೆ.ಸುಧಾಕರ್

Recent News