ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಸಾರಿದೆಯಾ ಬ್ರಿಟನ್?

ರಷ್ಯಾ ವಿರುದ್ಧ ಪರೋಕ್ಷ ಯುದ್ಧ ಸಾರಿದೆಯಾ ಬ್ರಿಟನ್?

ಅಮೆರಿಕ ಹಾಗೂ ಸ್ನೇಹಿತರು ರಷ್ಯಾ ವಿರುದ್ಧ ಒಕ್ಕೂಟ ರಚಿಸಿಕೊಂಡಿದ್ದಾರೆ. ಉಕ್ರೇನ್ VS ರಷ್ಯಾ ಯುದ್ಧದಲ್ಲಿ ಇವರೆಲ್ಲಾ ರಷ್ಯಾ ವಿರುದ್ಧ ಹಾಗೂ ಉಕ್ರೇನ್ ಪರ ನಿಂತಿದ್ದಾರೆ. ಯುದ್ಧ ಆರಂಭವಾಗಿ ಇನ್ನೇನು 2 ವರ್ಷ ಕೂಡ ತುಂಬುತ್ತಿದೆ. ಹೀಗಿದ್ದಾಗಲೇ ರಷ್ಯಾ ವಿರುದ್ಧ ಈಗ ಬ್ರಿಟನ್, ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ಪರೋಕ್ಷವಾಗಿ ರಷ್ಯಾ ವಿರುದ್ಧ ಯುದ್ಧ ಸಾರಿದೆಯಾ? ಎಂಬ ಪ್ರಶ್ನೆ ಮೂಡಿದೆ. ಹೌದು, ಬ್ರಿಟನ್ ಕೂಡ ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಹೀಗಿದ್ದಾಗ ದಿಢೀರ್ ನ್ಯಾಟೋ ಒಕ್ಕೂಟದ ಸೇನೆಯ ಸಮರಭ್ಯಾಸಕ್ಕೆ ತನ್ನ 20,000 ಸೈನಿಕರನ್ನು ಕಳುಹಿಸೋಕೆ ಮುಂದಾಗಿದೆ ಬ್ರಿಟನ್. ಹೀಗೆ ನ್ಯಾಟೋ ನಡೆಸುವ ಸಮರಭ್ಯಾಸ ಪೂರ್ವ ಯುರೋಪಿನಲ್ಲಿ ಅದರಲ್ಲೂ ರಷ್ಯಾದ ಗಡಿಯ ಸಮೀಪವೇ ನಡೆಯಲಿದೆ ಎನ್ನುವುದು ವಿಶೇಷ. ಈ ಮೂಲಕ ರಷ್ಯಾಗೆ ಬ್ರಿಟನ್ ಕೂಡ ಪರೋಕ್ಷ ಎಚ್ಚರಿಕೆ ನೀಡುತ್ತಿರುವಂತೆ ಕಂಡು ಬರುತ್ತಿದೆ. ಅದ್ರಲ್ಲೂ ಯುದ್ಧದ ಬೆಂಕಿ ಧಗಧಗಿಸುವ ಸಮಯಕ್ಕೇ ಈ ಬೆಳವಣಿಗೆ ನಡೆದಿರುವುದು ಅಚ್ಚರಿಗೆ ಕೂಡ ಕಾರಣವಾಗಿದೆ.

ರಷ್ಯಾ ವಿಮಾನ ಉಡಾಯಿಸಿದ ಉಕ್ರೇನ್? ಇಷ್ಟೆಲ್ಲದರ ನಡುವೆ ರಷ್ಯಾ VS ಉಕ್ರೇನ್ ಯುದ್ಧ ಕೂಡ ಎಗ್ಗಿಲ್ಲದೆ ಸಾಗಿದೆ. ಈ ಹೊತ್ತಲ್ಲಿ ರಷ್ಯಾಗೆ ಸೇರಿರುವ ಎ-50 (A-50) ಗೂಢಾಚಾರ ವಿಮಾನ ಹೊಡೆದು ಉರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಇದು ರಷ್ಯಾ ಸೇನೆಯನ್ನ ಮತ್ತಷ್ಟು ಬಡಿದೆಬ್ಬಿಸಿದ್ದು, ದಾಳಿಯ ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉಕ್ರೇನ್ ತನ್ನ ಗಡಿಯಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿದೆ. ಮತ್ತೊಂದು ಕಡೆ ಬ್ರಿಟನ್ ನಿರ್ಧಾರ ರಷ್ಯಾಗೆ ಇನ್ನಷ್ಟು ಸಿಟ್ಟನ್ನು ತರಿಸುವ ಸಾಧ್ಯತೆ ಕೂಡ ಇದೆ.

ಹಣದ ಜೊತೆ ಸೇನಾ ಸಹಾಯ? ರಷ್ಯಾ & ಉಕ್ರೇನ್ ಯುದ್ಧ ಈ ಜಗತ್ತಿಗೆ ಒಂದು ಗತಿ ಕಾಣಿಸಲು ಸಜ್ಜಾದಂತೆ ಕಾಣುತ್ತಿದ್ದು ಇದೇ ಮಾತಿಗೆ ಪುಷ್ಟಿ ನೀಡುವ ಘಟನೆಗಳು ಅಲ್ಲಿ ಪ್ರತಿದಿನ ನಡೆಯುತ್ತಿವೆ. ಅದರಲ್ಲೂ ಇಬ್ಬರ ಮಧ್ಯೆ ಘನಘೋರ ಅಸ್ತ್ರಗಳ ಬಳಕೆ ಕೂಡ ಆಗುತ್ತಿರುವುದು ಈ ಭಯ ಹೆಚ್ಚಾಗಿಸುತ್ತಿದೆ.

ರಷ್ಯಾ ಹಾಗೂ ಉಕ್ರೇನ್ ಪರಸ್ಪರ ಡ್ರೋನ್‌ಗಳ ಮೂಲಕ ಬಡಿದಾಡುತ್ತಿವೆ. ಹೀಗಿದ್ದಾಗ ಕೆಲ ದಿನಗಳ ಹಿಂದೆ, ಇದೇ ಬ್ರಿಟನ್ ಪ್ರಧಾನಿ ಉಕ್ರೇನ್‌ಗೆ ಮತ್ತಷ್ಟು ಸಹಾಯದ ಭರವಸೆ ನೀಡಿದ್ರು. 26 ಸಾವಿರ ಕೋಟಿ ವೆಚ್ಚದ ಸಹಾಯಕ್ಕೆ ಬ್ರಿಟನ್ ಮುಂದಾಗಿತ್ತು. ಈಗ ದಿಢೀರ್ ನ್ಯಾಟೋ ಪಡೆಯಿಂದ ನಡೆಯುವ ಸಮರಭ್ಯಾಸಕ್ಕೆ ತನ್ನ ಸೈನಿಕರನ್ನು ಕಳುಹಿಸಲು ಬ್ರಿಟನ್ ಮುಂದಾಗಿದೆ. ಒಟ್ಟಾರೆ ರಷ್ಯಾ & ಉಕ್ರೇನ್ ಯುದ್ಧ ಭೀಕರವಾಗುತ್ತಿರುವ ಸಮಯದಲ್ಲೇ ಈ ಬೆಳೆವಣಿಗೆಯ ಮೇಲೆ ಇಡೀ ಜಗತ್ತು ಕಣ್ಣಿಟ್ಟಿದೆ. ಬ್ರಿಟನ್‌ ನಿರ್ಧಾರಕ್ಕೆ ರಷ್ಯಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಅದರಲ್ಲೂ ಈ ವಿಚಾರದಲ್ಲಿ ವಿಶ್ವಸಂಸ್ಥೆ ಸುಸ್ತಾಗಿದೆ ಯಾಕಂದ್ರೆ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಮಾಡಿದ ಪ್ರಯತ್ನಗಳು ವಿಫಲವಾಗಿವೆ.

Previous Post
ತೈವಾನ್ ತಿಕ್ಕಾಟ, ಚೀನಾ ಕೊಟ್ಟ ವಾರ್ನಿಂಗ್ ಏನು ಗೊತ್ತೆ?
Next Post
ಶ್ರೀರಾಮ ಮಂದಿರದ ಸಾರ್ವಜಕರ ಪ್ರವೇಶಕ್ಕೆ ದಿನಾಂಕ ಫಿಕ್ಸ್

Recent News